ಗಗನಕ್ಕೇರಿದೆ ತರಕಾರಿ ಬೆಲೆ!

ಬೆಂಗಳೂರು| Ramya kosira| Last Modified ಶುಕ್ರವಾರ, 12 ನವೆಂಬರ್ 2021 (16:55 IST)

ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಳೆದ ಎರಡೂ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.
ಮಳೆಯಿಂದಾಗಿ ತರಕಾರಿ ಧಾರಣೆಗಳು ಗಗನಮುಖಿಯಾಗಿವೆ. ಮಾರುಕಟ್ಟೆಗೆ ಬರುತ್ತಿದ್ದ ತರಕಾರಿಗಳ ಪ್ರಮಾಣವೂ ಕಡಿಮೆಯಾಗಿದೆ. ದುಡ್ಡು ಕೊಟ್ಟರೂ ಒಳ್ಳೆಯ ಮಾಲು ಸಿಗುತ್ತಿಲ್ಲ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದರೆ, ಕಷ್ಟಪಟ್ಟು ದುಡಿದು ಬೆಳೆದ ಬೆಳೆ ಇನ್ನೇನು ಮಾರುಕಟ್ಟೆಗೆ ಸಾಗಿಸಬೇಕು ಎನ್ನುವ ಹೊತ್ತಿಗೆ ಹಾಳಾಗಿದೆ ಎಂದು ರೈತರು ಅಲವತ್ತುಕೊಳ್ಳುತ್ತಿದ್ದಾರೆ. ಬಹುತೇಕ ತರಕಾರಿಗಳ ಧಾರಣೆ ₹15ರಿಂದ 20 ಹೆಚ್ಚಾಗಿದೆ. ಬೆಂಡೆಕಾಯಿ ₹ 40ರಿಂದ ₹ 70ಕ್ಕೆ, ಬಟಾಣಿ ₹ 200ರಿಂದ ₹ 280ಕ್ಕೆ, ಮೂಲಂಗಿ ₹ 20ರಿಂದ ₹ 40ಕ್ಕೆ, ಕ್ಯಾರೆಟ್ ₹ 70ರಿಂದ 90ಕ್ಕೆ, ಈರುಳ್ಳಿ ₹ 30ರಿಂದ ₹ 60ಕ್ಕೆ, ಟೊಮೆಟೊ ₹40ರಿಂದ ₹ 70ಕ್ಕೆ, ಆಲೂಗಡ್ಡೆ ₹ 20ರಿಂದ ₹ 40ಕ್ಕೆ, ನವಿಲು ಕೋಸು ₹ 40ರಿಂದ ₹ 120ಕ್ಕೆ, ಹುರುಳಿಕಾಯಿ ₹ 50ರಿಂದ ₹ 70ಕ್ಕೆ, ಕ್ಯಾಪ್ಸಿಕಂ ₹ 50 ರಿಂದ ₹ 80ಕ್ಕೆ ಹೆಚ್ಚಾಗಿದೆ.
ಅಕ್ಕಪಕ್ಕದ ರಾಜ್ಯಗಳಿಗೂ ಬೆಂಗಳೂರು ಮಾರುಕಟ್ಟೆಯಿಂದ ತರಕಾರಿ ಕಳಿಸಲಾಗುತ್ತಿತ್ತು. ಆದರೆ ಇದೀಗ ಬೆಂಗಳೂರಿಗೆ ಬರುವ ತರಕಾರಿ ಪ್ರಮಾಣ ಕಡಿಮೆಯಾಗಿರುವ ಕಾರಣ ಇತರ ರಾಜ್ಯಗಳಿಗೆ ಕಳಿಸಲು ಅಗುತ್ತಿಲ್ಲ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ. ಮಳೆ ಇದೇ ರೀತಿ ಮುಂದುವರಿದರೆ ಹಣ ಕೊಡುತ್ತೇವೆ ಎಂದರೂ ತರಕಾರಿ ಸಿಗದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.ಇದರಲ್ಲಿ ಇನ್ನಷ್ಟು ಓದಿ :