ಗ್ರಾಹಕರ ಜೇಬಿಗೆ ಕತ್ತರಿ!

ಬೆಂಗಳೂರು| Ramya kosira| Last Modified ಶುಕ್ರವಾರ, 26 ನವೆಂಬರ್ 2021 (14:38 IST)
ಹಾವೇರಿ : ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ತರಕಾರಿ ಬೆಳೆಗಳು ನೆಲಕಚ್ಚಿವೆ. ಅಳಿದುಳಿದ ತರಕಾರಿಗೆ ಭಾರೀ ಬೆಲೆ ಬಂದಿದೆ.
ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆಗಳು ಗಗನಮುಖಿಯಾಗಿವೆ. ಈ ನಡುವೆ, ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಈರುಳ್ಳಿ ಬೆಲೆ ಕಣ್ಣೀರು ತರಿಸಿದರೆ, ಟೊಮೇಟೊ ರೇಟು ಕೂಡ ಜನಸಾಮಾನ್ಯರ ಹೊಟ್ಟೆ ಕಿವುಚುವಂತಿದೆ.
ತೋಟಗಾರಿಕಾ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲಾದ್ಯಂತ ನವೆಂಬರ್ 20ರವರೆಗೆ ಸುರಿದ ಅಕಾಲಿಕ ಮಳೆಗೆ ಬರೋಬ್ಬರಿ 621.45 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ತೋಟಗಾರಿಕಾ ಬೆಳೆಗಳು ಸಂಪೂರ್ಣ ನಾಶವಾಗಿವೆ.
ಪ್ರಮುಖ ತರಕಾರಿ ಬೆಳೆಗಳಾದ ಹಿರೇಕಾಯಿ, ಬೆಂಡೆಕಾಯಿ, ಸೌತೆಕಾಯಿ, ಈರುಳ್ಳಿ, ಟೊಮೇಟೊ, ಚವಳೆಕಾಯಿ, ಹಾಗಲಕಾಯಿ, ಬೀನ್ಸ್, ಕ್ಯಾರೆಟ್, ಹಸಿ ಮೆಣಸಿನಕಾಯಿ, ಕ್ಯಾಬೇಜ್, ಮೂಲಂಗಿ, ಮೆಂತೆ ಸೇರಿದಂತೆ ಇನ್ನಿತರ ತರಕಾರಿ ಹಾಗೂ ಸೊಪ್ಪುಗಳು ಮಳೆ ಹೊಡೆತಕ್ಕೆ ನಲುಗಿದ್ದು, ಮಣ್ಣಿನಲ್ಲಿ ಕೊಳೆತು ಹಾಳಾಗಿವೆ. ಈ ಹಿನ್ನೆಲೆ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ತರಕಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರು ಪರದಾಡುವಂತಾಗಿದೆ.ಇದರಲ್ಲಿ ಇನ್ನಷ್ಟು ಓದಿ :