ಯಾತ್ರಾರ್ಥಿಗಳಿಗೆ ಮಳೆಯ ಆತಂಕ, ಯಾತ್ರೆಗೂ ಅಡ್ಡಿ!

ಬೆಂಗಳೂರು| Ramya kosira| Last Modified ಗುರುವಾರ, 25 ನವೆಂಬರ್ 2021 (10:27 IST)
ಬೆಂಗಳೂರು : ಕಳೆದ ಕೆಲವು ದಿನಗಳಿಂದ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗಿದ್ದು, ವಿವಿಧ ದೇಗುಲಗಳ ದರ್ಶನಕ್ಕೆ ಯಾತ್ರಾರ್ಥಿಗಳು ಪರದಾಡುವಂತಾಗಿದೆ.
ಇನ್ನೂ ಎರಡು ವಾರಗಳ ಕಾಲ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿರುವುದರಿಂದ ಭಕ್ತಾದಿಗಳು ಯಾತ್ರೆ ಹೊರಡುವ ಕುರಿತು ಯೋಚಿಸುವಂತಾಗಿದೆ.
ಹೀಗಾಗಿ ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳಿಗೆ, ದೇಗುಲಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಯಾತ್ರೆ ಕೈಗೊಳ್ಳುವ ಭಕ್ತರು ಹವಾಮಾನ ಇಲಾಖೆ ನೀಡುವ ಮುನ್ಸೂಚನೆಯನ್ನು ಗಮನಿಸಿಯೇ ಮುಂದುವರೆಯಬೇಕೆಂದು ದೇಗುಲಗಳ ಆಡಳಿತ ಮಂಡಳಿಗಳು ಮನವಿ ಮಾಡಿವೆ.
ಕಳೆದ ವಾರ ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರಸಿದ್ಧ ಧಾರ್ಮಿಕ ತಿರುಮಲ - ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಆವರಣಕ್ಕೆ ನೀರು ನುಗ್ಗಿತ್ತು. ದೇವಸ್ಥಾನದ ಆವರಣ, ಶ್ರೀವಾರಿ ಮೆಟ್ಟಿಲು, ವೈಕುಂಠ ದರ್ಶನ ಸಾಲು ಜಲಾವೃತಗೊಂಡಿತ್ತು. ಬೆಟ್ಟದ ಮೇಲಿನ ರಸ್ತೆಗಳನ್ನು ಕೊಚ್ಚಿಕೊಂಡು ನೀರು ಹರಿದಿತ್ತು. ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿದ್ದರಿಂದ ಬೆಟ್ಟ ಏರಲು ಕೂಡ ಭಕ್ತರಿಗೆ ನಿರ್ಬಂಧ ವಿಧಿಸಲಾಗಿತ್ತು. ಅಲ್ಲದೆ ದೇಗುಲದ ಬಾಗಿಲನ್ನೇ ಮುಚ್ಚಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು.
ತಿರುಮಲದಲ್ಲಿರುವ ಒಟ್ಟು 7 ಸಾವಿರ ಕೊಠಡಿಗಳಲ್ಲಿ ನಾರಾಯಣಗಿರಿ ವಿಶ್ರಾಂತಿ ಗೃಹದಲ್ಲಿ 2 ಕೊಠಡಿಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ಉಳಿದ ಕೊಠಡಿಗಳು ಸುಭದ್ರವಾಗಿವೆ ಎಂದು ಹೆಚ್ಚುವರಿ ಸಿಇಒ ಎ.ವಿ. ಧರ್ಮ ರೆಡ್ಡಿ ಹೇಳಿದ್ದಾರೆ. ತಿರುಪತಿಯನ್ನು ಬೆಂಗಳೂರು, ಚೆನ್ನೈ, ಹೈದರಾಬಾದ್, ವಿಜಯವಾಡಕ್ಕೆ ಸಂಪರ್ಕಿಸುವ ರಸ್ತೆಗಳ ಸಂಪರ್ಕವೂ ಸ್ಥಗಿತಗೊಂಡಿತ್ತು. ತರುಮಲಕ್ಕೆ ತೆರಳುವ ಎರಡು ಮಾರ್ಗಗಳಲ್ಲಿ ಶ್ರೀವಾರಿ ಮೆಟ್ಟು ಮಾರ್ಗ ತೀರಾ ಹದಗೆಟ್ಟಿದೆ. ಅಲಿಪಿರಿ ಮಾರ್ಗಕ್ಕೆ ಯಾವುದೇ ತೊಂದರೆಯಾಗಿಲ್ಲ. ಈ ರಸ್ತೆಗಳನ್ನೆಲ್ಲ ಸರಿಪಡಿಸಲಾಗುತ್ತಿದೆ ಎಂದು ಅವರು ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :