ಪ್ರೇಮಾಯಣ: ಲಂಪಟ ನಟ ಆದಿಲೋಕೇಶ್ ಬಣ್ಣ ಬಯಲು

ಇಬ್ಬರ ಜೊತೆ ಮದುವೆ-ಮತ್ತೊಬ್ಬಳ ಜೊತೆ ಲವ್...

ಬೆಂಗಳೂರು| ನಾಗೇಂದ್ರ ತ್ರಾಸಿ|
NRB
ಬೆಳ್ಳಿಪರದೆಯ ಮೇಲೆ ಖಳನಾಯಕನ ಪಾತ್ರ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಲು ಹರಸಾಹಸ ಪಡುತ್ತಿದ್ದ ನಟ ಆದಿ ಲೋಕೇಶ್ ನಿಜ ಜೀವನದಲ್ಲಿ ಹುಡುಗಿಯರ ಬಾಳಲ್ಲಿ ಚೆಲ್ಲಾಟವಾಡಿ ಮೋಸ ಮಾಡುವ ಮೂಲಕ ಖಳನಾಯಕನಾಗಿರುವ ಅಂಶ ಬೆಳಕಿಗೆ ಬರುವ ಮೂಲಕ ಚಿತ್ರೋದ್ಯಮ ಸೇರಿದಂತೆ ಅಭಿಮಾನಿಗಳಿಗೂ ದಂಗು ಬಡಿಸಿದ್ದಾನೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 24ರ ಹರೆಯದ ಯುವತಿಯೊಬ್ಬಳು ಖಳನಟ ಆದಿ ಲೋಕೇಶನ ಬಣ್ಣವನ್ನು ಟಿವಿ9 ವಾಹಿನಿ ಮೂಲಕ ಬಯಲು ಮಾಡಿದ್ದಾಳೆ. ಈಕೆಯೊಂದಿಗೆ ಹಲವಾರು ದಿನಗಳಿಂದ ಚಾಟ್ ಮಾಡುತ್ತಿದ್ದ ಆದಿ, ನಿಮ್ಮನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ಅಲ್ಲದೆ, 10ಲಕ್ಷ ರೂಪಾಯಿ ನಗದು ತಂದುಕೊಡಬೇಕೆಂದು ಬೇಡಿಕೆ ಕೂಡ ಇಟ್ಟಿದ್ದ.

ತನ್ನ ಹೆಸರು ಮತ್ತು ಮುಖದ ಚಹರೆಯನ್ನು ತೋರಿಸಲು ನಿರಾಕರಿಸಿರುವ ಯುವತಿ, ಆದಿ ಲೋಕೇಶ್ ಚಿನ್ನಾಭರಣ ತೆಗೆದುಕೊಂಡ ಕುರಿತು ಈಗಾಗಲೇ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ನಂತರ ಪೊಲೀಸರು ಮಧ್ಯಪ್ರವೇಶಿಸಿ ಚಿನ್ನಾಭರಣಗಳನ್ನು ಆದಿಯಿಂದ ವಾಪಸು ತೆಗೆದುಕೊಟ್ಟು ಸುಮ್ಮನಾಗಿದ್ದರು. ತದನಂತರ ಇದೀಗ ಆದಿಯ ವಂಚನೆ ಬಗ್ಗೆ ಮಾಧ್ಯಮದ ಮೂಲಕ ಬಯಲಿಗೆಳೆದಿದ್ದಾಳೆ.
ಆದಿ ಲೋಕೇಶ್ ಈಗಾಗಲೇ ಮೊದಲನೇ ಹೆಂಡತಿಗೆ ವಿವಾಹ ವಿಚ್ಚೇದನ ನೀಡಲು ಅರ್ಜಿ ಸಲ್ಲಿಸಿದ್ದು, ಐಟಂ ಡ್ಯಾನ್ಸರ್ ಅನೂಷಾ ಎಂಬಾಕೆಯೊಂದಿಗೆ ಎರಡನೇ ಮದುವೆ ಮಾಡಿಕೊಂಡಿದ್ದಾನೆ. ಹೀಗೆ ಹಲವು ಹುಡುಗಿಯರ ಬಾಳಲ್ಲಿ ಚೆಲ್ಲಾಟವಾಡುತ್ತಿರುವ ಆದಿ ಲೋಕೇಶ್ ನಿಜ ಜೀವನದಲ್ಲೂ ಖಳ ನಾಯಕನಾಗಿ ತನ್ನ ಮುಖಕ್ಕೆ ತಾನೇ ಮಸಿ ಬಳಿದುಕೊಂಡಿದ್ದಾನೆ!


ಇದರಲ್ಲಿ ಇನ್ನಷ್ಟು ಓದಿ :