ಲೋಕಾಯುಕ್ತ ಅಧಿಕಾರಿಗಳು ನೀಡಿರುವ ವರದಿ ಆಧಾರಿಸಿ ಕ್ರಮ

bangalore| geetha| Last Modified ಗುರುವಾರ, 25 ನವೆಂಬರ್ 2021 (19:31 IST)
ಬೆಂಗಳೂರು: ಭ್ರಷ್ಟಾಚಾರ, ಕರ್ತವ್ಯ ಲೋಪ ಸೇರಿದಂತೆ ಮತ್ತಿತರ ಆರೋಪಗಳ ಕುರಿತಂತೆ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ ವಿರುದ್ಧ ಸಂಸ್ಥೆ ಹಾಗೂ ಅಧಿಕಾರಿಗಳು ನೀಡಿರುವ ವರದಿ ಆಧರಿಸಿ ಕ್ರಮ ಕೈಗೊಳ್ಳಬಹುದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ತಳವಾರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶನ ಕೋರಿ ನಿವೃತ್ತ ಉಪನ್ಯಾಸಕ ಆರ್. ನಾರಾಯಣ ಸ್ವಾಮಿ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ಎಚ್.ಯು. ತಳವಾರ ಅವರ ನೇಮಕ ಹಾಗೂ ನಡತೆ ಬಗ್ಗೆ ಲೋಕಾಯುಕ್ತ ಸಂಸ್ಥೆ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಬಿ.ವಿ. ಕೃಷ್ಣ ರಾವ್ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ವಿಕಾಸ್ ಕಿಶೋರ್ ಸುರಳ್ಕರ್ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ತಿಳಿಸಲಾಗಿದೆ.
ಆ ವರದಿ ಆಧರಿಸಿ ಸರ್ಕಾರ ತನ್ನ ವಿವೇಚನೆ ಅನುಸಾರ ಕ್ರಮ ಕೈಗೊಳ್ಳಬಹುದು. ಈ ಕುರಿತ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.


ಇದರಲ್ಲಿ ಇನ್ನಷ್ಟು ಓದಿ :