ಬ್ಯಾಂಕ್ ಹ್ಯಾಕ್ಗೆ ಬರೋಬ್ಬರಿ 304 ಸಿಮ್ ಬಳಕೆ..!

ಬೆಳಗಾವಿ| Ramya kosira| Last Modified ಗುರುವಾರ, 22 ಜುಲೈ 2021 (09:17 IST)
 
ಬೆಳಗಾವಿ(ಜು.21): ಬ್ಯಾಂಕ್ ಅಕೌಂಟ್ ಕೆವೈಸಿ ಮಾಡುವುದಾಗಿ ಹೇಳಿ ಬರೋಬ್ಬರಿ 10 ಲಕ್ಷ ವಂಚನೆ ಮಾಡಿದ ಅಂತಾರಾಜ್ಯದ ಮೂವರು ಸೈಬರ್ ವಂಚಕರನ್ನು ನಗರ ಪೊಲೀಸರು ಪತ್ತೆ ಹಚ್ಚಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

* ಮೂವರು ಹ್ಯಾಕರ್ಗಳ ಬಂಧನ
* ಬೆಳಗಾವಿ ನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆ
* ಓಟಿಪಿ ಪಡೆದು 102 ಬಾರಿ ಕನ್ನಹಾಕಿ 10 ಲಕ್ಷ ವಂಚನೆ ಮಾಡಿದ್ದ ಖದೀಮರು


 
ಜಾರ್ಖಂಡ ಮೂಲದ ಜಾಮ್ತಾರಾ ಜಿಲ್ಲೆಯ ದಂಪತಿ ಆಶಾ (25) ಚಂದ್ರಪ್ರಕಾಶ ದಾಸ್ (30) ಹಾಗೂ ನಾಸಿಕದ ಅನ್ವರ ಅಕ್ಬರಶೇಖ (24) ಬಂಧಿತ ಆರೋಪಿಗಳು. ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ವಿಕ್ರಮ್ ಅಮಟೆ ಅವರು, ಈ ಮೂವರು ಆರೋಪಿಗಳು ತಮ್ಮ ಹೆಸರಲ್ಲಿ ಈವರೆಗೆ ಒಟ್ಟು 50 ಬ್ಯಾಂಕ್ ಖಾತೆಗಳನ್ನು ಉಪಯೋಗಿಸಿದ್ದು, ನಾಸಿಕದ ಅನ್ವರ ಇನ್ನುಳಿದ ಆರೋಪಿಗಳ ಹೆಸರಲ್ಲಿ ವಿವಿಧ ಬ್ಯಾಂಕ್ಗಳಲ್ಲಿ ಖಾತೆ ತೆರೆದಿದ್ದ. ಅಲ್ಲದೇ ಗ್ರಾಹಕರನ್ನು ವಂಚಿಸಲು ಬರೋಬ್ಬರಿ 48 ಮೊಬೈಲ್ ಹಾಗೂ 304 ಸಿಮ್ ಬಳಸಿದ್ದರು. ಆ ಪೈಕಿ 5 ಮೊಬೈಲ್ ಹಾಗೂ 3 ಡೆಬಿಟ್ ಕಾರ್ಡ್ಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ಜೂ.9ರಂದು ಕಂಗ್ರಾಳಿ ಕೆ.ಎಚ್.ಗ್ರಾಮದ ನಿವಾಸಿ, ಬಿಎಸ್ಎನ್ಎಲ್ ನಿವೃತ್ತ ನೌಕರ ಯಲ್ಲಪ್ಪ ನಾರಾಯಣ ಜಾಧವ್ ಅವರಿಗೆ ಕರೆ ಮಾಡಿ, ಕೆವೈಸಿ ಅಪ್ಡೇಟ್ ಮಾಡುವ ನೆಪದಲ್ಲಿ ಲಿಂಕ್ ಬಳಸಲು ತಿಳಿಸಿ, ಓಟಿಪಿ ಪಡೆದು ಬರೋಬ್ಬರಿ 102 ಬಾರಿ ಕನ್ನಹಾಕಿ 10 ಲಕ್ಷ ವಂಚನೆ ಮಾಡಿದ್ದರು. ವಂಚನೆಗೊಳಗಾದ ಯಲ್ಲಪ್ಪ ಈ ಬಗ್ಗೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಜೂ. 10ರಂದು ದೂರು ದಾಖಲಿಸಿದ್ದರು ಎಂದು ವಿವರಿಸಿದರು.
ಈ ಪ್ರಕರಣದ ತನಿಖೆಗಾಗಿ ಇನ್ಸಪೆಕ್ಟರ್ ಬಿ.ಆರ್.ಗಡ್ಡೇಕರ ನೇತೃತ್ವದಲ್ಲಿ ಪೇದೆಗಳಾದ ವಿಜಯ ಬಡವಣ್ಣವರ, ಮಾರುತಿ ಕನ್ಯಾಗೋಳ, ಕೆ.ವಿ.ಚರಲಿಂಗಮಠ ಹಾಗೂ ಭುವನೇಶ್ವರಿ ಸೇರಿದಂತೆ ಹಲವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಜು.15ರಂದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈಗಾಗಲೇ ಬೆಂಗಳೂರು, ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಜನರಿಗೂ ವಂಚಿಸಿರುವ ಬಗ್ಗೆ ತಿಳಿದುಬಂದಿದ್ದು, ಬೆಂಗಳೂರಿನವರಿಗೆ 12 ಲಕ್ಷ ವಂಚಿಸಿರುವ ಬಗ್ಗೆ ಆರೋಪಿತರು ಬಾಯಿಬಿಟ್ಟಿರುವುದಾಗಿ ತಿಳಿಸಿದರು.
ಎಲ್ಲ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿದ್ದು, ಖಾತೆಗಳಲ್ಲಿ ಒಟ್ಟು 12.56 ಲಕ್ಷ ಅಧಿಕ ಹಣ ಇದೆ. ಹಣ ಕಳೆದುಕೊಂಡ ದೂರುದಾರರಿಗೆ ಕಾನೂನಾತ್ಮಕವಾಗಿ ಹಣ ಹಿಂದಿರುಗಿಸಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಇನ್ಸಪೆಕ್ಟರ್ ಬಿ.ಆರ್.ಗಡ್ಡೇಕರ ಇದ್ದರು.
 
ಇದರಲ್ಲಿ ಇನ್ನಷ್ಟು ಓದಿ :