ಪ್ರೀತ್ಸೆ ಪ್ರೀತ್ಸೆ ಅಂತಾ ಪ್ರಾಣ ತಿಂದ.. ! ಮುಂದೇನಾಯ್ತು?

ಬೆಳಗಾವಿ| Ramya kosira| Last Modified ಗುರುವಾರ, 25 ನವೆಂಬರ್ 2021 (11:04 IST)
ಬೆಳಗಾವಿ : ಪ್ರೀತಿಸಲು ನಿರಾಕರಿಸಿದ್ದಕ್ಕೆ ಪಟ್ಟಣದಲ್ಲಿ ಭಾನುವಾರ 16 ವರ್ಷದ ಬಾಲಕಿಯನ್ನು ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಅಮೀರ ಲಾಲಸಾಬ ಜಮಾದಾರ (19) ಕೊಲೆ ಮಾಡಿದ ಆರೋಪಿ. ಬಾಲಕಿಯು ತನ್ನ ಇಬ್ಬರು ತಂಗಿಯರ ಜತೆ ಪಟ್ಟಣದ ಶ್ರೀ ಕರೆ ಸಿದ್ದೇಶ್ವರ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಜಾತ್ರೆಗೆ ಬಂದಿದ್ದಳು.
ಮಧ್ಯಾಹ್ನ ಊಟ ಮಾಡಿ, ಪಟ್ಟಣದ ವಡಕಿ ತೋಟದ ಮನೆಗೆ ತೆರಳುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಪೀಡಿಸಿದ್ದಾನೆ. ಮನೆಗೆ ಹೋಗಿ ಅವ್ವನಿಗೆ ಹೇಳ್ತಿನಿ ಎಂದು ಬಾಲಕಿ ಎಚ್ಚರಿಸಿದಾಗ ಜೇಬಿನಿಂದ ಚಾಕು ತೆಗೆದು ಕೈ ಮತ್ತು ಹೊಟ್ಟೆಗೆ ಬಲವಾಗಿ ಇರಿದ್ದಾನೆ.
ಈ ಭೀಕರ ದೃಶ್ಯವನ್ನು ಕಂಡ ಚಿಕ್ಕ ತಂಗಿಯರು ಹೆದರಿ ಅಳತೊಡಗಿದ್ದಾರೆ. ನಂತರ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯ ತಂದೆ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.
ಸ್ಥಳಕ್ಕೆ ಅಥಣಿ ಡಿವೈಎಸ್ಪಿ ವಿ.ಎಸ್. ಗಿರೀಶ, ರಾಯಬಾಗ ಸಿಪಿಐ ಕೆ.ಎಸ್. ಹಟ್ಟಿ, ಹಾರೂಗೇರಿ ಪಿಎಸ್ಐ ರಾಘವೇಂದ್ರ ಖೋತ, ಕುಡಚಿ ಪಿಎಸ್ಐ ಧರಿಗೋಣ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :