ಕಾವೇರಿ ಕೊಳ್ಳದಲ್ಲಿ ಪ್ರವಾಹದ ಭೀತಿ

ಮಂಡ್ಯ| Jagadeesh| Last Modified ಶನಿವಾರ, 18 ಆಗಸ್ಟ್ 2018 (18:25 IST)
ಮಡಿಕೇರಿಯಲ್ಲಿ ಬಿಟ್ಟು ಬಿಡದೇ ಮಳೆ ಆಗುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ಒಳ‌ ಹರಿವು ಕಡಿಮೆ ಆಗದ ಕಾರಣ ನದಿಗೆ ನಿರಂತರವಾಗಿ ನೀರು ಬಿಡಲಾಗುತ್ತಿದೆ. ಇದೀಗ ಕಾವೇರಿ ಕೊಳ್ಳದಲ್ಲಿ ಪ್ರವಾಹದ ಭೀತಿ ಮತ್ತಷ್ಟು ಹೆಚ್ಚಾಗಿದೆ.

ಒಂದೆಡೆ ಮಡಿಕೇರಿಯಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ 1.30 ಲಕ್ಷ ಕ್ಯೂಸೆಕ್ ನೀರನ್ನು ಹರಿ ಬಿಡಲಾಗುತ್ತಿದೆ. ನಿನ್ನೆ 1.15 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿತ್ತು.‌ ಆದರೆ ಮಡಿಕೇರಿಯಿಂದ ಬರುತ್ತಿರುವ ನೀರು ಕಡಿಮೆ ಆಗದ ಕಾರಣ ಕಾವೇರಿ ಕೊಳ್ಳದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಶ್ರೀರಂಗಪಟ್ಟಣ ದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮುಳುಗಡೆ ಹಂತದಲ್ಲಿದ್ದು, ತಾತ್ಕಾಲಿಕ ತಡೆ ಗೋಡೆ ಹಾಕಿದ್ದಾರೆ.


ಮತ್ತೊಂದೆಡೆ ನಿಮಿಷಾಂಭ ದೇವಾಲಯ ದ ಗರ್ಭಗುಡಿ ಮುಂದೆಯೂ ನೀರು ತುಂಬಿಕೊಂಡಿದ್ದು, ಭಕ್ತರಿಗೆ ನೀರಿಗಿಳಿಯದಂತೆ ಸೂಚಿಸಲಾಗಿದೆ. ಶ್ರೀರಂಗಪಟ್ಟಣ ದ ರಂಗನತಿಟ್ಟಿನಲ್ಲೂ ಬೋಟಿಂಗ್ ಸ್ಥಗಿತಗೊಳಿಸಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಮಳವಳ್ಳಿ ಯ ಮುತ್ತತ್ತಿಯಲ್ಲೂ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಇನ್ನು ಕೆ.ಆರ್.ಎಸ್. ನಲ್ಲಿ ನದಿಗೆ ನೀರು ಹೋಗುತ್ತಿರುವ ದೃಶ್ಯಗಳನ್ನು ನೋಡಲು ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :