ತಾಜ್ ಮಹಲ್ ಸಂಗೀತ ನಿರ್ದೇಶಕ ಅಭಿಮಾನ್ ಅವರ ಅವಕಾಶಗಳ ಬಾಗಿಲು ಈಗ ತೆರೆದಿದೆ. ಅವರೇ ಹೇಳುವ ಪ್ರಕಾರ 34 ಅವಕಾಶಗಳು ಅವರ ಮನೆ ಬಾಗಿಲುವರೆಗೆ ಬಂದಿವೆ. ಆದರೆ ಅವೆಲ್ಲವನ್ನು ಅವರು ಒಪ್ಪಿಕೊಳ್ಳಲಿಲ್ಲ. ಆದರೂ ಆರು ಚಿತ್ರಗಳು ಅವರ ಕೈಯಲ್ಲಿವೆ. ರಾಮುವಿನಂತಹ ದೊಡ್ಡ ನಿರ್ಮಾಪಕರು ಈಗ ಅಭಿಮಾನ್ ಅವರನ್ನು ಕರೆದಿದ್ದಾರೆ. ಈ ಬಗ್ಗೆ ಅಭಿಮಾನ್ ಅವರು ಹೇಳುವುದಿಷ್ಟು, 'ಈ ಬಗ್ಗೆ ಸಂತೋಷವೂ ಇಲ್ಲ, ಬೇಸರವೂ ಇಲ್ಲ. ಈ ಹಿಂದೆ ಸಾಕಷ್ಟು ಒದ್ದಾಡಿದ್ದೇನೆ. ಒಳ್ಳೇ ಹಾಡು ಕೊಟ್ಟಿದ್ದೇನೆ. ಆಗ ಯಾರೂ ಕರೆದಿಲ್ಲ. ಅದರಲ್ಲಿ ಅವರ ತಪ್ಪೂ ಇಲ್ಲ. ಯಾಕೆಂದರೆ ಎಲ್ಲರೂ ನಮ್ಮ ಹಿಂದಿನ ರೆಕಾರ್ಡ್ ನೋಡುತ್ತಾರೆ. ಹಿಟ್ ಚಿತ್ರ ಕೊಟ್ಟರಷ್ಟೇ ಅವಕಾಶ ಸಿಗೋದು..' ಅಭಿಮಾನ್ ಅವರು ಸದ್ಯ ಕಿರಣ ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಗೀತ ಹಾಗೂ ಸಂಭಾಷಣಾ ಕಾರ್ಯದಲ್ಲಿ ತೊಡಗಿದ್ದಾರೆ.