ಪತಿ ಸಾವಿನ ದುಃಖದಲ್ಲಿರುವ ಮಾಲಾಶ್ರೀಗೆ ಶ್ರುತಿ ಸಾಂತ್ವನಿಸಿದ್ದು ಹೀಗೆ

ಬೆಂಗಳೂರು| Krishnaveni K| Last Modified ಗುರುವಾರ, 29 ಏಪ್ರಿಲ್ 2021 (10:18 IST)
ಬೆಂಗಳೂರು: ಪತಿ, ನಿರ್ಮಾಪಕ ರಾಮು ಕೊರೋನಾದಿಂದಾಗಿ ಅಕಾಲಿಕವಾಗಿ ಸಾವನ್ನಪ್ಪಿದ ದುಃಖದಲ್ಲಿರುವ ನಟಿ ಮಾಲಾಶ್ರೀಗೆ ಚಿತ್ರರಂಗದ ಗೆಳತಿ, ನಟಿ ಶ್ರುತಿ ಸಾಂತ್ವನಿಸಿದ್ದಾರೆ.  
> ಮಾಲಾಶ್ರೀಗೆ ಸುದೀರ್ಘ ಪತ್ರ ಬರೆದಿರುವ ಶ್ರುತಿ ಮಾಲಾಶ್ರೀಯನ್ನು ಸಾಂತ್ವನಿಸುವ ಕೆಲಸ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶ್ರುತಿ ಪ್ರಕಟಿಸಿದ್ದಾರೆ.>   ‘ನಿಮ್ಮ ಸಹೋದ್ಯೋಗಿಯಾಗಿ, ಗೆಳತಿಯಾಗಿ ನಿಮ್ಮನ್ನು ಸಾಂತ್ವನಿಸಲಾಗದ ಪರಿಸ್ಥಿತಿಯಲ್ಲಿ ನೋಡಲಾಗದೇ ಕನಿಷ್ಠ ಕಣ್ಣೀರನ್ನು ಒರೆಸಲು ಸಾಧ‍್ಯವಾಗದ ಕ್ರೂರ ಪರಿಸ್ಥಿತಿಗೆ ನನ್ನದೊಂದು ಧಿಕ್ಕಾರ. ಮಾಲಾ, ನಿಮಗಾದ ನಷ್ಟವನ್ನು ಭರಿಸಲು ಯಾರಿಂದಲೂ ಸಾಧ್ಯವಾಗದು. ಆದರೆ ನಿಮ್ಮ ಕೋಟ್ಯಾನುಕೋಟಿ ಅಭಿಮಾನಿಗಳಿಗಾಗಿ, ಮುದ್ದು ಮಕ್ಕಳಿಗಾಗಿ ಕಷ್ಟದ ದಿನಗಳನ್ನು ಧೈರ್ಯವಾಗಿ ಎದುರಿಸುವ ಅನಿವಾರ್ಯತೆಯಿದೆ. ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದಿದ್ದು ಕೇವಲ ಅದೃಷ್ಟದಿಂದಲ್ಲ. ನಿಮ್ಮ ಪರಿಶ್ರಮದಿಂದ. ನಂತರ ಒಬ್ಬರ ಉತ್ತಮ ಗೃಹಿಣಿಯಾಗಿದ್ದು ಕೇವಲ ದೇವರ ವರದಿಂದಲ್ಲ. ತ್ಯಾಗ, ಸಹನೆ, ಪ್ರೀತಿಯಿಂದ, ಒಳ್ಳೆ ತಾಯಿ ಆಗಲೂ ಅಷ್ಟೇ ಶ್ರಮ, ಪ್ರಯತ್ನ ಇರುತ್ತದೆ. ಹೀಗೆ ಜೀವನದ ಎಲ್ಲಾ ಏರಿಳಿತಗಳನ್ನೂ ನಿಭಾಯಿಸಿಕೊಂಡು ಬಂದಿದ್ದೀರಿ. ರಾಮು ಅವರಿಲ್ಲದ  ಮುಂದಿನ ದಿನಗಳು ನಿಮಗೆ ಕಷ್ಟಕರವಾಗಿದ್ದರು ಅದನ್ನು ನಿಭಾಯಿಸುತ್ತೀರಿ ಹಾಗೂ ನಿಭಾಯಿಸುವ ಶಕ್ತಿ ದೇವರು ಕರುಣಿಸಲಿ. ಕಷ್ಟದ ಹಾದಿಯಲ್ಲಿ ಎಂದಾದರೂ ಸಹಾಯ ಬೇಕಿದ್ದಲ್ಲಿ ನಾನು ಒಂದೇ ಒಂದು ಕರೆಯಷ್ಟೇ ದೂರದಲ್ಲಿರುವೆ’ ಎಂದು ಶ್ರುತಿ ಸುದೀರ್ಘ ಪತ್ರದ ಮೂಲಕ ಗೆಳತಿಗೆ ಸಾಂತ್ವನ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :