ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಂದರ್ಶನ » ಬಂಧನಕ್ಕೆ 3 ದಿನ ಮೊದಲು ಶೈನಿ ಬಿಚ್ಚಿಟ್ಟ ಅಂತರಂಗ..! (Accident | Rape | Silver Cord | Shiney Ahuja | Soha Ali Khan)
ಸಂದರ್ಶನ
Feedback Print Bookmark and Share
 
ಶೈನಿ ಅಹುಜಾ. ಈ ಹೆಸರು ರಾತ್ರಿ ಬೆಳಗಾಗುವುದರೊಳಗೆ ಕುಪ್ರಸಿದ್ಧ. ಕೆಲಸದಾಕೆಯ ಮೇಲೆ ಅತ್ಯಾಚಾರ ಮಾಡಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಶೈನಿ ಕೈಯಲ್ಲಿ ಬಂಧಿತನಾಗುವ ವೇಳೆ ಒಟ್ಟು ಆರು ಚಿತ್ರಗಳಿದ್ದವು. ಈಗ ಅವುಗಳ ಪರಿಸ್ಥಿತಿ ಏನೋ... ಒಟ್ಟಾರೆ, ಆ ಚಿತ್ರಗಳ ಮೇಲೆ ಭರವಸೆ ಇಟ್ಟಿದ್ದ ಶೈನಿ ಆಕ್ಸಿಡೆಂಟ್ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ ತಕ್ಷಣ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಹಾಗೆ ಅವರು ಮಾತನಾಡಿದ್ದು ಅತ್ಯಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗುವ ಮೂರು ದಿನಗಳಿಗಿಂತ ಮುಂಚೆ ಅಷ್ಟೇ.

ವಿಚಿತ್ರವೆಂದರೆ, ತನ್ನ ಅಂತರಂಗ ಬಿಚ್ಚಿ ಮಾತನಾಡಿದ್ದ ಶೈನಿ ಆಗ, ತಾನು ಹೆಚ್ಚಿನ ಸಮಯವನ್ನು ಪ್ರೀತಿಯ ಹೆಂಡತಿ ಹಾಗೂ ಮಗುವಿನ ಜತೆಗೆ ಕಳೆಯುತ್ತೇನೆ ಎಂದಿದ್ದರು. ಆದರೆ ವಿಪರ್ಯಾಸವೋ ಏನೋ, ಹೀಗೆ ಹೇಳಿ ಮೂರೇ ದಿನಗಳಲ್ಲಿ ಶೈನಿ ಕೆಲಸದಾಕೆಯ ಮೇಲೆ ಅತ್ಯಾಚಾರದ ಆರೋಪ ಹೊತ್ತು ಬಂಧಿತರಾಗಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Accident
IFM
ಆಕ್ಸಿಡೆಂಟ್‌ನಲ್ಲಿ ನಿಮ್ಮ ಪಾತ್ರವೇನು?
ಆಕ್ಸಿಡೆಂಟ್ ಚಿತ್ರದಲ್ಲಿ ನನಗೆ ಅಕ್ಷತ್ ಎಂಬ ಸಾಫ್ಟ್‌ವೇರ್ ಎಂಜಿನಿಯರ್‌ನ ಪಾತ್ರ. ಅಭಿಜಿತ್ ಭಟ್ಟಾಚಾರ್ಯ ನಿರ್ದೇಶನದ ಪ್ರೀತೀಶ್ ನಂದಿ ಕಮ್ಯುನಿಕೇಶನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಅಕ್ಷತ್‌ನ ಕುಟುಂಬದ್ಲಲಾಗುವ ದುರಂತದ ಕಥೆಯಿದೆ. ಅಕ್ಷತ್ ಹೆಂಡತಿ (ಸೋಹಾ ಅಲಿ ಖಾನ್) ಜತೆಗೆ ಭಾರತದಿಂದ ವಿದೇಶಕ್ಕೆ ಕೆಲಸಕ್ಕಾಗಿ ಹೋದಾಗ ನಡೆಯುವ ದುರಂತಮಯ ಕಥೆ ಇಲ್ಲಿದೆ.

ನೀವು ಪಾತ್ರಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚ್ಯೂಸಿ ಎಂಬ ಮಾತಿದೆ. ಹಾಗಾದರೆ ಈ ಚಿತ್ರ ಆಯ್ಕೆ ಮಾಡಲು ಕಾರಣ?
ನನಗೆ ಚಿತ್ರದ ಕಥೆ ಇಷ್ಟವಾಯಿತು. ಜತೆಗೆ ಚಿತ್ರ ತಂಡವೂ ಇಷ್ಟವಾಯಿತು. ಹಾಗಾಗಿ ಈ ಚಿತ್ರವನ್ನು ಆಯ್ಕೆ ಮಾಡಿದೆ. ನಾನು ಸ್ವಲ್ಪ ಚ್ಯೂಸಿ ಎಂಬುದು ನಿಜ. ನಾನು ತುಂಬ ಚಿತ್ರಗಳಲ್ಲಿ ಅಭಿನಯಿಸಬೇಕೆಂಬ ಆಸೆಯಿಲ್ಲ. ಉತ್ತಮ ಸತ್ವವಿರುವ ಭಿನ್ನ ಚಿತ್ರಗಳನ್ನೇ ಬಯಸುತ್ತೇನೆ. ನಾನು ಚಿತ್ರಗಳ ಆಯ್ಕೆಯಲ್ಲಿ ಮೊದಲು ಮಹತ್ವ ನೀಡುವುದು ಚಿತ್ರದ ಕಥೆ. ನಂತರ ನನ್ನ ಪಾತ್ರ. ನಂತರ ನಿರ್ದೇಶಕರು ಕೊನೆಗೆ ಚಿತ್ರದ ತಂಡ. ಹೀಗೆ ಇವೆಲ್ಲವನ್ನೂ ಗಮನಿಸಿ ಚಿತ್ರ ಆಯ್ಕೆ ಮಾಡುತ್ತೇನೆ.

ಅಭಿಜಿತ್ ಜತೆಗೆ ಕೆಲಸ ಮಾಡಿದ ಅನುಭವ ಹೇಗಿದೆ?
ಅಭಿಜಿತ್ ಜತೆಗೆ ಕೆಲಸ ಮಾಡುವುದು ನಿಜ್ಕಕೂ ಒಳ್ಳೆ ಅನುಭವ. ಅವರು ಚಿತ್ರದ ವಿಶುವಲ್‌ಗಳನ್ನೂ ಗ್ರಹಿಸಿಕೊಂಡು ಅಭಿನಯವನ್ನು ಅಳೆಯಬಲ್ಲ ಸಾಮರ್ಥ್ಯವಿರುವವರು. ಅವರಿಗೆ ನಿರ್ದೇಶನದ ಜತೆಜತೆಗೆ ಚಿತ್ರದಲ್ಲಿ ನಟಿಸುವ ಎಲ್ಲ ನಟರ ಹಾಗೂ ನಟನೆಯ ಮೇಲೆ ಉತ್ತಮ ಹಿಡಿತವಿದೆ. ಯಾಕೆಂದರೆ ಅವರಿಗೆ ಜಾಹಿರಾತು ನಿರ್ದೇಶಿಸಿದ ಹಿನ್ನೆಲೆಯಿದೆ.

ನೀವು ನಿಮ್ಮ ಜತೆ ನಟಿಸುವ ನಾಯಕಿ ನಟಿಯರೊಂದಿಗೆ ಉತ್ತಮ ಗೆಳೆತನ ಹೊಂದಿಲ್ಲ ಎಂಬ ದೂರುಗಳು ಬರುತ್ತಿವೆಯಲ್ಲ?
ಒಬ್ಬ ನಟ ತನ್ನ ಸಹನಟನಟಿಯರ ಉತ್ತಮ ಗೆಳೆಯನಾಗಬೇಕೆಂದೇನೂ ನಿಯಮವಿಲ್ಲ. ಬದಲಾಗಿ, ನಟಿಸುವಾದ ಆ ನಟ ಎಲ್ಲರೊಂದಿಗೆ ಫ್ರೆಂಡ್ಲೀಯಾಗಿರಬೇಕು, ಅಷ್ಟೆ. ನಾನು ಶೂಟಿಂಗ್ ಸಮಯದಲ್ಲಿ ಎಲ್ಲರ ಜತಗೆ ಫ್ರೆಂಡ್ಲೀಯಾಗಿರುತ್ತೇನೆ. ನನಗೆ ನಿಮ್ಮನ್ನು ಬಹಳ ಸಮಯದಿಂದ ಪರಿಚಯವಿದೆ ಎಂದಾಕ್ಷಣ ನೀವು ನನ್ನ ಅತ್ಯುತ್ತಮ ಗೆಳೆಯರಾಗಬೇಕೆಂದೇನೂ ಇಲ್ಲವಲ್ಲ?

Shiney Ahuja
IFM
ಪ್ರೀತಿ ಝಿಂಟಾ ಜತೆಗೆ ಹರ್ ಪಲ್ ಶೂಟಿಂಗ್ ನಡೆಸಿದ ನಂತರ ಆಕೆ ನಡೆಸಿದ ಪಾರ್ಟಿಗೆ ನಿಮ್ಮನ್ನು ಆಮಂತ್ರಿಸಿರಲಿಲ್ಲ. ಯಾಕೆ?
ಹೌದು. ಪ್ರೀತಿ ನನ್ನನ್ನು ಆಮಂತ್ರಿಸಿಲ್ಲ ನಿಜ. ಆದರೆ ಆಮಂತ್ರಿಸಿಲ್ಲ ಎಂದರೆ ಯಾರ ಗಂಟೂ ಏನೂ ಹೋಗಲಿಲ್ಲವಲ್ಲ? ನನಗೆ ಇದರ ಬಗ್ಗೆ ಚಿಂತೆಯಿಲ್ಲ. ಆಕೆ ಮಾಧ್ಯಮಕ್ಕೆ ಹೇಳಿದ್ದು, ಶೈನಿ ಜತೆಗೆ ತಾನು ಶೂಟಿಂಗ್ ನಂತರ ಸಂಪರ್ಕದಲ್ಲಿ ಇರಲಿಲ್ಲ. ಹಾಗಾಗಿ ಅವರನ್ನು ಆಮಂತ್ರಿಸಿಲ್ಲ ಎಂದು. ಅಷ್ಟೆ. ಇದರಲ್ಲಿ ದೊಡ್ಡ ವಿಷಯ ಮಾಡುವಂಥದ್ದು ಏನೂ ಇಲ್ಲ. ಆಕೆ ಹೇಳಿದ್ದೂ ನಿಜ. ಆಕೆಯೊಂದಿಗೆ ನಾನು ದೂರವಾಣಿ ಸಂಪರ್ಕದಲ್ಲೂ ಇಲ್ಲ.

ನೀವು ಸ್ವಲ್ಪ ನಾಚಿಕೆಯ ಸ್ವಭಾವದವರು ಹಾಗೂ ಅಂತರ್ಮುಖಿ ಎಂದೂ ಬಾಲಿವುಡ್ಡಿನಲ್ಲಿ ಹೇಳುತ್ತಾರೆ. ಹಾಗಾದರೆ ರಿಯಲ್ ಶೈನಿ ಅಹುಜಾ ಹೇಗೆ?
ನಾನು ಯಾರೊಂದಿಗೂ ಅತಿಯಾಗಿ ಗೆಳೆತನ ಮಾಡುವುದಿಲ್ಲ. ಹಾಗೆಂದು ನಾನು ಈವರೆಗೆ ನನ್ನ ಜೀವನದಲ್ಲಿ ಯಾರನ್ನೂ ನಿಂದಿಸಿಯೂ ಇಲ್ಲ. ನಾನು ಸ್ವಲ್ಪ ಅಂತರ್ಮುಖಿ ಎಂದು ಎಲ್ಲರೂ ಹೇಳುತ್ತಾರೆ ನಿಜ. ಆದರೆ ನಾನು ಅಷ್ಟೊಂದು ಅಂತರ್ಮುಖಿಯೂ ಅಲ್ಲ, ಬಹಿರ್ಮುಖಿಯೂ ಅಲ್ಲ. ಅಂಥಾ ನಾಚಿಕೆಯ ಸ್ವಭಾವವೂ ಇಲ್ಲ. ನಾನು ನನ್ನ ಕುಟುಂಬ, ನನ್ನ ಮನೆ ಮೇಲೆ ಹೆಚ್ಚು ಗಮನ ಕೊಡಲು ಇಷ್ಟ ಪಡುತ್ತೇನೆ. ನನ್ನ ಪ್ರೀತಿಯ ಹೆಂಡತಿ, ಮುದ್ದಿನ ಮಗಳ ಜತೆಗೆ ಕಾಲ ಕಳೆಯುವುದು ನನಗೆ ತುಂಬ ಇಷ್ಟ.

ನೀವು ಕೇವಲ ಗಂಭೀರ ಪಾತ್ರಗಳನ್ನೇ ಮಾಡುತ್ತಿರುವುದರಿಂದ ಅದಕ್ಕೇ ಜೋತು ಬೀಳುತ್ತೀರಿ ಎಂದು ನಿಮಗನಿಸುವುದಿಲ್ಲವೇ?
ಇಲ್ಲ. ನಾನು ಅದನ್ನು ನಂಬುವುದಿಲ್ಲ. ಬಾಲಿವುಡ್ಡಿನಲ್ಲಿ ನಾನು ಕೇವಲ ಗಂಭೀರ ಪಾತ್ರಗಳನ್ನೇ ಮಾಡಿರಬಹುದು ನಿಜ. ಆದರೆ ತಮಾಷೆಯೆಂದರೆ, ನಾನು ದೆಹಲಿಯಲ್ಲಿದ್ದಾಗ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಆಗ ಒಮ್ಮೆಯೂ ಗಂಭೀರ ಪಾತ್ರಗಳನ್ನು ಮಾಡಿರಲಿಲ್ಲ. ಆಗ ನನ್ನ ಗೆಳೆಯರೆಲ್ಲ ನೀನು ಬಾಲಿವುಡ್ಡಿಗೆ ಕಾಲಿಡಬೇಡ. ಯಾಕೆಂದರೆ ನಿನಗೆ ಗಂಭೀರ ಪಾತ್ರವೇ ಮಾಡಲು ಗೊತ್ತಿಲ್ಲ ಎನ್ನುತ್ತಿದ್ದರು. ಆದರೆ ಇಲ್ಲಿ ನಾನು ಮಾಡಿರುವುದು ಎಲ್ಲವೂ ಗಂಭೀರ ಪಾತ್ರಗಳೇ.

Shiney Ahuja
IFM
ಭೂಲ್‌ಭುಲಯ್ಯಾ ಚಿತ್ರದಲ್ಲಿ ಸಣ್ಣ ಪಾತ್ರಕ್ಕೇ ಯಾಕೆ ಒಪ್ಪಿಕೊಂಡಿರಿ?
ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿರುವ ಭೂಲ್‌ಭುಲಯ್ಯಾದಲ್ಲಿ ನಾನು ನಟಿಸಲು ಒಪ್ಪಿದ್ದೇಕೆಂದರೆ, ಅದು ಪ್ರಿಯದರ್ಶನ್ ನಿರ್ದೇಶನದ ಚಿತ್ರವೆಂಬ ಒಂದೇ ಕಾರಣಕ್ಕೆ. ಅಂಥಾ ನಿರ್ದೇಶಕರ ಕೈಯಲ್ಲಿ ಕೆಲಸ ಮಾಡಲು ನಾನು ಇಷ್ಟಪಟ್ಟಿದ್ದೆ. ಅದಕ್ಕಾಗಿ ಒಪ್ಪಿಕೊಂಡೆ.

ಹಾಗಾದರೆ, ಭೂಲ್‌ಭುಲಯ್ಯಾದಲ್ಲಿ ಅಕ್ಷಯ್ ಕುಮಾರ್ ಎದುರು ನಿಮ್ಮ ಪಾತ್ರ ಸಪ್ಪೆ ಹಾಗೂ ನೀವು ಅಲ್ಲಿ ಗುರುತಿಸಿಕೊಳ್ಳಲು ವಿಫಲರಾದಿರಿ ಎಂದು ಅನಿಸಲಿಲ್ಲವೇ?
ಅಕ್ಷಯ್ ಕುಮಾರ್ ಎದುರು ನಾನು ಸಪ್ಪೆಯಾಗಿ ಯಾಕೆ ಕಂಡೆ ಎಂದರೆ, ಅವರ ಪಾತ್ರ ಅಲ್ಲಿ ಹಾಗಿತ್ತು. ಜತೆಗೆ ಅವರು ನನಗಿಂತ ನಟನೆಯಲ್ಲಿ ತುಂಬ ಹಿರಿಯರು. ನಾನು ನಟನೆಯಲ್ಲಿ ಕೇವಲ ಮೂರು ವರ್ಷದ ಅನುಭವ ಹೊಂದಿದವನು ಅಷ್ಟೆ. ಆದರೂ ನಾನಲ್ಲಿ ಸಪ್ಪೆಯಾದೆ ಎಂದು ನನಗನಿಸಿಲ್ಲ. ನನಗೆ ನಿರ್ದೇಶಕರ ಮೇಲೆ ಹಾಗ ನನ್ನ ಪಾತ್ರದ ಮೇಲೆ ನಂಬಿಕೆಯಿದೆ. ಅಲ್ಲಿ ಮೊದಲರ್ಧ ನನ್ನ ಪಾತ್ರಕ್ಕೆ ಮಹತ್ವವಿದೆ. ನಂತರ ಅರ್ಧದಲ್ಲಿ ಅಕ್ಷಯ್ ಮೇಳೈಸುತ್ತಾರೆ ಅಷ್ಟೆ.

ನೀವು ನಿರ್ದೇಶಕರ ವಿಷಯಗಳಲ್ಲಿ ಮೂಗು ತೂರಿಸುತ್ತೀರಿ ಎಂಬ ಆರೋಪವೂ ನಿಮಗಿದೆ?
ಮೂಗು ತೂರಿಸುವ ನಟ ಎಂಬ ಪಟ್ಟವನ್ನೂ ನನಗೆ ಕಟ್ಟಿದ್ದಾರೆ ಎಂಬ ಬಗ್ಗೆ ನನಗೇನೂ ಗೊತ್ತಿಲ್ಲ. ಇದು ಸತ್ಯಕ್ಕೆ ದೂರದ ಮಾತು. ನಾನು ನಟನಾಗಿ ನನ್ನ ಕೆಲಸ ಮಾಡುತ್ತೇನೆ. ನಿರ್ದೇಶಕರ ವಿಷಯಗಳಲ್ಲಿ ಮೂಗು ತೂರಿಸುವುದಿಲ್ಲ. ಆದರೂ, ಹಿಂದೆ ಅಮೀರ್ ಖಾನ್ ಅವರಿಗೂ ಇದೇ ಪಟ್ಟವಿತ್ತು. ಮಾಧ್ಯಮಗಳು ಅವರನ್ನು ಮೂಗು ತೂರಿಸುವ ನಟ ಎಂದೇ ಬಿಂಬಿಸಿದ್ದರು. ಆದರೆ ಈಗ ಅದು ಚಿತ್ರದ ಒಳ್ಳೆಯದಕ್ಕಾಗಿ ಅಮೀರ್ ಸಲಹೆ ನೀಡುತ್ತಾರೆ ಎಂಬುದಾಗಿ ಬದಲಾಗಿದೆ.

ಹರ್ ಪರ್, ಆಕ್ಸಿಡೆಂಟ್ ಚಿತ್ರಗಳ ನಂತರ ನಿಮ್ಮ ಮಹತ್ವದ ಚಿತ್ರ ಯಾವುದು?
ಆಂಗ್ಲಭಾಷೆಯ ಅಂತಾರಾಷ್ಟ್ರೀಯ ಚಿತ್ರ ಸಿಲ್ವರ್ ಕಾರ್ಡ್ ನನ್ನ ಮಹತ್ವದ ಮುಂದಿನ ಚಿತ್ರ. ಅದರಲ್ಲಿ ನನಗೆ ರಿಚರ್ಡ್ ಪಾತ್ರ. ಅದೊಂದು ವೈಜ್ಞಾನಿಕ ಕಥಾಹಂದರವಿರುವ ಚಿತ್ರ. ನನಗೆ ಬೇಸರವೆಂದರೆ, ಭಾರತದಲ್ಲಿ ಇಂತಹ ವೈಜ್ಞಾನಿಕ ಕಥೆಗಳು ಯಾವತ್ತೂ ಮೇಳೈಸಿಲ್ಲ. ಯಾಕೆಂದರೆ ನಾವು ಭಾರತೀಯರು 30 ಕೋಟಿ ರೂ ಖರ್ಚು ಮಾಡಬೇಕಾದ ಚಿತ್ರಕ್ಕೆ ಮೂರು ಕೋಟಿಯಲ್ಲಿ ಮುಗಿಸಲು ಪ್ಲಾನ್ ಮಾಡುತ್ತೇವೆ. ಅದೇ ದೊಡ್ಡ ದುರಂತ.
Shiney Ahuja, Soha Ali Khan
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೈನಿ ಅಹುಜಾ, ಆಕ್ಸಿಡೆಂಟ್, ಅತ್ಯಾಚಾರ, ಸಿಲ್ವರ್ ಕಾರ್ಡ್, ಸೋಹಾ ಅಲಿ ಖಾನ್