ಸಿಎಂ ಆಗಿ ಹುಬ್ಬಳ್ಳಿಗೆ ಬರುತ್ತೇನೆಂದು ಅಂದುಕೊಂಡಿರಲಿಲ್ಲ: ಬೊಮ್ಮಾಯಿ

bengaluru| geethanjali| Last Updated: ಗುರುವಾರ, 29 ಜುಲೈ 2021 (20:42 IST)
ನಾನು ಹುಬ್ಬಳ್ಳಿಯಲ್ಲೇ ಹುಟ್ಟಿ ಬೆಳೆದವನು. ಹುಬ್ಬಳ್ಳಿಯಲ್ಲಿ ನನಗೆ ದೊಡ್ಡ ಸ್ನೇಹಿತರ ಬಳಗವೇ ಇದೆ. ಇದು ನನಗೆ ಅತ್ಯಂತ ಪ್ರೀತಿಯ ಊರು. ಸಿಎಂ ಆಗಿ ಹುಬ್ಬಳ್ಳಿಗೆ ಬರುತ್ತೇನೆಂದು ಅಂದುಕೊಂಡಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪ್ರವಾಹ ಪರಿಸ್ಥಿತಿ ಅರಿಯಲು ಕಾರವಾರಕ್ಕೆ ತೆರಳುವ ಮುನ್ನ ಹುಬ್ಬಳ್ಳಿಗೆ ಗುರುವಾರ ಭೇಟಿ ನೀಡಿದ ನಂತರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ, ಅಮಿತ್ ಶಾ, ನಡ್ಡಾ ನಿರ್ಣಯದಿಂದ ಮುಖ್ಯಮಂತ್ರಿ ಆದೆ ಎಂದು ಹೇಳಿಕೆ ನೀಡಿದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ನಾಯಕರು ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಎಲ್ಲರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ. ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಅಗತ್ಯ ಪ್ರಾಶಸ್ತ್ಯ ಕೊಡುತ್ತೇನೆ ಎಂದರು. ಇಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿದ್ದಾರೆ. ಜಗದೀಶ್ ಶೆಟ್ಟರ್, ಇನ್ನೂ ಹಲವು ಶಾಸಕರು ಕೂಡ ಇದ್ದಾರೆ. ಎಲ್ಲರ ಜತೆ ಚರ್ಚಿಸಿ ಸಲಹೆ ಸ್ವೀಕರಿಸುತ್ತೇನೆ. ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಆದ್ಯತೆ ಕೊಡುತ್ತೇನೆ ಎಂದು ಅವರು ತಿಳಿಸಿದರು.> ನಾಳೆ ಕೇಂದ್ರ ನಾಯಕರ ಭೇಟಿಗೆ ಹೋಗುತ್ತಿದ್ದೇನೆ. ಮೊದಲಿಗೆ ಅವರ ಆಶೀರ್ವಾದವನ್ನು ಪಡೆಯುತ್ತೇನೆ. ಕೇಂದ್ರ ನಾಯಕರ ಜತೆ ಸಚಿವ ಸಂಪುಟದ ಬಗ್ಗೆ ಚರ್ಚೆ ಮಾಡುತ್ತೇನೆ. ನಿನ್ನೆಯೇ ಜಗದೀಶ್ ಶೆಟ್ಟರ್ ಅವರ ಜತೆ ಮಾತಾಡಿದ್ದೇನೆ. ಶೆಟ್ಟರ್ ವೈಯಕ್ತಿವಾಗಿ ಬಂದು ಚರ್ಚಿಸುವುದಾಗಿ ಹೇಳಿದ್ದಾರೆ. ಶೆಟ್ಟರ್ ನನಗೆ ಬಹಳ ಆತ್ಮೀಯ ಸ್ನೇಹಿತರಿದ್ದಾರೆ. ಶೆಟ್ಟರ್ ಜತೆ ಚರ್ಚಿಸಿ ಅವರ ಸಮಸ್ಯೆ ತಿಳಿದುಕೊಳ್ಳುತ್ತೇನೆ. ಬಳಿಕ ವರಿಷ್ಠರ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದರು.>
ಈ ವೇಳೆ ಮಾತನಾಡಿದ ರಾಜ್ಯದ ಮುಖ್ಯಮಂತ್ರಿ, ಮಹದಾಯಿ ಯೋಜನೆಗೆ ಮೊದಲ ಪ್ರಾಶಸ್ತ್ಯ ನೀಡುತ್ತೇನೆ, ಏನು ಮಾಡಬೇಕು ಎಂದು ನನಗೆ ಬಹಳ ಸ್ಪಷ್ಟತೆ ಇದೆ. ಗೆಜೆಟ್ ನೋಟಿಫಿಕೇಷನ್ ಸಿಕ್ಕ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ನಂತರ ಆರ್.ಎಸ್. ಎಸ್ ಕಛೇರಿ ಕೇಶವ ಕುಂಜ ಹಾಗೂ ತಮ್ಮ ತಂದೆ ತಾಯಿಯ ಸಮಾಧಿಗೆ ಭೇಟಿ ನೀಡಿ,ನಂತರ ಉತ್ತರ ಕನ್ನಡದತ್ತ ಪ್ರವಾಸ ಬೆಳೆಸಿದರು.


ಇದರಲ್ಲಿ ಇನ್ನಷ್ಟು ಓದಿ :