ಲಸಿಕೆ ಬಗ್ಗೆ ತಪ್ಪು ತಿಳಿವಳಿಕೆ ಮೂಡಿಸುವ ಕೆಲವರ ಪ್ರಯತ್ನ ವಿಫಲ; ಡಾ.ಕೆ.ಸುಧಾಕರ್

ಕೋಲಾರ| Ramya kosira| Last Modified ಗುರುವಾರ, 2 ಸೆಪ್ಟಂಬರ್ 2021 (08:51 IST)
ಕೋಲಾರ (ಸೆ 2): ಕೋವಿಡ್ ಲಸಿಕೆ ಬಗ್ಗೆ ಕೆಲವರು ತಪ್ಪು ತಿಳಿವಳಿಕೆ ಮೂಡಿಸುತ್ತಿದ್ದರೂ, ಜನರಿಗೆ ಲಸಿಕೆ ಮೇಲೆ ಸಂಪೂರ್ಣ ನಂಬಿಕೆ, ವಿಶ್ವಾಸ ಬಂದಿದೆ. ಲಸಿಕೆ ಪಡೆಯಲು ಜನರು ಸಾಲು ಸಾಲಾಗಿ ಬರುತ್ತಿದ್ದು, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕೋಲಾರದಲ್ಲಿ ಮುದುವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ 35 ಸಾವಿರ ಕೋಟಿ ರೂ. ಮೀಸಲಿಟ್ಟು ಎಲ್ಲ ರಾಜ್ಯಗಳಿಗೆ ಲಸಿಕೆ ಪೂರೈಸಿದೆ. ರಾಜ್ಯದಲ್ಲಿ ಲಸಿಕೆ ಮೇಳ ಮಾಡುತ್ತಿದ್ದು, ಜನರಿಗೆ ಲಸಿಕೆ ಮೇಲೆ ನಂಬಿಕೆ ಬಂದಿದೆ. ಇದನ್ನು ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದು ಹೇಳಿದರೂ, ಜನರು ಸಾಲುಸಾಲಾಗಿ ಬಂದು ಲಸಿಕೆ ಪಡೆಯುತ್ತಿದ್ದಾರೆ. ಈ ಸಾಲು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಇನ್ನೂ ಕೆಲವರಲ್ಲಿ ಲಸಿಕೆ ಬಗ್ಗೆ ಆತಂಕ ಇದೆ. ಸ್ಥಳೀಯ ಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಅರಿವು ಮೂಡಿಸಬೇಕು. ಪ್ರತಿ ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ಇದ್ದು, ಇದರ ಮೂಲಕ ಅರಿವು ಮೂಡಿಸಬಹುದು ಎಂದರು.> ಮುಂದಿನ ವರ್ಷದಿಂದ ಇನ್ನಷ್ಟು ಉತ್ತಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುವುದು. ಈಗ 2 ಕೋಟಿ ರೂ. ವೆಚ್ಚದಲ್ಲಿ ಪಿಎಚ್ ಸಿ ನಿರ್ಮಿಸುತ್ತಿದ್ದು, ಮುಂದೆ 7-8 ಕೋಟಿ ರೂ. ವೆಚ್ಚದಲ್ಲಿ ಪಿಎಚ್ ಸಿ ನಿರ್ಮಾಣವಾಗಲಿದೆ. 6 ರಿಂದ 12 ಹಾಸಿಗೆಗಳು, ಐಸಿಯು, 24 ಗಂಟೆ ಕಾರ್ಯನಿರ್ವಹಿಸುವ ಮೂರು ವೈದ್ಯರು ಮೊದಲಾದ ವ್ಯವಸ್ಥೆ ಹೊಸ ಪಿಎಚ್ ಸಿಗಳಲ್ಲಿ ಇರಲಿದೆ ಎಂದರು.> ಸರ್ಕಾರದಿಂದ ಅನೇಕ ಕ್ರಾಂತಿಕಾರಿ ಸುಧಾರಣೆ ಕೈಗೊಂಡಿದ್ದು, ಕೇವಲ ಐದಾರು ತಿಂಗಳಲ್ಲಿ ಸುಮಾರು 4 ಸಾವಿರ ವೈದ್ಯರನ್ನು ನೇಮಕ ಮಾಡಲಾಗಿದೆ. ಕೋವಿಡ್ ಗೆ ಮುನ್ನ ಸರ್ಕಾರಿ ಆಸ್ಪತ್ರೆಗಳಲ್ಲಿ 4-5 ಸಾವಿರ ಆಕ್ಸಿಜನ್ ಹಾಸಿಗೆ ಇದ್ದರೆ, ಈಗ 45 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳಿವೆ ಎಂದು ಮಾಹಿತಿ ನೀಡಿದರು. ರಾಜಕೀಯ ಬೇಡ
ಪ್ರತ್ಯೇಕ ಹಾಲು ಒಕ್ಕೂಟ ಜನತೆಯ ಬೇಡಿಕೆಯಾಗಿದೆ. ಇದನ್ನು ರಚನಾತ್ಮಕವಾಗಿ ನೋಡಬೇಕೇ ಹೊರತು ರಾಜಕೀಯದಿಂದ ನೋಡಬಾರದು. ಒಕ್ಕೂಟ ಪ್ರತ್ಯೇಕವಾಗುವುದರಿಂದ ಸ್ಪರ್ಧೆ ಹೆಚ್ಚುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಎಲ್ಲಾ ಆಸ್ಪತ್ರೆಗಳ ಮುಂಭಾಗ 'ಸರ್ಕಾರದ ಕೆಲಸ ದೇವರ ಕೆಲಸ' ಎಂದು ಬರೆಸಲಾಗುವುದು. ಗ್ರಾಮಗಳಲ್ಲಿ 24 ಗಂಟೆ ಆರೋಗ್ಯ ಕೇಂದ್ರಗಳನ್ನು ಆರಂಭಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಚಿವ ಸುಧಾಕರ್ ಅವರು ಹೇಳಿದರು.
ರಾಜ್ಯದಲ್ಲಿ ಪ್ರತಿ ಬುಧವಾರ ಕೋವಿಡ್ ಲಸಿಕಾ ಉತ್ಸವ ನಡೆಸುತ್ತಿದ್ದು, ಒಂದೇ ದಿನ 10 ಲಕ್ಷ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಸಾಮಾನ್ಯ ದಿನಗಳಲ್ಲಿ 5 ಲಕ್ಷ ಲಸಿಕೆ ನೀಡುವ ಗುರಿ ಇದೆ. ಒಂದು ತಿಂಗಳಲ್ಲಿ ಕನಿಷ್ಠ 1.50 ಕೋಟಿ ಡೋಸ್ ಲಸಿಕೆ ನೀಡುವ ಗುರಿ ಇದೆ. ಡಿಸೆಂಬರ್ ವೇಳೆಗೆ ಎಲ್ಲಾ ವಯಸ್ಕರಿಗೆ ಲಸಿಕೆ ನೀಡಬೇಕು ಎಂಬ ಉದ್ದೇಶವಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಗಡಿಭಾಗದ ಜಿಲ್ಲೆಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಈ ಬಗ್ಗೆ ಕೇಂದ್ರದ ಆರೋಗ್ಯ ಸಚಿವರು ಕೂಡ ಸಲಹೆ ನೀಡಿದ್ದಾರೆ. ಗಡಿಭಾಗಗಳ ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಲಸಿಕೆ ಪಡೆಯಬೇಕು ಎಂದು ಕೋರಿದರು.
ಆಗಸ್ಟ್ ನಲ್ಲಿ ರಾಜ್ಯಕ್ಕೆ 1.12 ಕೋಟಿ ಲಸಿಕೆ ಬಂದಿದೆ. ಒಂದೇ ತಿಂಗಳಲ್ಲಿ 1.10 ಕೋಟಿ ಲಸಿಕೆ ನೀಡಲಾಗಿದೆ. ಜನವರಿಯಿಂದ ಈವರೆಗೆ ಆಗಸ್ಟ್ ತಿಂಗಳಲ್ಲೇ ಅತ್ಯಧಿಕ ಲಸಿಕೆ ನೀಡಲಾಗಿದೆ. ಸೆಪ್ಟೆಂಬರ್ ನಲ್ಲಿ ಕನಿಷ್ಠ 1.50 ಕೋಟಿ ಲಸಿಕೆ ನೀಡುವ ಗುರಿ ಇದೆ. ಕೇರಳದಿಂದ ಬರುವವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ನಿಯಮ ತರಲಾಗಿದೆ. ಆದರೆ ಪ್ರತಿ ದಿನ ಬರುವ ವಿದ್ಯಾರ್ಥಿಗಳು ಸೇರಿದಂತೆ ಕೆಲವರಿಗೆ ಮಾರ್ಗಸೂಚಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಸಚಿವರು ಹೇಳಿದರು.
 ಇದರಲ್ಲಿ ಇನ್ನಷ್ಟು ಓದಿ :