ತನ್ನ ಮೊದಲ ಚಿತ್ರದಲ್ಲೇ ಬಿಗ್ ಬಿ ಅಮಿತಾಬ್ ಜತೆಗೆ ನಟಿಸಿ ತನ್ನ ಅದ್ಭುತ ನಟನೆಗೆ ಬಾಲಿವುಡ್ ಜಗತ್ತನ್ನು ಸೆಳೆದ ಮಾದಕ ನಟಿ ಜಿಯಾ ಖಾನ್ ಎಲ್ಲಿ ಹೋದಳು? ಈ ಪ್ರಶ್ನೆ 2006ರ ನಂತರ ಹಲವರಲ್ಲಿ ಕಾಡಿದ್ದಿದೆ. ತನ್ನ 18ರ ವಯಸ್ಸಿನಲ್ಲೇ ರಾಮ್ ಗೋಪಾಲ್ ವರ್ಮಾರ ಕೈಗೆ ಸಿಕ್ಕಿದ್ದ ಈ ಮಾದಕ ಬೊಂಬೆ, ಸೆಕ್ಸೀ ಕನ್ಯೆ ಮುಂದೊಂದು ದಿನ ಖಂಡಿತ ಊರ್ಮಿಳಾಳಂತೆ ವರ್ಮಾ ಗರಡಿಯಲ್ಲಿ ಪಳಗುತ್ತಾಳೆ ಎಂದೆಲ್ಲಾ ಸುದ್ದಿಯಾಗಿತ್ತು. ಆದರೆ ಮತ್ತೆ ಆಕೆಯನ್ನು ಕಂಡಿದ್ದು 2008ರ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಅಮೀರ್‌ಖಾನ್‌ನ ಬಹುನಿರೀಕ್ಷಿತ ಚಿತ್ರ ಘಜನಿಯಲ್ಲಿ. ಅದೂ ನಾಯಕಿಯ ಪಾತ್ರದಲ್ಲಿ ಅಲ್ಲವಾದ್ದರಿಂದ ಜಿಯಾ ಹೆಸರು ಅಷ್ಟು ಕೇಳಿಬರಲಿಲ್ಲ.
ನೋಟದಲ್ಲೇ ಕೊಲ್ಲುವ ತಾಕತ್ತಿರುವ ಈ ಸೆಕ್ಸೀ ಕನ್ಯೆ ಜಿಯಾ ಖಾನ್‌ಗೆ ಅಷ್ಟೊಂದು ಬೇಡಿಕೆ, ಅವಕಾಶ ಇಲ್ಲ ಎಂದರೆ ಮಾತ್ರ ಆಕೆ ಸುತಾರಾಂ ಒಪ್ಪಿಕೊಳ್ಳುವುದಿಲ್ಲ. ತನ್ನ ಸಾಧನೆ ಬಗ್ಗೆ ಖುಷಿಯಿಂದ ಮಾತನಾಡುತ್ತಾಳೆ. 18ರ ವಯಸ್ಸಿಗೇ ಬಿಗ್ ಬಿ ಜತೆಗೆ ನಾಯಕಿ ನಟಿಯಾಗಿ ನಟಿಸುವ ಅವಕಾಶ ಪಡೆವ ಭಾಗ್ಯ ಯಾರಿಗುಂಟು ಯಾರಿಗಿಲ್ಲ ಎಂದು ಹುಬ್ಬೇರಿಸುತ್ತಾಳೆ. ನಂತರ ಎರಡನೇ ಚಿತ್ರವೂ ಅಮೀರ್ ಖಾನ್ ಜತೆಗೆ. ಇದೊಂದು ಅದೃಷ್ಟವೇ ಸರಿ. ಎಲ್ಲರಿಗೂ ಇಂತಹ ಅವಕಾಶವೆಲ್ಲ ಸಿಕ್ಕುವುದಿಲ್ಲ ಎನ್ನುವ ತೃಪ್ತಿ ಜಿಯಾಳದು.
ಅಂದಹಾಗೆ, ಜಿಯಾ ಘಜ್ನಿಯ ನಂತರ ಶಾಹಿದ್ ಕಪೂರ್ ಜತೆಗೆ ನಾಯಕಿ ನಟಿಯಾಗಿ ಯಾಹೂ ಅನ್ನೋ ಚಿತ್ರದಲ್ಲಿ ನಟಿಸುತ್ತಿದ್ದಾಳಂತೆ. ಹಿಂದೆ ಫಿದಾ, ಇಶ್ಕ್ ವಿಶ್ಕ್ ಚಿತ್ರಗಳನ್ನು ನಿರ್ದೇಶಿಸಿದ್ದ ಕೆನ್ ಘೋಷ್ ಈ ಯಾಹೂ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಜಿಯಾಗೆ ನೃತ್ಯ ಶಿಕ್ಷಕಿಯ ಪಾತ್ರವಂತೆ. 2009ರಲ್ಲೇ ಬಿಡುಗಡೆಯಾಗುವ ಇದರ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಇದಲ್ಲದೆ ಈಕೆಯ ಬಳಿ ಸದ್ಯ ಅಕ್ಷಯ್ ಕುಮಾರ್ ಅವರ ಜತೆಗೆ ಹೆಸರಿಡದ ಚಿತ್ರವೊಂದರಲ್ಲೂ ನಟಿಸಲು ಅವಕಾಶ ಸಿಕ್ಕಿದೆ ಎಂಬ ಸುದ್ದಿಯಿದೆ.
IFM
ರಾಮ್ ಗೋಪಾಲ್ ವರ್ಮಾರ ನಿಶಬ್ದ್ ಎಂಬ ಚಿತ್ರದಲ್ಲಿ ಜಿಯಾ ಮೊದಲ ಬಾರಿಗೆ ಬಾಲಿವುಡ್‌ಗೆ ಕಾಲಿಟ್ಟು ವಿಪರೀತ ಸುದ್ದಿ ಮಾಡಿದ್ದಳು. ಇದು 18ರ ಹುಡುಗಿಗೂ 60ರ ಮುದುಕನಿಗೂ ನಡೆಯುವ ಪ್ರೇಮಕಥೆಯ ಕಥಾಹಂದರವುಳ್ಳ ಚಿತ್ರ. ಈ ಚಿತ್ರ ಭಾರತದ ಮಟ್ಟಿಗೆ ಅಸಾಂಪ್ರದಾಯಿಕ ಕಥೆಯಾದ್ದರಿಂದ ಸಹಜವಾಗಿಯೇ ಫ್ಲಾಪ್ ಆಯಿತು. ಅದ್ಭುತ ಸಿನೆಮಾಟೋಗ್ರಫಿ, ಅದ್ಭುತ ಕ್ಯಾಮರಾ ವರ್ಕ್, ಅದ್ಭುತ ನಟನೆ ಈ ಚಿತ್ರದ ಪ್ಲಸ್ ಪಾಯಿಂಟ್ ಆಗಿತ್ತು. ಅಮಿತಾಬ್ ಬಚ್ಚನ್ ಜತೆ ಯಾವುದೇ ಹೆದರಿಕೆಯಿಲ್ಲದೆ ಈ 18ರ ಹುಡುಗಿ ನಿಸ್ಸಂಕೋಚವಾಗಿ ಆತ್ಮವಿಶ್ವಾಸದಿಂದ ನಟಿಸಿದ್ದಳು. ಅಲ್ಲದೆ, ತನ್ನ ಸೆಕ್ಸೀ ಅಪೀಲ್‌ನಿಂದ ಹಲವು ಬಾಲಿವುಡ್ ಬೆಡಗಿಯರಲ್ಲಿ ನಡುಕ ಹುಟ್ಟಿಸುವಂತೆ ಮಾಡಿದ್ದೂ ಸುಳ್ಳಲ್ಲ.
ಮೊದಲ ಚಿತ್ರದಲ್ಲೇ ವಿವಾದದ ಮೂಲಕ ಬೆಳಕಿಗೆ ಬಂದ ಈ ಮಾದಕ ಪ್ರತಿಭೆಗೆ ತನ್ನ ಮೊದಲ ಚಿತ್ರದ ಬಗ್ಗೆ ಸ್ವಲ್ಪವೂ ಪಶ್ಚಾತ್ತಾಪವಿಲ್ಲವಂತೆ. ಬದಲಾಗಿ ಆಕೆಗೆ ಹೆಮ್ಮೆ. ಜಿಯಾ ಹೇಳುವಂತೆ, ''ನನಗೆ ನಿಶಬ್ದ್ ಒಂದು ಸವಾಲಾಗಿತ್ತು. ವಿವಾದವೇನೋ ಸರಿ. ಯಾಕಂದರೆ ಅಂತಹ ಚಿತ್ರವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲು ಭಾರತ ಇನ್ನೂ ತನ್ನ ಮಡಿವಂತಿಕೆಯಿಂದ ಹೊರಬಂದಿರಲಿಲ್ಲ. ಆದರೆ ಬಿಗ್ ಬಿ ಅಮಿತಾಬ್ ಹಾಗೂ ಹಿರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜತೆಗೆ ಮೊದಲ ಚಿತ್ರದಲ್ಲೇ ನಾಯಕಿಯಾಗಿ ನಟಿಸುವುದು ಸುಲಭದ ಮಾತಲ್ಲ. ಆ ಚಿತ್ರದ ಬಗ್ಗೆ ನನಗೆ ಈಗಲೂ ಹೆಮ್ಮೆಯಿದೆ'' ಅನ್ನುತ್ತಾಳೆ.
ಘಜ್ನಿಯಲ್ಲಿ ಚಿತ್ರದ ಪೋಸ್ಟರ್‌ಗಳಲ್ಲಿ ಅಮೀರ್ ಹಾಗೂ ಆಸಿನ್ ಅವರನ್ನೇ ಹೈಲೈಟ್ ಮಾಡಿದ್ದರ ಬಗ್ಗೆ ಜಿಯಾಗೆ ಅಸಮಾಧಾನವಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಜಿಯಾ ಮಾತೆತ್ತುವುದಿಲ್ಲ. ''ನನಗೆ ಸಿಕ್ಕಿದ ಎರಡನೇ ಚಿತ್ರ ಅಮೀರ್ ಖಾನ್ ಜತೆಗಿನ ಘಜ್ನಿ. ಅಮೀರ್ ಖಾನ್ ಜತೆಗೆ ಕೆಲಸ ಮಾಡುವುದು ಒಂದು ಅದ್ಭುತ ಅನುಭವ. ಕೇವಲ ಎರಡು ವರ್ಷದಲ್ಲಿ ನಾನು ಹತ್ತು ವರ್ಷ ದೊಡ್ಡವಳಾದಂತೆ ಅನಿಸುತ್ತಿದೆ. ಆಸಿನ್ ಕೂಡಾ ದಕ್ಷಿಣದಲ್ಲಿ ಬೇಡಿಕೆಯ ನಟಿ. ಅವಳಿಂದಲೂ ನಾನು ಸಾಕಷ್ಟು ಕಲಿತೆ'' ಎಂದು ವಿಷಯವನ್ನು ತಣ್ಣಗಾಗಿಸಿದ್ದಾಳೆ ಈ ಜಾಣೆ.
ಇಂತಿಪ್ಪ ಜಿಯಾ ಖಾನ್ ಸಾಮಾನ್ಯಳಲ್ಲ. ಮೊದಲ ಹೆಸರು ನಫೀಸಾ. ಏಂಜಲೀನಾ ಜೂಲಿ ನಟಿಸಿದ ಜಿಯಾ ಚಿತ್ರ ಬಿಡುಗಡೆಯಾದ ಸಮಯದಲ್ಲೇ ನಫೀಸಾ ಹೆಸರು ಜಿಯಾ ಖಾನ್ ಆಗಿ ಮಾರ್ಪಾಡಾಯಿತು. ಹುಟ್ಟಿದ್ದು ಫೆ.20, 1988ರಲ್ಲಿ ನ್ಯೂಯಾರ್ಕ್‌ನಲ್ಲಿ. ಚೆಲ್ಸಿಯಾ, ಲಂಡನ್‌ಗಳಲ್ಲೂ ಬೆಳೆದಳು. ತಾಯಿ ರಬಿಯಾ ಅಮಿನ್ 1980ರ ದಶಕದಲ್ಲಿ ಹಿಂದಿ ಚಿತ್ರನಟಿ. ತಂದೆ ಆಲಿ ರಿಜ್ವಿ ಖಾನ್ ಅಮೆರಿಕದಲ್ಲೇ ನೆಲೆಸಿರುವ ಭಾರತೀಯ. ಜಿಯಾ ಲಂಡನ್‌ನಲ್ಲಿ ಸಾಹಿತ್ಯ ಹಾಗೂ ಫಿಲ್ಮ್ ಸ್ಟಡೀಸ್ ಓದಿದ್ದಾಳೆ. ನ್ಯೂಯಾರ್ಕ್‌ನಲ್ಲಿ ಲೀ ಸ್ಟ್ರಾಸ್‌ಬರ್ಗ್ ಅಕಾಡೆಮಿ ಆಫ್ ಡ್ರಮಾಟಿಕ್ ಆಟ್ಸ್‌ನಲ್ಲಿ ವಿದ್ಯಾರ್ಥಿನಿಯಾಗಿದ್ದಾಗ ಮುಂಬೈಯಿಂದ ಬಂದ ನಿಶಬ್ದ್ ಆಫರ್‌ಗಾಗಿ ನ್ಯೂಯಾರ್ಕ್ ತ್ಯಜಿಸಿ ಓದಿಗೆ ಗುಡ್‌ಬೈ ಹೇಳಿ ಭಾರತಕ್ಕೆ ಓಡಿ ಬಂದಳು. ಅಲ್ಲದೆ, ಲಂಡನ್‌ನ ಖ್ಯಾತ ಒಪರಾದಲ್ಲಿ ತರಬೇತಿ ಪಡೆದಿದ್ದಾಳೆ. ಅಲ್ಲಿ ಆಕೆ ಪಿಯಾನೋ ನುಡಿಸುವುದರಲ್ಲಿ ನಿಷ್ಣಾತೆ. ಚೆನ್ನಾಗಿ ಹಾಡಲೂ ಗೊತ್ತು. ನಿಶಬ್ದ್‌ನಲ್ಲಿ ಹಿನ್ನೆಲೆ ಗಾಯಕಿಯಾಗಿಯೂ ಈಕೆ ಕೆಲಸ ಮಾಡಿದ್ದಳು. ನೃತ್ಯದಲ್ಲೂ ಎತ್ತಿದ ಕೈ. ಸಾಲ್ಸಾ, ಲಾಂಬಡಾ, ಸಾಂಬಾ ಹಾಗೂ ಕಥಕ್ ಚೆನ್ನಾಗಿ ಗೊತ್ತು.
ಜಿಯಾ 16ರ ಹರೆಯದಲ್ಲಿದ್ದಾಗ ಮುಖೇಶ್ ಭಟ್ ಅವರ ತುಮ್ಸಾ ನಹೀ ದೇಖಾ ಚಿತ್ರದಲ್ಲಿ ನಟಿಸಲು ಆಫರ್ ಬಂದಿತ್ತು. ಆದರೆ, ಆಗ ತಾನು ಆ ಪಾತ್ರಕ್ಕೆ ತಕ್ಕಂತೆ ಪ್ರಬುದ್ಧಳಾಗಿಲ್ಲ ಎಂದು ನಿರ್ಧಾರಕ್ಕೆ ಬಂದ ಜಿಯಾ ಆ ಅವಕಾಶವನ್ನು ಮರಳಿಸಿದ್ದಳು. ಇದು ದಿಯಾ ಮಿರ್ಜಾ ಪಾಲಿಗೆ ದಕ್ಕಿತ್ತು. ಎರಡು ವರ್ಷದ ನಂತರ ವರ್ಮಾರ ನಿಶಬ್ದ್‌ನಲ್ಲಿ ಅವಕಾಶ ಸಿಕ್ಕಿತು ಎನ್ನು ಹಳೆಯದನ್ನು ನೆನಪಿಸುತ್ತಾಳೆ ಜಿಯಾ.
ಜಿಯಾ ಆಗಾಗ ಏನಾದರೊಂದು ಅವಾಂತರ ಸುದ್ದಿ ಮಾಡುತ್ತಿರುತ್ತಾಳೆ. ಇತ್ತೀಚೆಗೆ ಫೋಟೋ ಶೂಟ್ ಒಂದರಲ್ಲಿ ತನ್ನ ಒಳಚಡ್ಡಿ ಫೋಟೋಗ್ರಾಫರ್‌ಗೆ ಕಾಣುವಂತೆ ಹಾಕಿದ್ದಳು ಎಂದು ಸುದ್ದಿಯಾಗಿತ್ತು. ಇದನ್ನು ಜಿಯಾ ಬೇಕಂತಲೇ ಮಾಡಿದಳೋ, ಗೊತ್ತಿಲ್ಲದೆ ಆಗಿಹೋಯಿತೋ ಅಂತ ಗೊತ್ತಿಲ್ಲ. ಒಟ್ಟಿನಲ್ಲಿ ಸುದ್ದಿಯಾದಳು. ಇನ್ನು ಸದ್ಯದಲ್ಲೇ ಶಾಹಿದ್ ಜತೆಗೆ ಬರಲಿದ್ದಾಳೆ. ಈ ಚಿತ್ರದಲ್ಲಾದರೂ ಜಿಯಾ ಬಾಲಿವುಡ್‌ನಲ್ಲಿ ಭದ್ರ ಬುನಾದಿ ಹಾಕುತ್ತಾಳೋ ಅಂತ ಕಾದು ನೋಡಬೇಕು.