ನಾಯಿ ಪ್ರೀತಿ ಮಾಡಿಸಿತು ಮದುವೆ ಕ್ಯಾನ್ಸಲ್

ಬೆಂಗಳೂರು| Jaya| Last Updated: ಬುಧವಾರ, 14 ಸೆಪ್ಟಂಬರ್ 2016 (12:28 IST)
ತನ್ನ ನಾಯಿ ಮೇಲಿನ ಅಪರಿಮಿತ ಪ್ರೀತಿಗಾಗಿ ಯುವತಿಯೋರ್ವಳು ಮದುವೆಯನ್ನೇ ರದ್ದು ಮಾಡಿಕೊಂಡ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕರಿಷ್ಮಾ ವಾಲಿಯಾ ಎಂಬ ಯುವತಿಗೆ ಇತ್ತೀಚಿಗೆ ಮದುವೆ ನಿಶ್ಚಯವಾಗಿತ್ತು. ಅವರಿಬ್ಬರ ನಡುವೆ ಉತ್ತಮ ಹೊಂದಾಣಿಕೆಯೂ ಬೆಳೆಯ ಹತ್ತಿತ್ತು. ಆದರೆ ತನ್ನ ಸಾಕುನಾಯಿ 'ಲೂಸಿ' ಯ ಮೇಲಿನ ಅತಿಯಾದ ಪ್ರೀತಿಯಿಂದಾಗಿ ಅವರಿಬ್ಬರೀಗ ದೂರವಾಗಿದ್ದಾರೆ. ಮದುವೆ ಮುರಿದು ಬಿದ್ದಿದೆ.
 
ಹೌದು, ಕರಿಷ್ಮಾ ತನ್ನ ಸಾಕು ನಾಯಿ ಲೂಸಿಯನ್ನು ಅರೆ ಕ್ಷಣ ಕೂಡ ಬಿಟ್ಟಿರದವಳು. ಆದರೆ ಆಕೆಯ ಭಾವಿ ಪತಿ ನಾಯಿಯನ್ನು ತನ್ನ ಮನೆಗೆ ಕರೆದುಕೊಂಡು ಬರುವುದಕ್ಕೆ ಸಮ್ಮತಿ ಸೂಚಿಸಿಲ್ಲ. ನನಗೆ ನಾಯಿ ಎಂದರೆ ಆಗದು, ನಮ್ಮ ತಾಯಿಗೂ ಸಹ. ನಾನು ನಾಯಿಯ ಜತೆ ನನ್ನ ಹಾಸಿಗೆಯನ್ನು ಹಂಚಿಕೊಳ್ಳಲಾರೆ. ನಾಯಿ ವಿಚಾರದಲ್ಲಿ ಈ ರೀತಿಯ ಜಗಳವಾಡೋದಾದ್ರೆ ಅದನ್ನೇ ಮದುವೆಯಾಗು ಎಂದಾತ ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಕರಿಷ್ಮಾ ತನಗೆ ಆತನಿಗಿಂತ ನಾಯಿ ಲೂಸಿಯೇ ಹೆಚ್ಚು ಇಷ್ಟವೆಂಬುದನ್ನು ನೇರವಾಗಿ ಹೇಳಿ ಬಿಟ್ಟಿದ್ದಾಳೆ. 
 
ಸಾಮಾಜಿಕ ಜಾಲತಾಣದಲ್ಲಿ, 'ನಾಯಿಗಳು ನಮ್ಮನ್ನು ತೊಂದರೆಗೊಳಗಾಗುವ ಪರಿಸ್ಥಿತಿಯಿಂದ ಹೇಗೆ ತಪ್ಪಿಸುತ್ತವೆ', ಎಂಬ ಸ್ಟೇಟಸ್ ಹಾಕಿ ತನ್ನ ಮತ್ತು ಭಾವಿ ಪತಿ ನಡುವೆ ನಡೆದ ವಾಟ್ಸ್‌ಅಪ್ ಸಂಭಾಷಣೆಯ ಸ್ಕ್ರೀನ್ ಶಾಟ್‌ಗಳನ್ನು ಪ್ರಕಟಿಸಿರುವ ಆಕೆ ಈಗಲೇ ದೂರವಾಗೋದು ಬೆಸ್ಟ್. ಯಾರೊಬ್ಬರಿಗಾಗಿ ನನ್ನ ನಾಯಿಯನ್ನು ತ್ಯಾಗ ಮಾಡಲಾರೆ, ಎಂಬ ನಿರ್ಧಾರವನ್ನು ಪ್ರಕಟಿಸಿದ್ದಾಳೆ. 
 
ಭಾವಿ ಪತಿ ಮನವೊಲಿಕೆಗೆ ಆಕೆ ಡೋಂಟ್ ಕೇರ್ ಎಂದಿದ್ದು ಆಕೆಯ ದಿಟ್ಟತನಕ್ಕೆ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಅಪಾರ ಹೊಗಳಿಕೆ ವ್ಯಕ್ತವಾಗುತ್ತಿದೆ. 
 
ಯಾರು ನಾಯಿಯನ್ನು ಪ್ರೀತಿಸಲಾರರು ಹೇಳಿ? ಅದು ಮಾನವ ಕುಲಕ್ಕೆ ದೇವರ ಅತ್ಯಮೂಲ್ಯ ಉಡುಗೊರೆ. ನಿಜವಾಗಿಯೂ ನೀವು ಒಬ್ಬರನ್ನು ಮದುವೆಯಾಗಲು ಬಯಸಿದರೆ ನಾಯಿ ಅಥವಾ ಇನ್ಯಾವುದೇ ವಿಷಯ ನಿಮ್ಮ ಪ್ರೀತಿಯ ನಡುವೆ ಬರಲಾರದು ಎಂದು ಆಕೆ ಹೇಳಿದ್ದಾಳೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :