ಒಲಿಂಪಿಕ್ಸ್‌ನಲ್ಲಿ ಚಿನ್ನದ ದಾಖಲೆ ಬರೆದ 2008

ಭುವನ್ ಪುದುವೆಟ್ಟು

WD
ಒಲಿಂಪಿಕ್ಸ್‌ನಲ್ಲಿ ರಾಷ್ಟ್ರ ಪಡೆದ ಮೊದಲ ಚಿನ್ನ, ಕಂಚಿನ ಪದಕಗಳು, ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡದ್ದು, ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ಅಗ್ರ 10ರೊಳಗೆ ಪ್ರವೇಶ ಪಡೆದದ್ದು, ಸ್ಕ್ವಾಷ್‌ನಲ್ಲಿ ಯುವ ಪ್ರತಿಭೆ ಜೋಶ್ನಾ ಚಿನ್ನಪ್ಪ ಮಿಂಚು, ಬಾಕ್ಸಿಂಗ್‌ ವಿಶ್ವಚಾಂಪಿಯನ್‌ಶಿಪ್ ಪಡೆದು ಕ್ರೀಡಾ ಇಲಾಖೆಯನ್ನು ಎಚ್ಚರಿಸಿದ ಮೇರಿ ಕಾಮ್ ಮುಂತಾದುವು ಸಾಧನೆ. ಅದೇ ರೀತಿ ನೀರಸವಾಗಿ ಕಂಡು ಬೇಸರ ಹುಟ್ಟಿಸಿದ್ದು ರಾಷ್ಟ್ರೀಯ ಕ್ರೀಡೆ ಹಾಕಿ, ಸಾನಿಯಾ ಮಿರ್ಜಾ ಆಡದೇ ಇದ್ದದ್ದು, ಶ್ರೀಶಾಂತ್ ಶೈಲಜಾ ಪೂಜಾರಿ-ಮೋನಿಕಾ ವಿವಾದ ಹೀಗೆ ಪಟ್ಟಿ ಉದ್ದುದ್ದ ಬೆಳೆಯುತ್ತಲೇ ಹೋಗುತ್ತದೆ.

ಟೆನಿಸ್...
ಸಾನಿಯಾ ಮಿರ್ಜಾ: ಭಾರತದ ಪಾಲಿಗೆ ಸಾನಿಯಾ ಮಿರ್ಜಾ ಈ ಬಾರಿ ಗಗನ ಕುಸುಮವಾಗುಳಿದದ್ದು ಟೆನಿಸ್ ಪ್ರೇಮಿಗಳಿಗೆ ಬೇಸರ ಹುಟ್ಟಿಸಿತು. ಒಲಿಂಪಿಕ್ಸ್‌ನಲ್ಲೂ ನಿರಾಶಾದಾಯಕ ಪ್ರದರ್ಶನ ತೋರಿದ ಆಕೆ ನಂತರ ಯಾವ ಟೂರ್ನಮೆಂಟುಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ವಿವಾದಗಳಿಂದ ಬೇಸತ್ತು ಬೆಂಗಳೂರು ಓಪನ್‌ನಿಂದಲೂ ಹೊರಗುಳಿದ ಆಕೆ ನಂತರ ಗಾಯಾಳುವಾಗಿ ಚಿಕಿತ್ಸೆ ಪಡೆಯುವ ಕಾರಣ ಹೇಳಿ ಮ‌ೂರ್ನಾಲ್ಕು ತಿಂಗಳು ಮಾಯವಾದರು. ಇದೀಗ ಅಭ್ಯಾಸ ನಿರತರಾಗಿದ್ದು, ಮುಂದಿನ ಹಾಂಕಾಂಗ್ ಓಪನ್‌ನಲ್ಲಿ ಆಡುವ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ರ‌್ಯಾಂಕಿಂಗ್‌ನಲ್ಲಿ ಕೂಡ ಆಕೆ ಬಹಳಷ್ಟು ಹಿನ್ನಡೆ ಕಂಡಿದ್ದಾರೆ. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದರಾದರೂ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಗಮನೀಯ ಪ್ರದರ್ಶನ ತೋರದೆ ಆರಂಭಿಕ ಹಂತದಲ್ಲೇ ಹೊರ ಬಿದ್ದರು. ಆದರೂ ವರ್ಷಾಂತ್ಯದಲ್ಲಿ ಚೆನ್ನೈಯ ಎಂಜಿಆರ್ ಯ‌ೂನಿವರ್ಸಿಟಿಯಿಂದ ಡಾಕ್ಟರೇಟ್ ಗೌರವವನ್ನು ಪಡೆದುಕೊಂಡಿದ್ದಾರೆ.

ಲಿಯಾಂಡರ್ ಪೇಸ್: ಲಿಯಾಂಡರ್ ಪೇಸ್ ಯುಎಸ್ ಓಪನ್‌ನಲ್ಲಿ ಕಾರಾ ಬ್ಲ್ಯಾಕ್ ಜತೆಗೂಡಿ ಮಿಕ್ಸ್‌ಡ್ ಡಬಲ್ಸ್ ವಿಭಾಗದ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಲುಕಾಸ್ ದ್ಲೋಹಿ ಜತೆಗೂಡಿ ಎಟಿಪಿ ಥಾಯ್ಲೆಂಡ್ ಓಪನ್ ಡಬಲ್ಸ್ ಪ್ರಶಸ್ತಿಯನ್ನು ಕೂಡ ಗೆದ್ದುಕೊಂಡಿದ್ದಾರೆ. ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ ಬೀಜಿಂಗ್ ಒಲಿಂಪಿಕ್ಸ್‌ನ ಡಬಲ್ಸ್ ವಿಭಾಗದಲ್ಲಿ ಪ್ರಬಲ ಹೋರಾಟ ನೀಡಿತ್ತಾದರೂ ಸೆಮಿ ಫೈನಲ್ ಪ್ರವೇಶ ಪಡೆಯಲು ಸಫಲವಾಗಿರಲಿಲ್ಲ.

ಮಹೇಶ್ ಭೂಪತಿ: ಮತ್ತೊಬ್ಬ ಡಬಲ್ಸ್ ಆಟಗಾರ ಮಹೇಶ್ ಭೂಪತಿಯವರು ತನ್ನ ಜತೆಗಾರ ಮಾರ್ಕ್ ನೋವ್ಲ್‌ ಜತೆಗೂಡಿ ಬಾಸೆಲ್ ಓಪನ್ ಟೈಟಲ್ ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ. ಉಳಿದಂತೆ ಮಿಯಾಮಿ ಓಪನ್, ಮೊನಾಕೊ, ನ್ಯೂ ಹವೆನ್ ಯು.ಎಸ್., ವಿಯೆನ್ನಾ ಹಾಗೂ ಮ್ಯಾಡ್ರಿಡ್ ಓಪನ್‌ಗಳಲ್ಲಿ ಜತೆಗಾರ ಮಾರ್ಕ್ ನೋವ್ಲ್ ಜತೆಗೂಡಿ ರನ್ನರ್-ಅಪ್ ಆಗಿದ್ದಾರೆ. ಹಳೆ ಗೆಳೆಯ ಲಿಯಾಂಡರ್ ಪೇಸ್ ಜತೆಗೂಡಿ ನೆದರ್‌ಲ್ಯಾಂಡ್‌ನಲ್ಲಿ ರನ್ನರ್ ಅಪ್ ಎನಿಸಿದ್ದಾರೆ.

ಸೋಮದೇವ್: ಭಾರತದ ನಂಬರ್ ವನ್ ಸಿಂಗಲ್ಸ್ ಆಟಗಾರ ಸೋಮದೇವ್ ಈ ವರ್ಷದ ಸಾಧನೆ ಮೆಚ್ಚುವಂತದ್ದೇ. ತನ್ನ ಕ್ರೀಡಾಜೀವನದ ಅತ್ಯುತ್ತಮ ಸಾಧನೆಯಿಂದ ಟೆನಿಸ್ ರ‌್ಯಾಂಕಿಂಗ್‌ನಲ್ಲಿ 201ನೇ ಸ್ಥಾನಕ್ಕೆ ಬಂದಿದ್ದು, ಆ ಮ‌ೂಲಕ ಭಾರತದ ನಂಬರ್ 1 ಸಿಂಗಲ್ಸ್ ಆಟಗಾರ ಎನಿಸಿಕೊಂಡಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಇವರು 574ನೇ ಸ್ಥಾನ ಇವರದ್ದಾಗಿದೆ. ಇತ್ತೀಚಿನ ನಾಶ್‌ವಿಲ್ಲೆ ಚಾಲೆಂಜರ್‌ನಲ್ಲಿ ಸೋಮದೇವ್ ಹಲವು ಟಾಪ್ 100ರೊಳಗಿನ ಆಟಗಾರರನ್ನು ಮಣಿಸಿದ್ದರಿಂದ ರ‌್ಯಾಂಕಿಂಗ್‌ನಲ್ಲಿ ಸುಮಾರು 40ರಷ್ಟು ಮೇಲೇರಿ ಎಲ್ಲರೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ನಾಶ್‌ವಿಲ್ಲೆ ಚಾಲೆಂಜರ್‌ನ ಫೈನಲ್‌ನಲ್ಲಿ ಸೋಮದೇವ್ ಅವರು ರಾಬರ್ಟ್ ಕೆಂಡ್ರಿಕ್ ಎದುರು ಪರಾಭವ ಅನುಭವಿಸಿದ್ದರೂ ಕೂಡ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮೇಲೇರಿದ್ದರು.

ಸ್ಕ್ವಾಷ್...
ಇಲ್ಲಿ ಭಾರತದಿಂದ ಹೆಸರು ಮಾಡಿದವರು ಇತ್ತೀಚಿನ ದಿನಗಳಲ್ಲಿ ಜೋಶ್ನಾ ಚಿನಪ್ಪ ಮಾತ್ರ. ಎರಡನೇ ಬಾರಿಗೆ ವಿಸ್ಪಾ ಪ್ರಶಸ್ತಿಯನ್ನು ಮಲೇಷ್ಯಾದಲ್ಲಿ ಈ ವರ್ಷ ಮಡಿಲಿಗೆ ಹಾಕಿಕೊಂಡದ್ದು ಹೆಗ್ಗಳಿಕೆ. ಜತೆಗೆ ಎನ್‌ಎಸ್‌ಸಿ ಸೂಪರ್ ಸ್ಯಾಟಲೈಟ್ ನಂ.4 ಟೂರ್ನಮೆಂಟಿನಲ್ಲಿ ಕೂಡ ಚಾಂಪಿಯನ್ ಆಗಿದ್ದಾರೆ. ಆಕರ್ಷಕವಾಗಿ ಕಾಣುವ ಈಕೆ ಆಟದಲ್ಲೂ ಹಿಂದಿಲ್ಲ. ಹಾಗಾಗಿ ಭಾರತದ ಮುಂದಿನ ಭರವಸೆಯ ಆಟಗಾರ್ತಿ ಎಂದೇ ಹೇಳಬಹುದು.

ಬ್ಯಾಡ್ಮಿಂಟನ್...
PTI
ಸೈನಾ ನೆಹ್ವಾಲ್: ಈಕೆ ಈಗ ಭಾರತದ ನಂಬರ್ ವನ್ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ವಿಶ್ವ ರ‌್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿ ಗುರುತಿಸಿಕೊಂಡವರು. ಒಲಿಂಪಿಕ್ಸ್‌‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮ‌ೂಲಕ ಈ ಸಾಧನೆ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ. ಜತೆಗೆ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್, ಈ ವರ್ಷದ ಕಾಮನ್‌ವೆಲ್ತ್ ಯೂತ್ ಗೇಮ್ಸ್‌ನಲ್ಲಿ ಚಿನ್ನ, ಇಂಡಿಯನ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಹಾಗೂ ಯೊನೆಕ್ಸ್ ಚೈನೀಸ್ ತೈಪೆ ಓಪನ್ ಗೆದ್ದುಕೊಂಡ ಸಾಧನೆ ಕೂಡ ಈ ವರ್ಷ ಮಾಡಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಕೊಡ ಮಾಡುವ '2008ರ ಅತ್ಯಂತ ಭರವಸೆಯ ಆಟಗಾರ್ತಿ' ಎಂಬ ಬಿರುದು ಕೂಡ ಆಕೆಯ ಸಾಧನೆಯ ಪಟ್ಟಿಯಲ್ಲಿ ದಪ್ಪ ಅಕ್ಷರಗಳಲ್ಲಿ ಕಾಣಿಸಿದೆ. ಬಿಡಬ್ಲ್ಯೂಎಫ್ ಸೂಪರ್ ಸಿರೀಸ್ ಮಾಸ್ಟರ್ಸ್‌ನ ಸೆಮಿಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಸಾಧಿಸಿದ್ದು ವರ್ಷಾಂತ್ಯದಲ್ಲಿ.

ಬ್ಯಾಡ್ಮಿಂಟನ್‌ನಲ್ಲಿ ಇನ್ನಿತರ ಉತ್ತಮ ಸಾಧನೆ ತೋರುತ್ತಿರುವವರೆಂದರೆ ಅಧಿತಿ ಮುತಾತ್ಕರ್ ಮತ್ತು ನೇಹಾ ಪಂಡಿತ್. ಪುರುಷರ ವಿಭಾಗದಲ್ಲಿ ಚೇತನ್ ಆನಂದ್ ಭಾರತದಲ್ಲೇ ನಂಬರ್ ವನ್ ಹಾಗೂ ವಿಶ್ವ ರ‌್ಯಾಂಕಿಂಗ್‌ನಲ್ಲಿ 15ನೇ ಸ್ಥಾನ. ಅರವಿಂದ್ ಭಟ್, ಅನೂಪ್ ಶ್ರೀಧರ್, ಪರುಪಲ್ಲಿ ಕಶ್ಯಪ್, ಆನಂದ್ ಪವಾರ್ ಹಾಗೂ ಜಯರಾಮ್ ಉತ್ತಮ ಸಾಧನೆ ತೋರಿಸಿದ್ದಾರೆ.

ಶೂಟಿಂಗ್...
ಅಭಿನವ್ ಬಿಂದ್ರಾ: ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅತ್ಯದ್ಭುತ ಪ್ರದರ್ಶನದ ಮ‌ೂಲಕ ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆದ್ದುಕೊಂಡದ್ದು ಇಡೀ ದೇಶವೇ ಹೆಮ್ಮೆಪಡುವಂತಾಗಿತ್ತು. 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಪಡೆಯುವ ಮ‌ೂಲಕ ವೈಯಕ್ತಿಕ ವಿಭಾಗದಲ್ಲಿ ಈ ಪದಕ ಗಳಿಸಿದ ಮೊದಲ ಭಾರತೀಯ ಹಾಗೂ 1980ರ ಪುರುಷರ ಹಾಕಿ ತಂಡದ ಚಿನ್ನದ ನಂತರ ಪಡೆದ ಮೊದಲ ಚಿನ್ನದ ಪದಕ ಎಂಬ ದಾಖಲೆ ಬರೆದರು. ಜತೆಗೆ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್ ಬಿಡುಗಡೆ ಮಾಡಿರುವ ವಿಶ್ವ ರ‌್ಯಾಂಕಿಂಗ್ ಪಟ್ಟಿಯ ಅಗ್ರ ಹತ್ತರಲ್ಲಿ ಒಲಿಂಪಿಕ್ ಚಾಂಪಿಯನ್ ಅಭಿನವ್ ಬಿಂದ್ರಾ ತನ್ನ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಉಳಿದಂತೆ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್ ಬಿಡುಗಡೆ ಮಾಡಿರುವ ವಿಶ್ವ ರ‌್ಯಾಂಕಿಂಗ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವರು ಇಬ್ಬರು ಭಾರತೀಯರು ಮಾತ್ರ. ಗಗನ್ ನಾರಂಗ್ ಮ‌ೂರು ಸ್ಥಾನ ಮೇಲಕ್ಕೇರಿದ್ದು, ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಆರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಪುರುಷರ ಡಬಲ್ ಟ್ರಾಪ್ ಇವೆಂಟ್‌ ವಿಭಾಗದಲ್ಲಿ ರೊಂಜನ್ ಸಿಂಗ್ ಸೋಧಿ ತನ್ನ 10ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಗಗನ್ ನಾರಂಗ್, ಸಮರೇಶ್ ಜಂಗ್, ರಾಜವರ್ಧನ್ ಸಿಂಗ್ ರಾಥೋಡ್ ಶೂಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರದೆ ನಿರಾಸೆ ಮ‌ೂಡಿಸಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ

2004ರಲ್ಲಿ ಆರಂಭವಾಯಿತು ಈ ನುಡಿಸಿರಿ ಎಂಬ ನುಡಿ ಜಾತ್ರೆಯ ಸರಣಿ. ಈ ಬಾರಿ ನವೆಂಬರ್ 28, 29 ಹಾಗೂ 30ರಂದು ...

ಆಳ್ವಾಸ್ ನುಡಿಸಿರಿಗೆ ಕಣವಿ ಸಾರಥ್ಯ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕನ್ನಡ ನಾಡು-ನುಡಿಯ ...

ಆಳ್ವಾಸ್ ನುಡಿಸಿರಿ-08: ನಿಮ್ಮ ವೆಬ್‌ದುನಿಯಾದಲ್ಲಿ

ಕನ್ನಡ ಮಣ್ಣಿನಲ್ಲಿ ಹಾಸುಹೊಕ್ಕಾಗಿರುವ ಜನಪದೀಯ ಸಂಸ್ಕೃತಿ, ಸಂಗೀತ, ಸಾಹಿತ್ಯಕ್ಕೆ ಸಹೃದಯರಿಂದ ಯಾವ ...