Widgets Magazine

ಐಟಂ ಗರ್ಲ್ ರಾಖಿ ಸಾವಂತ್‌ರನ್ನು ಶಿವಸೇನೆಯ ಸಿಎಂ ಅಭ್ಯರ್ಥಿಯಾಗಿ ಘೋಷಿಸಿ: ಠಾಕ್ರೆಗೆ ಆಮ್ ಆದ್ಮಿ ಸವಾಲ್

ನಾಗ್ಪುರ್| ರಾಜೇಶ್ ಪಾಟೀಲ್|
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗಿಂತ ಐಟಂ ಗರ್ಲ್ ರಾಖಿ ಸಾವಂತ್ ಉತ್ತಮವಾಗಿ ಅಡಳಿತ ನಡೆಸುತ್ತಾಳೆ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಆಮ್ ಆದ್ಮಿ ಪಕ್ಷದ ಸಂಚಾಲಕಿ ಅಂಜಲಿ ದಾಮಾನಿಯಾ, ಶಿವಸೇನೆಯ ಸಿಎಂ ಅಭ್ಯರ್ಥಿಯಾಗಿ ರಾಖಿ ಸಾವಂತರನ್ನು ಘೋಷಿಸಿ ಎಂದು ಸವಾಲ್ ಹಾಕಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಗಾಗಿ ನಗರದಲ್ಲಿ ಕಚೇರಿ ಆರಂಭಿಸಿ ಸ್ಥಳೀಯರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ರಾಖಿ ಸಾವಂತ್‌ರನ್ನು ಉತ್ತಮ ಅಡಳಿತಗಾರ್ತಿ ಎಂದು ಕರೆದ ಉಧ್ಬವ್ ಠಾಕ್ರೆ ಅವರನ್ನು ಯಾಕೆ ಶಿವಸೇನೆಯ ಮುಖ್ಯಮಂತ್ರಿಯಾಗಿ ಘೋಷಿಸುತ್ತಿಲ್ಲ ಎಂದು ಕಿಡಿಕಾರಿದರು.

ಬಿಜೆಪಿಯ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಅಂಜಲಿ ದಾಮಾನಿಯಾ ಅವರನ್ನು ಸಂಭಾವ್ಯ ಅಭ್ಯರ್ಥಿಯಾಗಿಸಲಾಗಿತ್ತು. ಆದರೆ, ಪಕ್ಷದ ಸಂಘಟನೆಗಾಗಿ ಅವರನ್ನು ಬಳಸಿಕೊಳ್ಳಲು ಪಕ್ಷದ ಮುಖಂಡರು ನಿರ್ಧರಿಸಿದ್ದರಿಂದ ನಾಗ್ಪುರ್ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿಯ ಹುಡುಕಾಟದಲ್ಲಿ ಆಪ್ ತೊಡಗಿದೆ.
ನಾಗ್ಪುರ್ ಲೋಕಸಭೆ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯ ವ್ಯಕ್ತಿ ಆಪ್ ಪಕ್ಷದ ಅಭ್ಯರ್ಥಿ ಗಡ್ಕರಿ ವಿರುದ್ಧ ಸ್ಪರ್ಧಿಸುತ್ತಾರೆ. ಸೋಲಿನ ಭೀತಿಯಿಂದ ಗಡ್ಕರಿ ನಾಗ್ಪುರ್ ಮತ್ತು ಇಂದೋರ್ ಕ್ಷೇತ್ರದಿಂದ ಎರಡು ಲೋಕಸಭೆ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದಾರೆ. ಅವರಿಗೆ ತಾಕತ್ತಿದ್ರೆ ಒಂದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿ ಎಂದು ಸವಾಲ್ ಎಸೆದರು.

ಏತನ್ಮಧ್ಯೆ, ಕೆಲ ಯುವಕರು ಆಮ್ ಆದ್ಮಿ ಪಕ್ಷವನ್ನು ಅವಹೇಳನ ಮಾಡುವಂತಹ ಕರಪತ್ರಗಳನ್ನು ಹಂಚುತ್ತಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಆಮ್ ಆದ್ಮಿ ಪಕ್ಷದ ಬೆಳವಣಿಗೆಯಿಂದ ಗಡ್ಕರಿಗೆ ಸೋಲಿನ ಆತಂಕ ಕಾಡುತ್ತಿರುವುದರಿಂದ ರೌಡಿಗಳನ್ನು ಬಳಸಿಕೊಂಡು ಆಮ್ ಆದ್ಮಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್, ಬಿಜೆಪಿ ಮತ್ತು ಕೆಲ ಮಾಧ್ಯಮಗಳ ಬಗ್ಗೆ ಕಿಡಿಕಾರಿದ ದಾಮಾನಿಯಾ, ನಾವು ಪ್ರತಿಭಟನೆ ನಡೆಸಿದರೆ ಅದು ಅರಾಜಕತೆ,ಆದರೆ, ಕಾಂಗ್ರೆಸ್ ಸಂಸದ ಸಂಜಯ್ ನಿರುಪಮ್ ಮತ್ತು ಪ್ರಿಯಾ ದತ್ ಪ್ರತಿಭಟನೆ ಅರಾಜಕತೆಯಲ್ಲ. ಸೋಮನಾಥ್ ಭಾರ್ತಿ ಡ್ರಗ್ಸ್ ರಾಕೆಟ್ ತಂಡಗಳ ಮೇಲೆ ದಾಳಿ ಮಾಡಿದಲ್ಲಿ ಅವರು ರಾಬಿನ್ ಹುಡ್. ಕಾಂಗ್ರೆಸ್ ಸಚಿವ ನಾರಾಯಣ್ ರಾಣೆ ಪುತ್ರ ನಿಲೇಷ್ ಬಾಂದ್ರಾ ಪೊಲೀಸರನ್ನು ಬಳಸಿಕೊಂಡು ಮರೈನ್ ಡ್ರೈವ್ ಮೇಲೆ ನಡೆಸಿರುವ ದಾಳಿ ಯಾವ ಸ್ವರೂಪದ್ದು ಎಂದು ಆಮ್ ಆದ್ಮಿ ಪಕ್ಷದ ಸಂಚಾಲಕಿ ಅಂಜಲಿ ದಾಮಾನಿಯಾ ಗುಡುಗಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :