ನವ ದೆಹಲಿ (ಸೆ 13) : ಮುಂಬೈ ಮೇಲೆ ನಡೆದಿದ್ದ 26/11 ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ದೇಶದ ಎಲ್ಲಾ ಮಾಧ್ಯಮಗಳೂ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದಿದ್ದವು. ಅಲ್ಲದೆ, 'ದುರ್ಬಲ ಪ್ರಧಾನಿ' ಎಂದು ಹೀಯಾಳಿಸಲಾಗಿತ್ತು. ಆದರೆ, ಪುಲ್ವಾಮ ದಾಳಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಯಾವ ಮಾಧ್ಯಮಗಳು ಪ್ರಶ್ನಿಸಲಿಲ್ಲ. ಇನ್ನೂ ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಸ್ಥಾಪಿಸಿದ ಎಲ್ಲವನ್ನೂ ಬಿಜೆಪಿಯವರು ಏಳು ವರ್ಷಗಳಲ್ಲಿ ಮಾರಾಟ ಮಾಡಿದ್ದಾರೆ. ಆದರೆ, ಮಾಧ್ಯಮಗಳು ಈ ಬಗ್ಗೆಯೂ ಚಕಾರ ಎತ್ತುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.