ಶುದ್ಧ ಕುಡಿಯುವ ನೀರನ್ನು ಪಡೆಯುವುದು ಎಲ್ಲರ ಮೂಲಭೂತ ಹಕ್ಕು; ಬಾಂಬೆ ಹೈಕೋರ್ಟ್

ಮುಂಬೈ| Ramya kosira| Last Modified ಗುರುವಾರ, 9 ಸೆಪ್ಟಂಬರ್ 2021 (09:45 IST)
ಮುಂಬೈ (ಸೆ 09) :  ಶುದ್ಧ ಕುಡಿಯುವ ನೀರನ್ನು ಪಡೆಯುವುದು ಹಾಗೂ ನಿಯಮಿತ ಕುಡಿಯುವ ನೀರಿನ ಪೂರೈಕೆ ದೇಶದ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಆದರೆ, ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕವೂ ಜನರು ಕುಡಿಯುವ ನೀರನ್ನು ಪಡೆಯಲು ನ್ಯಾಯಾಲಯದ ಬಾಗಿಲು ತಟ್ಟಬೇಕಾಗಿರುವುದು ದುರದೃಷ್ಟಕರ ಎಂದು ಬಾಂಬೆ ಹೈಕೋರ್ಟ್ ಬುಧವಾರ ವಿಷಾದ ವ್ಯಕ್ತಪಡಿಸಿದೆ.
ಥಾಣೆ ಜಿಲ್ಲೆಯ ಭೀವಂಡಿ ಪಟ್ಟಣದ ಕಾಂಬೆ ಹಳ್ಳಿಯ ನಿವಾಸಿಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಎಸ್.ಜೆ ಕಥಾವಲ್ಲಾ ಮತ್ತು ಮಿಲಿಂದ್ ಜಾಧವ್ ಅವರ ವಿಭಾಗೀಯ ಪೀಠವು ಈ ಹೇಳಿಕೆಗಳನ್ನು ನೀಡಿದೆ.> ಥಾಣೆ ಜಿಲ್ಲಾ ಪರಿಷತ್ ಮತ್ತು ಭೀವಂಡಿ ನಿಜಂಪುರ ಮಹಾನಗರ ಪಾಲಿಕೆಯ ಜಂಟಿ ಸಹಭಾಗಿತ್ವದ STEM ವಾಟರ್ ಡಿಸ್ಟ್ರಿಬ್ಯೂಷನ್ ಮತ್ತು ಇನ್ಫ್ರಾ ಕಂಪನಿಗೆ ಪ್ರತಿದಿನ ಕುಡಿಯುವ ನೀರನ್ನು ಪೂರೈಸಲು ನಿರ್ದೇಶನ ನೀಡುವಂತೆ ಕಾಂಬೆ ಹಳ್ಳಿಯ ನಿವಾಸಿಗಳು ಅರ್ಜಿ ಸಲ್ಲಿಸಿದ್ದರು.> ಅರ್ಜಿದಾರರಾದ ಕಾಂಬೆ ಹಳ್ಳಿಯ ನಿವಾಸಿಗಳು, ತಮನೆ ಪ್ರಸ್ತುತ ತಿಂಗಳಿಗೆ ಎರಡು ಬಾರಿ ಮಾತ್ರ ನೀರು ಪೂರೈಸಲಾಗುತ್ತಿದೆ. ಅದೂ ಕೇವಲ ಎರಡು ಗಂಟೆಗಳ ಕಾಲ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ವಾದಿಸಿದರು. STEM ನ ವ್ಯವಸ್ಥಾಪಕ ನಿರ್ದೇಶಕ ಭೋಸಾಹೇಬ್ ದಾಂಗ್ಡೆ, ಪ್ರತಿದಿನ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಒಂದು ನಿರ್ದಿಷ್ಟ ಸ್ಥಳದಿಂದ ಅರ್ಜಿದಾರರ ಮನೆಗಳಿಗೆ ನೀರು ವಿತರಿಸುವುದು ಹಳ್ಳಿಯ ಗ್ರಾಮ ಪಂಚಾಯಿತಿಯ ಜವಾಬ್ದಾರಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಅಲ್ಲಿನ ಜನಸಂಖ್ಯೆಯ ಏರಿಕೆಯಿಂದಾಗಿ ಗ್ರಾಮದಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
"ಪ್ರತಿದಿನ ಕನಿಷ್ಠ ಕೆಲವು ಗಂಟೆಗಳ ಕಾಲ ನೀರನ್ನು ಪೂರೈಸಬೇಕು. ಇದು ಅವರ ಮೂಲಭೂತ ಹಕ್ಕು. ಜನರು ಈ ರೀತಿ ನೀರಿಲ್ಲದೆ ಬಳಲುವಂತಿಲ್ಲ. ನೀರು ಪೂರೈಕೆಗಾಗಿ ಅರ್ಜಿದಾರರು ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ನ್ಯಾಯಾಲಯದ ಬಾಗಿಲು ತಟ್ಟಬೇಕಾಗಿರುವುದು ನಿಜಕ್ಕೂ ದುರದೃಷ್ಟಕರ" ಎಂದು ಹೈಕೋರ್ಟ್ ಹೇಳಿದೆ.
ಎಸ್ಟಿಇಎಂ ಕಂಪನಿಯು ಸ್ಥಳೀಯ ರಾಜಕಾರಣಿಗಳಿಗೆ ಮತ್ತು ಟ್ಯಾಂಕರ್ ಲಾಬಿಗೆ ಕಾನೂನುಬಾಹಿರವಾಗಿ ನೀರು ಪೂರೈಸುತ್ತಿದೆ.ಮುಖ್ಯ ಪೈಪ್ಲೈನ್ನಲ್ಲಿ ಅಕ್ರಮವಾಗಿ 300 ಕ್ಕೂ ಅಧಿಕ ನೀರಿನ ಸಂಪರ್ಕಗಳನ್ನು ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :