ಮೆಂಟಲ್ ಪಾತ್ರದಲ್ಲಿ ಕೋಮಲ್ ನಗೆ ಬಾಂಬ್

ಇಳಯರಾಜ|
PR
ನಾಯಕನಾಗಿ ದಿನದಿಂದ ದಿನಕ್ಕೆ ಆಳೆತ್ತರಕ್ಕೆ ಬೆಳೆಯುತ್ತಿರುವ ಕೋಮಲ್ ಕುಮಾರ್ ಈಗ ಮಲಯಾಳಂ ಚಿತ್ರವೊಂದರ ರಿಮೇಕಿಗೆ ಬಣ್ಣ ಹಚ್ಚಲು ಹೊರಟಿದ್ದಾರೆ. ದಿಲೀಪ್ ಮತ್ತು ಕಾವ್ಯಾ ಮಾಧವನ್ ನಟಿಸಿದ್ದ ಮಲಯಾಳಿ ಹಾಸ್ಯ ಚಿತ್ರ 'ತಿಲಕಂ' ಅವರು ಒಪ್ಪಿಕೊಂಡಿರುವ ಸಿನಿಮಾ.

ಜಯರಾಜ್ ನಿರ್ದೇಶನದ 'ತಿಲಕಂ' 2003ರಲ್ಲಿ ಬಿಡುಗಡೆಯಾಗಿತ್ತು. ಬರೋಬ್ಬರಿ 9 ವರ್ಷಗಳ ನಂತರ ಅದನ್ನೀಗ ಕನ್ನಡಕ್ಕೆ ರಿಮೇಕಿಸಲಾಗುತ್ತಿದೆ. ಬಾಲ್ಯದಲ್ಲೇ ಕಳೆದು ಹೋಗಿರುವ ಬಾಲಕ ಕೈಗೆ ಸಿಕ್ಕಿದಾಗ ಮಾನಸಿಕ ಅಸ್ವಸ್ಥನಾಗಿರುತ್ತಾನೆ. ಆರೈಕೆ ಮಾಡುವ ನಾಯಕಿ ಆತನಲ್ಲಿ ಅನುರಕ್ತಳಾಗುತ್ತಾಳೆ. ಇದೇ ಚಿತ್ರದ ಕಥೆಯ ಎಳೆ. ಈ ಪಾತ್ರದಲ್ಲಿ ದಿಲೀಪ್ ಮತ್ತು ಕಾವ್ಯಾ ಮಾಧವನ್ ಅಮೋಘವಾಗಿ ಅಭಿನಯಿಸಿದ್ದರು.
ಇದೇ ಚಿತ್ರವೀಗ ಕನ್ನಡಕ್ಕೆ ಬರುತ್ತಿದೆ. ನಾಯಕ ಕೋಮಲ್ ಕುಮಾರ್ ಅನ್ನೋದು ಗ್ಯಾರಂಟಿ. ಆದರೆ ನಾಯಕಿ ಯಾರೆನ್ನುವುದು ಇನ್ನೂ ಗೊತ್ತಾಗಿಲ್ಲ. ನಿರ್ದೇಶಿಸುತ್ತಿರುವುದು ಸೆಂಟಿಮೆಂಟ್ ಚಿತ್ರಗಳ ಸರದಾರ ಸಾಯಿ ಪ್ರಕಾಶ್.

ಎವರೇಜ್ ನಟ ಎಂದು ಕರೆಸಿಕೊಳ್ಳುತ್ತಿರುವ ಕೋಮಲ್‌ರನ್ನು ನಂಬಿ ಹಣ ಸುರಿಯುತ್ತಿರುವವರು ರಾಜೇಶ್ ಮತ್ತು ರಮೇಶ್ ಎಂಬ ಹೊಸ ನಿರ್ಮಾಪಕರು. ಇನ್ನೊಬ್ಬರು ಕೂಡ ಇವರ ಜತೆ ಕೈ ಜೋಡಿಸಿದ್ದಾರಂತೆ.
ಸಾಯಿ ಪ್ರಕಾಶ್‌ಗೆ ಕೋಮಲ್ ಹೊಸತಲ್ಲ. ಆದರೆ ನಾಯಕನಾಗಿ ಹೊಸತು. ಇಬ್ಬರ ನಡುವಿನ ಕೆಮೆಸ್ಟ್ರಿ ಚೆನ್ನಾಗಿಯೇ ಕೆಲಸ ಮಾಡಿರುವ ಇತಿಹಾಸ ಇರುವುದರಿಂದ, ಅತ್ಯುತ್ತಮ ಚಿತ್ರವೊಂದು ಹೊರಗೆ ಬರುವ ನಿರೀಕ್ಷೆಗಳಿವೆ. ಈ ಬಗ್ಗೆ ಆಶಾವಾದದಿಂದಲೇ ಸಾಯಿ ಪ್ರಕಾಶ್ ಮಾತನಾಡಿದ್ದಾರೆ.

ಈ ಚಿತ್ರದ ಮೂಲಕ ಕೋಮಲ್ ಹೊಸ ಇಮೇಜ್ ಪಡೆಯಲಿದ್ದಾರೆ ಅನ್ನೋದು ನಿರ್ದೇಶಕರ ನಿರೀಕ್ಷೆ. ಪಕ್ಕಾ ಕಾಮಿಡಿಯಾಗಿದ್ದರೂ, ಅಷ್ಟೇ ಸೆಂಟಿಮೆಂಟ್ ಇರುವುದರಿಂದ ತನ್ನ ಪ್ರೇಕ್ಷಕ ವರ್ಗವನ್ನು ತಲುಪುವುದು ಕಷ್ಟವಲ್ಲ ಅನ್ನುತ್ತಾರವರು.
ನಾಯಕಿ ಇನ್ನಷ್ಟೇ ಆಯ್ಕೆಯಾಗಬೇಕು. ಉಳಿದಂತೆ ಚಿತ್ರದಲ್ಲಿ ಬುಲೆಟ್ ಪ್ರಕಾಶ್, ಸಾಧು ಕೋಕಿಲಾ, ತಬಲನಾಣಿ, ರಾಜು ತಾಳಿಕೋಟೆ ಮುಂತಾದ ಹಾಸ್ಯ ನಟರ ದಂಡೇ ಇದೆ. ಏಪ್ರಿಲ್ 6ಕ್ಕೆ ಚಿತ್ರ ಸೆಟ್ಟೇರಲಿದೆಯಂತೆ.


ಇದರಲ್ಲಿ ಇನ್ನಷ್ಟು ಓದಿ :