ಬೆಂಗಳೂರು|
venu|
Last Modified ಮಂಗಳವಾರ, 6 ಜೂನ್ 2017 (10:54 IST)
ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದ ಫೋನ್ ಕದ್ದಾಲಿಕೆ ವಿವಾದ ಇದೀಗ ಪೊಲೀಸ್ ಇಲಾಖೆಯಲ್ಲೂ ಕಂಡುಬಂದಿದೆ. ಐಪಿಎಸ್ ಅಧಿಕಾರಿಯೇ ಮತ್ತೊಬ್ಬ ಪೊಲೀಸ್ ಅಧಿಕಾರಿಯ ಫೋನ್ ಕದ್ದಾಲಿಕೆ ಮಾಡಿದ್ದಾರೆಂಬ ಕುರಿತು ಮಾಹಿತಿ ಸಿಕ್ಕಿರುವುದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಅಷ್ಟೇ ಅಲ್ಲ, ಕದ್ದಾಲಿಕೆ ಮಾಹಿತಿಯನ್ನ ಟ್ಯಾಪ್ ಮಾಡಿಸಿದ್ದ ಅಧಿಕಾರಿಯೇ ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ.
ಕಾವೇರಿ ಹೋರಾಟದ ಸಂದರ್ಭ ಕನ್ನಡ ಪರ ಹೋರಾಟಗಾರ, ಕರವೇ ಅಧ್ಯಕ್ಷ ನಾರಾಯಣಗೌಡರು ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಜೊತೆ ಫೋನಿನಲ್ಲಿ ಮಾತನಾಡಿದ್ದನ್ನ ಕದ್ದಾಲಿಕೆ ಮಾಡಿಸಿರುವ ಅಧಿಕಾರಿ ಬಳಿಕ ಅದನ್ನ ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು, ಖಾಸಗಿ ಮಾಧ್ಯಮದ ಜೊತೆ ಮಾತನಾಡಿರುವ ಕರವೇ ಅಧ್ಯಕ್ಷ ನಾರಾಯಣಗೌಡ, ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಇದೇವೇಳೆ, ಪ್ರಕರಣ ಕುರಿತಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ದೂರಿನನ್ವಯ ಡಿಜಿಪಿ ಆರ್.ಕೆ. ದತ್ತಾ ಮೂರು ಬಾರಿ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.