ಕನ್ನಡ ಮನಸ್ಸು ನಾಗರಿಕತೆಗೆ ಮನಸೋತಿಲ್ಲ: ಕಣವಿ ಉವಾಚ

ಮೂಡುಬಿದಿರೆ, ಶುಕ್ರವಾರ, 28 ನವೆಂಬರ್ 2008 (16:19 IST)

WD
ಶತಶತಮಾನಗಳಿಂದಲೂ ಒಂದು ನಾಡಿನ, ಒಂದು ದೇಶದ ಮನಸ್ಸು ಸಾಮೂಹಿಕವಾಗಿ ಆಶಿಸಿದ, ಭಾವಿಸಿದ ಸವಿಸ್ತಾರ ಸಾಮಗ್ರಿಯನ್ನು ಕನ್ನಡ ಮನಸ್ಸು ಒಳಗೊಂಡಿದೆ. ಕನ್ನಡ ಮನಸ್ಸು ಕೇವಲ ನಾಗರಿಕತೆಗೆ ಮನ ಸೋತದ್ದಲ್ಲ, ಸಂಸ್ಕೃತಿಯನ್ನು ಅರಗಿಸಿಕೊಳ್ಳಲು ಮನಃಪೂರ್ವಕ ಪ್ರಯತ್ನಿಸಿದೆ. ಒಂದು ನಿರ್ದಿಷ್ಟ ಅಳತೆಗೋಲಿನಿಂದ ನಾಗರಿಕತೆಯ ಮಟ್ಟವನ್ನು ಅಳೆಯುವಂತೆ ಸಂಸ್ಕೃತಿಯನ್ನು ಅಳೆಯುವ ಅಳತೆಗೋಲುಗಳಿಲ್ಲ. ಯಾಕೆಂದರೆ ಸಂಸ್ಕೃತಿ ಭಾವನಿಷ್ಠವಾದುದು ಎಂದು ಖ್ಯಾತ ಕವಿ, ನಾಡೋಜ ಡಾ.ಚೆನ್ನವೀರ ಕಣವಿ ಹೇಳಿದ್ದಾರೆ.

ಇಲ್ಲಿ ಶುಕ್ರವಾರ ಆರಂಭವಾದ "ಆಳ್ವಾಸ್ ನುಡಿಸಿರಿ' ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ "ಕನ್ನಡ ಮನಸ್ಸು- ಶಕ್ತಿ ಮತ್ತು ವ್ಯಾಪ್ತಿ' ಎಂಬ ಸಮ್ಮೇಳನದ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಮಾತನಾಡಿದ ಅವರು, ಅನುಭವವು ವಸ್ತು ನಿಷ್ಠವಾಗಿದ್ದರೂ, ಭಾವನಿಷ್ಠ ಪ್ರತಿಭೆಯಿಂದಲೇ ಅದು ದೀಪ್ತವಾಗಿ ಹೊರಹೊಮ್ಮುವಂಥದು ಎಂದರಲ್ಲದೆ, ಈ ಕಾರಣಕ್ಕೆ, ಅದನ್ನು ಅರಿಯುವ ಬುದ್ಧಿಮತ್ತೆಯೊಂದಿಗೆ ಅನುಭವಿಸುವ ತನ್ಮಯತೆಯೂ ಬೇಕು ಎಂದು ನುಡಿದರು.

20ನೇ ಶತಮಾನದಲ್ಲಿ ತನ್ನ ಸುವರ್ಣ ಯುಗವನ್ನು ಕಂಡ ಕನ್ನಡ ಸಾಹಿತ್ಯ 21ನೇ ಶತಮಾನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಅಚ್ಚರಿಪಡುವಷ್ಟು ಹೊಸ ಹೊಸ ಪ್ರತಿಭೆಗಳು ಕಾಣಿಸಿಕೊಳ್ಳುತ್ತಿರುವುದು ಕನ್ನಡ ಸಾಹಿತ್ಯದ ಭವಿಷ್ಯದ ದೃಷ್ಟಿಯಿಂದ ಆಶಾದಾಯಕವಾಗಿದೆ ಎಂದವರು ನುಡಿದರು.

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ವಿರಾಟ್ ಶಕ್ತಿಯ ಪ್ರದರ್ಶನದ ನಿಟ್ಟಿನಲ್ಲಿ ಸಮಗ್ರ ಯೋಜನೆ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದ ಡಾ.ಕಣವಿ, ಅಭಿಜಾತ, ಪಾರಂಪರಿಕ ಭಾಷೆಯ ಸ್ಥಾನಮಾನ ಪಡೆದಿರುವ ಕನ್ನಡ ಭಾಷೆಯ ಪದೋಭಿವೃದ್ದಿಗೆ ತಜ್ಞರು ತಕ್ಕ ಯೋಜನೆ ಸಿದ್ಧಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.

ಆದಿಕವಿ ಪಂಪನಿಂದ ಹಿಡಿದು ಕುವೆಂಪುವರೆಗೆ ಕನ್ನಡದ ಶಕ್ತಿಯನ್ನು ಎತ್ತಿ ತೋರಿಸಿದ ಮಹಾನ್ ಸಾಹಿತಿಗಳು, ಕವಿಗಳು, ಕನ್ನಡ ಸಾಹಿತ್ಯ ಪರಂಪರೆಗಳ ಬಗ್ಗೆ ಸ್ಥೂಲವಾಗಿ ವಿವರಿಸಿದ ಚೆನ್ನವೀರ ಕಣವಿಯವರು, "ಕನ್ನಡ ಮನಸ್ಸು: ಶಕ್ತಿ ಮತ್ತು ವ್ಯಾಪ್ತಿ'ಯ ಬಗ್ಗೆ ಆಲೋಚಿಸಿದಾಗ ಶಕ್ತಿಯ ಬಗೆಗಿನ ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಎಂದರು.

ಕರ್ನಾಟಕ ಸಂಸ್ಕೃತಿಯ ಸಾರವನ್ನು ಒಂದು ಮಾತಿನಲ್ಲಿ ಹೇಳಬಹುದಾದರೆ ಸಮನ್ವಯ ಸಂಸ್ಕೃತಿ ಎನ್ನಬಹುದಾಗಿದೆ. ಅದು ಕೂಡಾ ಸುಮ್ಮನೆ ಸಾಧ್ಯವಾದದ್ದಲ್ಲ. ಏಕ-ಅನೇಕಗಳಲ್ಲಿ ಸಮನ್ವಯಗೊಂಡು ಅರಗಿಸಿಕೊಂಡು ಬಂದಿದೆ. ಪಂಪನಿಂದ ಹಿಡಿದು ಕುವೆಂಪುವರೆಗೆ ಕನ್ನಡ ಸಾಹಿತ್ಯ ಪ್ರವಾಹ ಜೀವನದ ನಿರಂತರ ಶಕ್ತಿಯಾಗಿ, ಭಕ್ತಿಯಾಗಿ, ಅನುರಕ್ತಿಯಾಗಿ, ಮುಕ್ತಿಯಾಗಿ ಆಯಾಕಾಲದ ಯುಗಧರ್ಮ, ಕವಿಮನೋಧರ್ಮವನ್ನು ಅವಲಂಬಿಸಿ ಕನ್ನಡ ಮನಸ್ಸನ್ನು ಹಿಗ್ಗಿಸಿದೆ. ಈ ಪರಂಪರೆ ಮುಂದುವರಿಯಬೇಕಾಗಿದೆ ಎಂದರು.

ಕರ್ನಾಟಕದ ಕಲ್ಪನೆ ನಮ್ಮ ಹೃದಯದಲ್ಲಿ ಚಿರಸ್ಥಾಯಿಯಾಗಬೇಕಾದರೆ ಇಲ್ಲಿನ ವಿಶಿಷ್ಟ ಗುಣಗಳನ್ನು, ಶಕ್ತಿಗಳನ್ನು ಅರಿತುಕೊಳ್ಳಬೇಕು. ಈ ಗುಣಶಕ್ತಿಗಳ ಚಿಂತನವೇ ನಾವು ಮಾಡಬೇಕಾದ ಸಾಧನೆ ಎಂದು ಕಣವಿ ನುಡಿದರು. ಯಾವುದೇ ರಾಜಕೀಯ ಒತ್ತಡವಾಗಲಿ, ಧಾರ್ಮಿಕ ಬಣ್ಣವಾಗಲಿ ಇಲ್ಲದೆ ಅರ್ಥಪೂರ್ಣವಾಗಿ ನುಡಿಸಿರಿ ಸಮ್ಮೇಳನ ನಡೆಸುತ್ತಿರುವುದಕ್ಕಾಗಿ ಡಾ.ಎಂ. ಮೋಹನ ಆಳ್ವಾ ಅವರನ್ನು ಕಣವಿ ಈ ಸಂದರ್ಭದಲ್ಲಿ ಅಭಿನಂದಿಸಿದರು.ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

ಚೌತಿ ವಿಶೇಷ: 'ವಕ್ರ'ತುಂಡ 'ಮಹಾ'ಕಾಯ ನಮಗೆಷ್ಟು ಮುಖ್ಯ?

ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿ ದಾಯಕ, ಗಣಗಳ ಅಧೀಶ್ವರ, ಚಿಣ್ಣರ ಪ್ರೀತಿಯ ದೇವ, ...

ಸ್ವರ್ಣಗೌರಿ ವ್ರತದ ಪೌರಾಣಿಕ ಕಥೆ

ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ...

ಬರಬರುತ್ತಾ ಉದಾರಿಯಾಗುತ್ತಿರುವ ಗಣೇಶ

ಅಂತೂ ಇಂತು ಗಣೇಶ ಚತುರ್ಥಿ ಬಂದಿದೆ. ಮುಂದಿನ ಮೂರು ನಾಲ್ಕು ವಾರ ಇನ್ನು ಏನಿದ್ದರೂ ಗಣೇಶನದ್ದೇ ಕಾರುಬಾರು. ...

ಸಂಭ್ರಮ, ಸಡಗರದ ಗಣೇಶನ ಹಬ್ಬ

ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. 1893ರಲ್ಲಿ ಸಮಾಜ ಸುಧಾರಕ ಮತ್ತು ...