ಬಾಕ್ಸಿಂಗ್ ವಿಶ್ವ ಚಾಂಪಿಯನ್ ಮೇರಿ ಕಾಮ್

PR
ಮಣಿಪುರದ ಕುಗ್ರಾಮದಲ್ಲಿ ಎಮ್. ತೊಂಪು ಕಾಮ್ ಮತ್ತು ಸನೈಖಾಮ್ ಕಾಮ್ ದಂಪತಿಗಳಿಗೆ 1983ರ ಮಾರ್ಚ್ 1ರಂದು ಹುಟ್ಟಿದವರು ಮೇರಿ ಕಾಮ್. ಮಣಿಪುರದ ಮೊಯಿರಾಂಗ್ ಲಾಂಖಾಯ್ ಎಂಬಲ್ಲಿನ ಕಾಂಗತ್ತೈ ಗ್ರಾಮದಲ್ಲಿ ವಾಸಿಸುತ್ತಿರುವ ಮೇರಿಯ ಪೂರ್ಣ ಹೆಸರು ಮಾಂಗ್ಟೆ ಚುಂಗ್‌ನೆಜಾಂಗ್ ಮೇರಿ ಕಾಮ್.

ಬಡ ಕುಟುಂಬದಲ್ಲೇ ಹುಟ್ಟಿದವರು ಮೇರಿ. ಆಕೆಯ ತಂದೆ ಒಬ್ಬ ರೈತ. ತೊಂಪು ಅವರಿಗೆ ಮೇರಿಯೂ ಸೇರಿದಂತೆ ಮ‌ೂರು ಮಂದಿ ಹೆಣ್ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದ. ಶಾಲಾ ದಿನಗಳಲ್ಲಿ ಫುಟ್ಬಾಲ್ ಮತ್ತು ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿಯಿಂದ ಆಡುತ್ತಿದ್ದ ಮೇರಿಯ ಒಲವು ಬಾಕ್ಸಿಂಗ್ ಕಡೆಗಿತ್ತು. ಅದಕ್ಕೆ ಸ್ಪೂರ್ತಿ ಕೊಟ್ಟದ್ದು ಮಣಿಪುರದ ಡಿಂಗೋ ಸಿಂಗ್ ಎಂಬ ಅಂತಾರಾಷ್ಟ್ರೀಯ ಖ್ಯಾತಿಯ ಬಾಕ್ಸರ್. ಮಹಮ್ಮದ್ ಆಲಿಯನ್ನು ಕೂಡ ಆಕೆ ಬಹುವಾಗಿ ಮೆಚ್ಚುತ್ತಿದ್ದರು.

2000 ಇಸವಿಯ ಒಂದು ದಿನ ಆಕೆ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರನ್ನು ಭೇಟಿಯಾಗಿ ತನ್ನ ಬಾಕ್ಸಿಂಗ್ ಪ್ರೀತಿಯನ್ನು ತೋಡಿಕೊಂಡರು. ಕೋಚ್ ಮೇರಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವಕಾಶ ಕೊಡುವ ಭರವಸೆ ನೀಡಿದರು. ಪುರುಷರಿಗೆ ತರಬೇತಿ ನೀಡುವ ರೀತಿಯಲ್ಲಿಯೇ ಆಕೆಗೂ ತರಬೇತಿ ನೀಡಲಾಯಿತು. ಆದರೂ ಇವ್ಯಾವುದೇ ವಿಚಾರಗಳು ಮನೆಯವರಿಗೆ ತಿಳಿಯದಂತೆ ನಿಭಾಯಿಸಿದರು.

ಕಠಿಣ ಶ್ರಮವಹಿಸಿದ ಆಕೆ ಅದೇ ವರ್ಷ ಮಣಿಪುರ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ವಿಜಯಿಯಾದರು. ಅದರ ಫೋಟೋ ಕೂಡ ಪತ್ರಿಕೆಗಳಲ್ಲಿ ಬಂತು. ಮಗಳು ಬಾಕ್ಸಿಂಗ್‌ನಲ್ಲಿದ್ದಾಳೆ ಎಂದು ತಿಳಿದುಕೊಂಡ ತಂದೆ ಕೆಂಡಾಮಂಡಲವಾದರು. ನಿನ್ನ ಮುಖ ಜಜ್ಜಿ ಹೋದರೆ ಯಾರು ಮದುವೆಯಾಗುತ್ತಾರೆ ಎಂದು ಹಿಗ್ಗಾಮುಗ್ಗ ಬೈಯ್ದಿದ್ದರು. ನಂತರ ಮೇರಿಯ ಹಿತೈಷಿಗಳು ತಂದೆಯ ಮನವೊಲಿಸುವಲ್ಲಿ ಸಫಲರಾದ ಮೇಲೆ ಆಕೆಯ ಓಟಕ್ಕೆ ಕಡಿವಾಣ ಹಾಕುವವರು ಯಾರೂ ಇರಲಿಲ್ಲ.

ತನ್ನ ಪ್ರತಿಭೆಯನ್ನು ಜಗತ್ತಿಗೆ ತೋರಿಸಬೇಕೆಂಬ ಆಕೆಯ ತುಡಿತಕ್ಕೆ ಸಾಕಷ್ಟು ಪ್ರೋತ್ಸಾಹವೂ ದೊರಕಿತ್ತು. ಅದೇ ಹೊತ್ತಿಗೆ ಸಾಲು ಸಾಲಾಗಿ ಗೆಲುವು ಆಕೆಯ ಬೆನ್ನು ತಟ್ಟಲು ಸದಾ ಕಾತರಿಸುತ್ತಿತ್ತು. ಗೆಲುವಿನ ರುಚಿ ಕಂಡ ಮೇರಿ ನಂತರ ನಿಲ್ಲಲೇ ಇಲ್ಲ. ಹೋದ ಕಡೆಯಲ್ಲೆಲ್ಲಾ ಗೆಲುವಿನ ಬುತ್ತಿ ಮೇರಿಯ ತುತ್ತಾಗುತ್ತಿತ್ತು.

ಇದಕ್ಕೆ ಉತ್ತಮ ಉದಾಹರಣೆ ಸಿಗುವುದು ಬಾಕ್ಸಿಂಗ್ ಕಲಿತ ನಾಲ್ಕೇ ವರ್ಷಗಳಲ್ಲಿ ಆಕೆ ರಾಷ್ಟ್ರೀಯ ಚಾಂಪಿಯನ್ ಆಗಿದ್ದು. ಈ ನಡುವೆ ಹಿಸ್ಸಾರ್ ಮತ್ತು ತೈವಾನ್‌ನಲ್ಲಿ ನಡೆದ ಮಹಿಳೆಯರ ಚಾಂಪಿಯನ್‌ಶಿಪ್‌ನಲ್ಲೂ ಪ್ರಶಸ್ತಿಗಳನ್ನು ಪಡೆದರು. ಮಹತ್ವದ ತಿರುವು ಲಭಿಸಿದ್ದು 2004ರಲ್ಲಿ ಟರ್ಕಿಯಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪಡೆದದ್ದು. ನಂತರ ಆಕೆ ಸೋಲು ಕಾಣಲೇ ಇಲ್ಲ. ಮುಟ್ಟಿದ್ದೆಲ್ಲ ಚಿನ್ನ ಎಂಬಂತಾಯಿತು. 2005ರಲ್ಲಿ ರಷ್ಯಾ, 2007ರಲ್ಲಿ ದೆಹಲಿ, 2008ರಲ್ಲಿ ಚೀನಾ ಹೀಗೆ ಒಟ್ಟು ನಾಲ್ಕು ಬಾರಿ ಸತತ ವಿಶ್ವ ಚಾಂಪಿಯನ್ ಪಟ್ಟ ಆಕೆಗೆ ದೊರಕಿತು.

ಒಂದು ಕಾಲದಲ್ಲಿ ಪ್ರಶಸ್ತಿ ಜತೆ ಬಂದ ಹಣದಲ್ಲೇ ಜೀವನ ಸಾಗಿಸಬೇಕಾದ, ತರಬೇತಿಯ ಖರ್ಚುವೆಚ್ಚಗಳನ್ನು ಕೂಡ ಅದರಲ್ಲೇ ಭರಿಸಬೇಕಾದ ಅನಿವಾರ್ಯತೆ ಆಕೆಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹಣಕ್ಕಾಗಿ ಪರದಾಟ ನಡೆಸುತ್ತಿದ್ದ ಮೇರಿ ಕಾಮ್ ಈಗ ಮಣಿಪುರದ ಪ್ರತಿಷ್ಠಿತ ಪೊಲೀಸ್ ಅಧಿಕಾರಿ. ಜತೆಗೆ ಆಕೆಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ಆಯೋಜಕರಾಗಿ ಹಲವು ಕಂಪನಿಗಳು ಪೈಪೋಟಿಯಿಂದ ಮುಂದೆ ಬರುತ್ತಿವೆ.

ಈಗಲೂ ಆಕೆ ದಿನಕ್ಕೆ ಸುಮಾರು ಐದರಿಂದ ಆರು ಗಂಟೆ ಕಠಿಣ ಅಭ್ಯಾಸ ನಡೆಸುತ್ತಾರೆ. ಜತೆಗೆ ತರಬೇತಿ ನೀಡುವ ಕಾರ್ಯದಲ್ಲೂ ಮುಂಚೂಣಿಯಲ್ಲಿದ್ದಾರೆ. ಮಣಿಪುರದಲ್ಲಿ ಬಾಕ್ಸಿಂಗ್ ಅಕಾಡೆಮಿ ಸ್ಥಾಪಿಸಬೇಕೆನ್ನುವುದು ಆಕೆಯ ಕನಸು. ಕೆಲ ವರ್ಷಗಳ ಹಿಂದೆ ಮದುವೆಯಾಗಿರುವ ಮೇರಿ ಕಾಮ್ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಒಂದೆರಡು ವರ್ಷ ಮಾತ್ರ ಬಾಕ್ಸಿಂಗ್‌ನಿಂದ ದೂರ ಉಳಿದಿದ್ದರು. ಈಗ ಮತ್ತೆ ಆಖಾಡಕ್ಕಿಳಿದು ಚೀನಾದಲ್ಲಿ ನಡೆದ ಚಾಂಪಿಯನ್‌ಶಿಪ್ ತನ್ನದಾಗಿಸಿಕೊಂಡಿದ್ದಾರೆ.

ಮೇರಿಯ ಸಾಧನೆಗಾಗಿ ಸರಕಾರ ಆಕೆಗೆ ಅರ್ಜುನ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಆದರೂ ಖೇಲ್ ರತ್ನ ಪ್ರಶಸ್ತಿ ಸಿಕ್ಕಿಲ್ಲವೆಂಬ ನೋವು ಆಕೆಯನ್ನು ಬೆಂಬಿಡದೆ ಇನ್ನೂ ಕಾಡುತ್ತಿದೆ. ಮೊನ್ನೆ ಚೀನಾದ ನಿಂಗ್ಬೊ ಸಿಟಿಯಲ್ಲಿ ನಡೆದ ಐದನೇ ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಬಾರಿ ಚಿನ್ನದ ಪದಕ ಗೆದ್ದ ನಂತರ ಮತ್ತೆ ಆಕೆಗೆ ಖೇಲ್ ರತ್ನ ಪ್ರಶಸ್ತಿಯ ಹಿಂದಿನ ರಾಜಕೀಯ ನೆನಪಾಗಿ ಪತ್ರಕರ್ತರೆದುರು ತನ್ನ ಅಳಲು ತೋಡಿಕೊಂಡಿದ್ದಾರೆ. ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥ ಮಿಲ್ಖಾ ಸಿಂಗ್‌ರವರು "ಮೇರಿ ಕಾಮ್ ಯಾರು? ಆಕೆ ಯಾವ ಆಟವನ್ನು ಆಡುತ್ತಿದ್ದಾರೆ?" ಎಂದು ಕೇಳಿ ಅವಮಾನಿಸಿದ್ದರು ಎಂದು ತನ್ನ ನೋವನ್ನು ಹೊರಗೆಡವಿದ್ದಾರೆ. ಇದೀಗ ಮೇರಿಯ ಕೂಗನ್ನು ಕೇಳಿಸಿಕೊಂಡಿರುವ ಕ್ರೀಡಾ ಸಚಿವ ಗಿಲ್ ಪರಿಹಾರದ ಭರವಸೆ ನೀಡಿರುವುದರಿಂದ ಆಕೆ ಕೂಡ ಸಂಭ್ರಮದ ಕ್ರಿಸ್‌ಮಸ್ ತನ್ನದಾಗುವುದೆಂಬ ಆಸೆಯನ್ನು ಹೊತ್ತು ಮಣಿಪುರಕ್ಕೆ ಮರಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ವಿಶ್ವಚಾಂಪಿಯನ್ ಆಗಬೇಕೆನ್ನುವುದು ಕೂಡ ಮೇರಿ ಆಸೆ. ಆದರೆ ಒಲಿಂಪಿಕ್ಸ್‌ನ ಬಾಕ್ಸಿಂಗ್‌ನಲ್ಲಿ ಮಹಿಳೆಯರಿಗೆ ಅವಕಾಶವೇ ಇಲ್ಲ. ಹಾಗಾಗಿ ಅದು ಸದ್ಯದ ಮಟ್ಟಿಗೆ ದೂರದ ಮಾತು. ಆದರೂ ಒಲಿಂಪಿಕ್ಸ್‌ಗೆ ಮಹಿಳೆಯರ ಬಾಕ್ಸಿಂಗ್ ಸೇರಿಸುವ ಬಗ್ಗೆ ಒತ್ತಾಯಗಳು ಕೇಳಿ ಬರುತ್ತಿರುವುದರಿಂದ ಮನದಾಳದಲ್ಲಿ ಆಕೆಗೆ ಭರವಸೆ ಮ‌ೂಡುತ್ತಿದೆ.

"ದೇವರಿಂದ ನನ್ನ ಸ್ಫೂರ್ತಿಯನ್ನು ಹೀಗೆಯೇ ಉಳಿಸಿಕೊಳ್ಳುತ್ತೇನೆ. ನನ್ನ ಕುಟುಂಬದ ಸಹಕಾರ ಮತ್ತು ದೇವರ ಆಶೀರ್ವಾದದೊಂದಿಗೆ 2012ರವರೆಗೆ ಯಶಸ್ಸನ್ನು ಮುಂದುವರಿಸುವ ಭರವಸೆ ನನಗಿದೆ" ಎಂದು ಮೇರಿ ಆಶಾವಾದ ವ್ಯಕ್ತಪಡಿಸುತ್ತಾರೆ. ಅದಕ್ಕಿಂತ ಮೊದಲು ಆಕೆಗೆ ಖೇಲ್ ರತ್ನ ಪ್ರಶಸ್ತಿ ಸಿಗಲಿ ಎಂಬ ಹಾರೈಕೆ ಬಾಕ್ಸಿಂಗ್ ಪ್ರಿಯರಿಂದ.ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ

2004ರಲ್ಲಿ ಆರಂಭವಾಯಿತು ಈ ನುಡಿಸಿರಿ ಎಂಬ ನುಡಿ ಜಾತ್ರೆಯ ಸರಣಿ. ಈ ಬಾರಿ ನವೆಂಬರ್ 28, 29 ಹಾಗೂ 30ರಂದು ...

ಆಳ್ವಾಸ್ ನುಡಿಸಿರಿಗೆ ಕಣವಿ ಸಾರಥ್ಯ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕನ್ನಡ ನಾಡು-ನುಡಿಯ ...

ಆಳ್ವಾಸ್ ನುಡಿಸಿರಿ-08: ನಿಮ್ಮ ವೆಬ್‌ದುನಿಯಾದಲ್ಲಿ

ಕನ್ನಡ ಮಣ್ಣಿನಲ್ಲಿ ಹಾಸುಹೊಕ್ಕಾಗಿರುವ ಜನಪದೀಯ ಸಂಸ್ಕೃತಿ, ಸಂಗೀತ, ಸಾಹಿತ್ಯಕ್ಕೆ ಸಹೃದಯರಿಂದ ಯಾವ ...