75ರ ಸಂಭ್ರಮದಲ್ಲಿ ಕನ್ನಡ ಚಿತ್ರರಂಗ: 2008ರಲ್ಲಿ ಗಣನೀಯ ವೃದ್ಧಿ

ರವಿಪ್ರಕಾಶ್ ರೈ

MOKSHENDRA
ಕನ್ನಡ ಚಿತ್ರರಂಗಕ್ಕೀಗ ಎಪ್ಪತ್ತೈದರ ಸಂಭ್ರಮ. ಅನೇಕ ಏಳು ಬೀಳುಗಳನ್ನು ಎದುರಿಸಿ, ಪರಭಾಷಾ ಚಿತ್ರಗಳ ಸ್ಪರ್ಧೆಯ ನಡುವೆಯೂ ಇತರ ಚಿತ್ರರಂಗ ಗುರುತಿಸುವ ರೀತಿಯಲ್ಲಿ ಬೆಳೆದಿದೆ. ಕೆಲವೇ ಕೆಲವು ನಟರು ವರ್ಷಾನುಗಟ್ಟಲೆ ಚಾಲ್ತಿಯಲ್ಲಿರುವ ಪದ್ಧತಿಯೂ ಬದಲಾಗಿದೆ. ಅದಕ್ಕೆ ತಕ್ಕಂತೆ ಪ್ರೇಕ್ಷಕರ ಮನಸ್ಥಿತಿಯೂ ಬದಲಾಗಿದೆ. ಪ್ರೇಕ್ಷಕ ಈಗ ಬರೀ ನಾಯಕನನ್ನು ಆರಾಧಿಸುವುದಿಲ್ಲ. ಬದಲಾಗಿ ಉತ್ತಮ ಚಿತ್ರಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದಾನೆ. ತನ್ನ ನೆಚ್ಚಿನ ನಟನೇ ಆಗಿರಬಹುದು. ಆತನ ಚಿತ್ರ ಚೆನ್ನಾಗಿಲ್ಲವೆಂದರೆ ಪ್ರೇಕ್ಷಕನ ನಿಯತ್ತು ಬದಲಾಗುತ್ತದೆ. ಹಿಂದಿನಂತೆ ಒಬ್ಬ ನಟನಿಗೆ ನಿಯತ್ತಾಗಿರುವ ಪ್ರೇಕ್ಷಕ ಕಡಿಮೆಯಾಗಿದ್ದಾನೆ. ಒಂದು ಲೆಕ್ಕದಲ್ಲಿ ಇದು ಉತ್ತಮ ಬೆಳವಣಿಗೆ. ಇದರಿಂದ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತವೆ.

2008 ವರ್ಷ ಕನ್ನಡ ಚಿತ್ರರಂಗಕ್ಕೆ ಸಂಭ್ರಮದ ವರ್ಷ ಎಂದರೆ ತಪ್ಪಾಗದು. ಅತಿ ಹೆಚ್ಚು ಚಿತ್ರ ಬಿಡುಗಡೆಯಾಗುವುದರೊಂದಿಗೆ ಅನೇಕ ಹೊಸ ಮುಖಗಳು ಕೂಡಾ ಬೆಳಕಿಗೆ ಬಂದಿದ್ದು, ಇದೇ ವರ್ಷದಲ್ಲಿ. ಇಲ್ಲಿಯವರೆಗೆ ಸುಮಾರು 120 ಕನ್ನಡದಲ್ಲಿ ಚಿತ್ರಗಳು ಬಿಡುಗಡೆಯಾಗಿವೆ. ಇನ್ನಷ್ಟು ಚಿತ್ರಗಳು ಬಿಡುಗಡೆಯ ಹಾದಿಯಲ್ಲಿವೆ. ಇವುಗಳಲ್ಲಿ ಹೊಸ ಹೊಸ ಪ್ರತಿಭೆಗಳದ್ದೆ ಕಾರುಬಾರು. ಹಾಗಾಂತ ಬಿಡುಗಡೆಯಾದ ಚಿತ್ರಗಳು ಹಿಟ್ ಆಗಿವೆ ಎನ್ನುವಂತಿಲ್ಲ. ಇದರಲ್ಲಿ ಹೆಚ್ಚಿನ ಚಿತ್ರಗಳು ಎಡ್ರಸ್ ಇಲ್ಲದೇ ಹೋಗಿವೆ. ಇನ್ನೂ ಕೆಲವು ಕುಂಟುತ್ತಾ 50 ದಿನ ಪೂರೈಸಿವೆ. ಆದರೆ, ಇವೆಲ್ಲ ಉತ್ತಮ ಚಿತ್ರ ಎನ್ನುವಂತಿಲ್ಲ.
MOKSHENDRA


ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಈ ರೀತಿ ಚಿತ್ರಗಳು ಬರಲು ಅದರಲ್ಲೂ ಹೊಸಬರ ಚಿತ್ರಗಳೇ ಹೆಚ್ಚು ಬರಲು ಕಳೆದ ವರ್ಷ ಬಿಡುಗಡೆಯಾಗಿ ಬಾಕ್ಸ್ ಆಫೀಸನ್ನೂ ಕೊಳ್ಳೆ ಹೊಡೆದ 'ಮುಂಗಾರು ಮಳೆ', 'ದುನಿಯಾ' ಹಾಗೂ 'ಆ ದಿನಗಳು' ಚಿತ್ರಗಳು ಪ್ರೇರಣೆಯಾಗಿವೆ ಎಂದರೆ ತಪ್ಪಲ್ಲ. ಟಿವಿ ನಿರೂಪಕನಾಗಿದ್ದ ಗಣೇಶ್ ನಟಿಸಿದ ಸಣ್ಣ ಬಜೆಟ್ನಲ್ಲಿ ನಿರ್ಮಾಣವಾದ 'ಮುಂಗಾರು ಮಳೆ' ಚಿತ್ರ ಆ ಪರಿ ಹಿಟ್ ಆಗುತ್ತದೆಂದು ಸ್ವತಃ ನಿರ್ದೇಶಕ ಯೋಗರಾಜ್ ಭಟ್‌ರಿಗೂ ಗೊತ್ತಿರಲಿಲ್ಲ. ಆದರೆ ಈ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗಣೇಶ್ ಗೋಲ್ಡನ್ ಸ್ಟಾರ್ ಎಂಬ ಬಿರುದು ಪಡೆಯುವುದರೊಂದಿಗೆ ರಾತ್ರೋರಾತ್ರಿ ಕೋಟಿ ವೀರರಾದರು. ಆ ನಂತರ ಏನಾಯಿತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅದೇ ರೀತಿ ದುನಿಯಾ ಹಾಗೂ ಆ ದಿನಗಳು ಕೂಡಾ ಅಷ್ಟೇ. ಚಿತ್ರಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿದ್ದ ವಿಜಯ್ ಹಾಗೂ ಏಕಾಏಕಿ ಅಮೆರಿಕಾದಿಂದ ಹಾರಿ ಬಂದು ಆ ದಿನಗಳು ಚಿತ್ರದಲ್ಲಿ ನಟಿಸಿದ ಚೇತನ್ ಚಿತ್ರಗಳು ಭರ್ಜರಿ ಹಿಟ್ ಆಗುವುದರೊಂದಿಗೆ 2008 ರಲ್ಲಿ ಹೊಸ ಹೊಸ ನಿರ್ಮಾಪಕರು ಚಿತ್ರ ನಿರ್ಮಿಸಲು ಆಸಕ್ತಿ ತೋರಿದರು. ಆದರೆ ಇವರೆಲ್ಲಾ ತಮ್ಮ ಸಂಬಂಧಿಕರನ್ನೋ ಅಥವಾ ಮಗನನ್ನೋ ಹೀರೋ ಆಗಿಸಿ ಚಿತ್ರ ತೆಗೆದರು. ಆದರೆ ಇವರ್ಯಾರು ಕಥೆ ಬಗ್ಗೆ ಗಮನ ಕೊಡಲಿಲ್ಲ. ಬದಲಾಗಿ ತಾನೊಬ್ಬ ನಿರ್ಮಾಪಕನಾಗಬೇಕು ಅಥವಾ ನಿರ್ದೇಶಕನಾಗಬೇಕೆಂಬ ಆಸೆ ಹೊತ್ತು ಚಿತ್ರ ನಿರ್ಮಿಸಿದರು. ಪ್ರೇಕ್ಷಕ ಮಾತ್ರ ತುಂಬಾ ಬುದ್ಧಿವಂತ. ಇಂತಹ ಯಾವುದೇ ಡಬ್ಬಾ ಚಿತ್ರಗಳನ್ನು ಕೈ ಹಿಡಿಯಲಿಲ್ಲ. ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕಿದರು.

MOKSHENDRA
2008ರಲ್ಲಿ ಬಂದ ಹೆಚ್ಚಿನ ಚಿತ್ರಗಳಲ್ಲಿ ಹೊಸಬರೇ ನಾಯಕ-ನಾಯಕಿಯಾಗಿದ್ದರು. ಆದರೆ ಇವರ್ಯಾರು ಶಾಸ್ತ್ರೋಕ್ತವಾಗಿ ಅಭಿನಯ ಕಲಿತು ಬಂದವರಲ್ಲ. ನಿರ್ದೇಶಕರ ವಿಷಯಕ್ಕೆ ಬಂದರೂ ಅಷ್ಟೇ, ಹೆಚ್ಚಿನವರು ಹೊಸಬರೇ. ಒಂದೆರಡು ವರ್ಷ ಸಹಾಯಕ ನಿರ್ದೇಶಕರಾಗಿ ಅಲ್ಪಸ್ವಲ್ಪ ಅನುಭವ ಪಡೆದು ನಿರ್ದೇಶಕರಾದವರು. ಇದರಿಂದ ಹೆಚ್ಚಿನ ಹೊಸ ಚಿತ್ರಗಳು ಮಕಾಡೆ ಮಲಗಿವೆ.

2008ರಲ್ಲಿ ಬಿಡುಗಡೆಯಾದ ದೊಡ್ಡ ನಿರ್ದೇಶಕರ ಹಾಗೂ ನಟರ ಚಿತ್ರಗಳನ್ನು ಕೂಡಾ ಪ್ರೇಕ್ಷಕ ತಿರಸ್ಕರಿಸಿದ್ದಾನೆ. ಉದಾಹರಣೆಗೆ ದುನಿಯಾ ಚಿತ್ರದ ನಿರ್ದೇಶಕ ಸೂರಿ ನಿರ್ದೇಶಿಸಿದ 'ಇಂತಿ ನಿನ್ನ ಪ್ರೀತಿಯ' ಚಿತ್ರವನ್ನು ಸಾರಸಗಟಾಗಿ ಪ್ರೇಕ್ಷಕರು ತಿರಸ್ಕರಿಸಿದರು. ಸೂರಿ ಇಲ್ಲಿ ಚಿತ್ರದೊಳಗೆ ಇಡೀ ಬಾರನ್ನೇ ಎಳೆದು ತಂದಿದ್ದರು. ಇದು ಪ್ರೇಕ್ಷಕನಿಗೆ ಇಷ್ಟವಾಗಲಿಲ್ಲ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ, ರಾಕ್ಲೈನ್ ವೆಂಕಟೇಶ್ ನಿರ್ಮಾಣದ 'ಬೊಂಬಾಟ್', ದರ್ಶನ್ ನಾಯಕರಾಗಿದ್ದ ಅರ್ಜುನ, ಇಂದ್ರ ಶಿವರಾಜ್ಕುಮಾರ್ ನಾಯಕರಾಗಿದ್ದ ಮಾದೇಶ ಚಿತ್ರಗಳು ವಾರದೊಳಗೆ ಚಿತ್ರಮಂದಿರದಿಂದ ಎತ್ತಂಗಡಿಯಾದವು. ಜನಾರ್ದನ ಮಹರ್ಷಿಯಿಂದ ಕಥೆ ಪಡೆದು ಬೇರೆ ಬೇರೆ ಭಾಷೆಗಳ ದೃಶ್ಯಗಳನ್ನು ಯಥಾವತ್ತಾಗಿ ನಿರ್ದೇಶಕ ಡಿ. ರಾಜೇಂದ್ರ ಬಾಬು ಬೊಂಬಾಟ್‌ನಲ್ಲಿ ಭಟ್ಟಿ ಇಳಿಸಿದ್ದರು. ಜೊತೆಗೆ ಗಣೇಶ್‌ರಿಂದ ಭರ್ಜರಿ ಫೈಟ್ ಮಾಡಿಸುವ ದುಸ್ಸಾಹಸಕ್ಕೂ ಕೈ ಹಾಕಿದರು. ಪ್ರೇಕ್ಷಕ ಇದನ್ನು ತಿರಸ್ಕರಿಸಿದ.ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ

2004ರಲ್ಲಿ ಆರಂಭವಾಯಿತು ಈ ನುಡಿಸಿರಿ ಎಂಬ ನುಡಿ ಜಾತ್ರೆಯ ಸರಣಿ. ಈ ಬಾರಿ ನವೆಂಬರ್ 28, 29 ಹಾಗೂ 30ರಂದು ...

ಆಳ್ವಾಸ್ ನುಡಿಸಿರಿಗೆ ಕಣವಿ ಸಾರಥ್ಯ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕನ್ನಡ ನಾಡು-ನುಡಿಯ ...

ಆಳ್ವಾಸ್ ನುಡಿಸಿರಿ-08: ನಿಮ್ಮ ವೆಬ್‌ದುನಿಯಾದಲ್ಲಿ

ಕನ್ನಡ ಮಣ್ಣಿನಲ್ಲಿ ಹಾಸುಹೊಕ್ಕಾಗಿರುವ ಜನಪದೀಯ ಸಂಸ್ಕೃತಿ, ಸಂಗೀತ, ಸಾಹಿತ್ಯಕ್ಕೆ ಸಹೃದಯರಿಂದ ಯಾವ ...