ಇಂಫಾಲ : ಜನಾಂಗೀಯ ಸಂಘರ್ಷಕ್ಕೆ ಬೆಂದು ಹೋಗಿರುವ ಮಣಿಪುರದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಕೇಳಿ ಬಂದಿದೆ. ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಮೊಯಿರಾಂಗ್ನಲ್ಲಿ ಎರಡು ಸಮುದಾಯಗಳ ನಡುವೆ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಗ್ರಾಮಸ್ಥರ ಪ್ರಕಾರ ಬುಧವಾರ ರಾತ್ರಿಯಿಂದ ಗುಂಡಿನ ಸದ್ದು ಕೇಳಿ ಬರುತ್ತಿದೆ. ಹಿಂಸಾಚಾರದ ಸಂದರ್ಭದಲ್ಲಿ ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಗುಂಡಿನ ಚಕಮಕಿ ನಡೆದ ಸ್ಥಳದ ಸಮೀಪದಲ್ಲಿ ವಾಸಿಸುತ್ತಿದ್ದ ಅನೇಕ ಗ್ರಾಮಸ್ಥರು ಬೇರೆಡೆ ಆಶ್ರಯ ಪಡೆಯುತ್ತಿದ್ದಾರೆ.