ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದ ಹಂಪೆಯಲ್ಲಿನ ಪ್ರತಿಯೊಂದು ಕಲ್ಲು, ಕಲ್ಲುಗಳೂ ಕೂಡ ಹಿಂದಿನ ಗತವೈಭವವನ್ನು ಸಾರಿ ಹೇಳುತ್ತವೆ. ಗುರು ವಿದ್ಯಾರಣ್ಯರ ನಿರ್ದೇಶನದ ಮೇರೆಗೆ ಹರಿಹರ ಮತ್ತು ಬುಕ್ಕ ಕ್ರಿ.ಶ.1336ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದರು. ಹಂಪೆ ಅದರ ರಾಜಧಾನಿಯಾಗಿತ್ತು. ವಿರೂಪಾಕ್ಷ ಅವರ ಆರಾಧ್ಯ ದೈವ. ಯುನೆಸ್ಕೊ ಹಂಪೆಯನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸಿ ಅದರ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಹಂಪೆ ಇಂದು ವಿಶ್ವವಿಖ್ಯಾತ ಪ್ರವಾಸಿ ತಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.