ಕೋಮಲ್ ಕೂಡ ಟಿವಿಗೆ ಬರ್ತಿದ್ದಾರೆ, ನಗಿಸೋದಿಕ್ಕೆ!

ನಾಗರಾಜ ಬಿ.|
SUJENDRA

ಹಿರಿತೆರೆಯಲ್ಲಿ ಜನಪ್ರಿಯರಾದವರು ಕಿರುತೆರೆಗೆ ಬರುವುದು ಈಗೀಗ ಮಾಮೂಲಿ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇನ್ನೇನು ಬರಲಿದ್ದಾರೆ ಅನ್ನೋ ಸುದ್ದಿಯ ನಡುವೆಯೇ ಕಾಮಿಡಿ ಕಿಂಗ್ ಕೋಮಲ್ ಕುಮಾರ್ ಕೂಡ ಬರುತ್ತಿದ್ದಾರೆ. ಪುನೀತ್ ಕೋಟಿ ಕೋಟಿ ಲೆಕ್ಕ ಮಾಡಲು ಬಂದರೆ, ಕೋಮಲ್ ಬರೋದು ನಗಿಸಲು!

ಕೋಮಲ್ ಹೀಗೆ ನಗಿಸಲು ಬರುತ್ತಿರುವುದು 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ. ಝೀ ಕನ್ನಡದಲ್ಲಿ ಇದೇ ಫೆಬ್ರವರಿ 16ರಿಂದ ವಾರಕ್ಕೆ ಎರಡು ಸಲ ರಾತ್ರಿ ಒಂಬತ್ತು ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
ನಗಿಸುವುದರಲ್ಲೇ ಸ್ವರ್ಗ ಕಾಣುತ್ತಿರುವ ಕೋಮಲ್ ಈಗ ಬೆಳ್ಳಿತೆರೆಯಲ್ಲೂ ಬಹು ಬೇಡಿಕೆಯ ನಟ. ಈಗ 'ಪ್ಯಾರ್ಗೆ ಆಗ್ಬಿಟ್ಟೈತೆ' ಅನ್ನೋ ಹಾಡಿನಲ್ಲಂತೂ ಅವರೀಗ ಸಿಕ್ಕಾಪಟ್ಟೆ ಫೇಮಸ್. ಅದರ ನಡುವೆಯೇ ಕಿರುತೆರೆಯಲ್ಲೂ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ. ಇಲ್ಲಿ ಅವರು ತೆಗೆದುಕೊಂಡಿರುವ ಇನ್ನೊಂದು ರಿಸ್ಕ್, ಕಾರ್ಯಕ್ರಮದ ನಿರ್ಮಾಣ. ಹೌದು, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮವನ್ನು ಸ್ವತಃ ಕೋಮಲ್ ನಿರ್ಮಿಸುತ್ತಿದ್ದಾರೆ.
ಸುಮಾರು 300ಕ್ಕೂ ಹೆಚ್ಚು ಟೀಮ್‌ಗಳಿಂದ ಜೊಳ್ಳುಗಳನ್ನು ಬಿಟ್ಟಾಗ ಉಳಿದುಕೊಂಡಿರುವುದು 13 ಮಾತ್ರ. ಈ 13 ತಂಡಗಳು ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಕಾಣಿಸಿಕೊಳ್ಳಲಿವೆ. ಸ್ವತಃ ಕೋಮಲ್ ಒಬ್ಬ ಜಡ್ಜ್. ಕಾಮಿಡಿ ಕಿಲಾಡಿಗಳ ಜತೆ ಕೋಮಲ್ ಹಾಸ್ಯವೂ ಸೇರಿದರೆ ಟಿವಿ ವೀಕ್ಷಕರು ಮೆಚ್ಚಿಕೊಳ್ಳದೆ ಇರಲು ಸಾಧ್ಯವೇ ಇಲ್ಲ ಅನ್ನೋದು ತಂಡದ ನಿರೀಕ್ಷೆ.

ಅಂದ ಹಾಗೆ, ಕೋಮಲ್ ಝೀ ಟಿವಿಗೆ ಇಂತಹ ಕಾರ್ಯಕ್ರಮ ಮಾಡಿ ಕೊಡಲು ಒಪ್ಪಿರುವುದರ ಹಿಂದೆ, ತನ್ನ 'ಮಿ. ಗರಗಸ'ದ ನೆರಳಿದೆ. ಆ ಚಿತ್ರವನ್ನು ಝೀ ಕನ್ನಡದವರು 55 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದರು. ಅಚ್ಚರಿಯೆಂದರೆ 50ಕ್ಕೂ ಹೆಚ್ಚು ಸಲ ಅದು ಪ್ರಸಾರವಾಗಿದೆ ಅನ್ನೋದು. ಈ ಪ್ರೀತಿ ಕೋಮಲ್‌ರನ್ನು ಕಟ್ಟಿ ಹಾಕಿದೆ. ಇಲ್ಲದ ಸಮಯದ ನಡುವೆಯೂ ಬಿಡುವು ಮಾಡಿಕೊಂಡು ಕಾರ್ಯಕ್ರಮ ನೀಡುತ್ತಿದ್ದಾರೆ.
ಧಾರಾವಾಹಿ ನಿರ್ದೇಶಕ ಹಾಗೂ ಕಾಮಿಡಿ ನಟ ಪವನ್ ಕುಮಾರ್ 'ಕಾಮಿಡಿ ಕಿಲಾಡಿಗಳು' ನಿರ್ದೇಶಿಸುತ್ತಿದ್ದಾರೆ. ರೇಡಿಯೋ ಜಾಕಿ ರಾಪಿಡ್ ರಶ್ಮಿ ಕೋಮಲ್ ಕುಮಾರ್ ಜತೆ ಇನ್ನೊಬ್ಬ ತೀರ್ಪುಗಾರ್ತಿ.

ಅಂದ ಹಾಗೆ ಗೆದ್ದವರಿಗೆ ನ್ಯಾನೋ ಕಾರಿನ ಬಹುಮಾನವಿದೆಯಂತೆ.


ಇದರಲ್ಲಿ ಇನ್ನಷ್ಟು ಓದಿ :