ರಾಮನವಮಿ ಹಬ್ಬವನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸೋಣ. ಆದರೆ, ನಮ್ಮ ರಾಮಸ್ಮರಣೆ ಇನ್ನೊಬ್ಬರಿಗೆ ನೋವುಂಟು ಮಾಡದಂತೆ ಎಚ್ಚರ ವಹಿಸೋಣ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಶ್ರೀರಾಮ ನವಮಿಯಂದು ಟ್ವಿಟರ್ ಮೂಲಕ ಜನರಿಗೆ ಮೊದಲಿಗೆ ಶುಭಾಶಯ ಕೋರಿದ್ದಾರೆ. 'ಶಾಂತಿ ಸಹನೆಯ ಸಾಕಾರಮೂರ್ತಿ, ಪಿತೃವಾಕ್ಯ ಪರಿಪಾಲಕ ಮತ್ತು ಸರ್ವ ಜೀವನಾದರ್ಶಗಳ ಪ್ರತೀಕ ಶ್ರೀರಾಮಚಂದ್ರರ ಚರಿತೆ ನಮಗೆಲ್ಲರಿಗೂ ಪ್ರೇರಣೆ. ಶ್ರೀರಾಮ ಸ್ಮರಣೆ ಮಾಡುತ್ತಾ ಆ ಮಹಾಪುರುಷನ ಆದರ್ಶಗಳನ್ನು ಅಳವಡಿಸಿಕೊಳ್ಳೋಣ' ಎಂದು ತಿಳಿಸಿದ್ದಾರೆ. ನಂತರ ಮತ್ತೊಂದು ಟ್ವೀಟ್ನಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ರಾಮನ ಹೆಸರಿನ ಶೋಭಾಯಾತ್ರೆಗಳ ಮೂಲಕ ಇತರರಿಗೆ ನೋವುಂಟು ಮಾಡಬಾರದು ಎಂದು ಸಲಹೆ ನೀಡಿದ್ದಾರೆ.