Widgets Magazine

ಇಂದು ಐಪಿಎಸ್ ಅಧಿಕಾರಿ ಹರೀಶ್ ಅಂತ್ಯಕ್ರಿಯೆ

ಬೆಂಗಳೂರು| Jaya| Last Updated: ಶನಿವಾರ, 20 ಫೆಬ್ರವರಿ 2016 (12:41 IST)
ಚೆನ್ನೈನಲ್ಲಿ ಗುರುವಾರ ಮುಂಜಾನೆ ನಿಗೂಢವಾಗಿ ಸಾವನ್ನಪ್ಪಿರುವ ಕರ್ನಾಟಕದ ಐಪಿಎಸ್ ಅಧಿಕಾರಿ ಎನ್. ಹರೀಶ್ ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ಕೋಲಾರ ಜಿಲ್ಲೆಯ ಮಾಲೂರಿನ ಗೇರುಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ನಿನ್ನೆ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಅವರ ತಂದೆಯವರಿಗೆ ಒಪ್ಪಿಸಲಾಗಿತ್ತು. ವಿಶೇಷ ಆಂಬ್ಯುಲೆನ್ಸ್‌ನಲ್ಲಿ ನಿನ್ನೆ ಸಂಜೆ ಹರೀಶ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯಲಾಯಿತು.

ಬೆಂಗಳೂರಿನ ರಾಜಾಜಿನಗರದ ಬಳಿ ಇರುವ ಮಂಜುನಾಥನಗರದಲ್ಲಿ ರಾತ್ರಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶನಿವಾರ ಬೆಳಿಗ್ಗೆ 8 ಗಂಟೆವರೆಗೆ ಸ್ವಗ್ರಾಮ ಗೇರುಪುರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಟ್ಟು ಅಂತ್ಯಕ್ರಿಯೆ ನಡೆಸಲಾಗುವುದು’ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಕೂಡ ಮೃತರ ಅಂತಿಮ ದರ್ಶನ ಪಡೆದರು. ಹರೀಶ್ ಅನುಮಾನಾಸ್ಪದ ಸಾವಿನ ತನಿಖೆಯ ಕುರಿತಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ತೀಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಹಾಗೂ ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಸಹ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಚೆನ್ನೈನಲ್ಲಿ ಭೃಷ್ಟಾಚಾರ ನಿಗ್ರಹ ದಳದ ಸಹಾಯಕ ಎಸ್‌ಪಿಯಾಗಿದ್ದ ಕೋಲಾರ ಜಿಲ್ಲೆಯ ಹರೀಶ್ 2009ನೇ ಐಪಿಎಸ್ ಬ್ಯಾಚ್‍ನ ತಮಿಳುನಾಡು ಕೇಡರ್ ಅಧಿಕಾರಿಯಾಗಿದ್ದರು. ಆದರೆ ಗುರುವಾರ ಚೆನ್ನೈನ ಐಪಿಎಸ್ ಅಧಿಕಾರಿಗಳ ಮೆಸ್‍ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು.

ಐಪಿಎಸ್ ಅಧಿಕಾರಿ ಹರೀಶ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಒಂದೆಡೆ ವೈಯಕ್ತಿಕ ವಿಚಾರ ಕಾರಣವೆಂದು ಹೇಳಲಾಗುತ್ತಿದ್ದರೆ, ಇನ್ನೊಂದೆಡೆ ರಾಜಕೀಯ ಒತ್ತಡ, ಬಡ್ತಿ ಸಿಗಲು ವಿಳಂಬವಾಗುತ್ತಿರುವುದರಿಂದ ಖಿನ್ನತೆಗೊಳಗಾಗಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :