ನಾನೇನು ಸನ್ಯಾಸಿಯಲ್ಲ. ಆದರೆ ಅತ್ಯಾಚಾರ ಮಾಡೇ ಇಲ್ಲ ಎಂದ ಶೈನಿ!
ಮುಂಬೈ, ಗುರುವಾರ, 1 ಅಕ್ಟೋಬರ್ 2009( 19:13 IST )
IFM
ಕೆಲಸದಾಕೆಯ ಮೇಲೆ ಅತ್ಯಾಚಾರ ಆರೋಪ ಹೊತ್ತ ಬಾಲಿವುಡ್ ನಟ ಶೈನಿ ಅಹುಜಾ ಮೂರು ತಿಂಗಳ ಬಳಿಕ ಕೊನೆಗೂ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿದೇಶಕ್ಕೆ ಪ್ರಯಾಣಿಸಬಾರದು ಎಂಬ ಶರತ್ತಿನ ಮೇಲೆ ಅವರಿಗೆ ಜಾಮೀನು ನೀಡಲಾಗಿದ್ದು, ಅದಕ್ಕಾಗಿ ಅವರ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿದೆ. ಶೈನಿ ಪರ ವಕೀಲ ಶಿರೀಶ್ ಗುಪ್ತೆ, ಶೈನಿ ಅಹುಜಾ ಅವರು ಅತ್ಯಾಚಾರ ಮಾಡಿದ್ದಾರೆಂಬುದಕ್ಕೆ ಯಾವುದೇ ರೀತಿಯ ಸ್ಪಷ್ಟ ಸಾಕ್ಷಿಗಳಿಲ್ಲ ಎಂದು ಹೇಳಿದ್ದಾರೆ.
ನಟ ಶೈನಿ ದೆಹಲಿಯಲ್ಲಿ ವಾಸಿಸಲಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕೋರ್ಟ್‌ಗೆ ಅಗತ್ಯವಿದ್ದಾಗ ಬರಬೇಕಾಗುತ್ತದೆ ಎಂದು ಗುಪ್ತೆ ತಿಳಿಸಿದ್ದಾರೆ. ಪ್ರಕರಣದಲ್ಲಿ ಶೈನಿ ತಪ್ಪಿತಸ್ಥನೆಂದು ಸಾಬೀತಾದರೆ, ಆತನಿಗೆ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ಖಾಯಂ ಎಂದು ಅವರು ತಿಳಿಸಿದರು.
ಶೈನಿ ಜೂ.15ರಂದು 20ರ ಹರೆಯದ ತಮ್ಮ ಮನೆಕೆಲಸದಾಕೆಯನ್ನು ಅತ್ಯಾಚಾರ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದರು. ಹಲವು ಬಾರಿ ಅವರು ಜಾಮೀನಿನ ಮೇಲೆ ಬಿಡುಗಡೆಗೆ ಪ್ರಯತ್ನಿಸಿದರೂ ಶೈನಿ ಅವರು ಒಬ್ಬ ಪ್ರಭಾವೀ ವ್ಯಕ್ತಿಯಾಗಿರುವುದರಿಂದ ಕೆಲಸದಾಕೆಯ ಕುಟುಂಬವನ್ನು ಬೆದರಿಸುವ ಹಾಗೂ ಪ್ರಕರಣದಿಂದ ಹೊರಬರಲು ಗಣ್ಯರ ನೆರವು ಪಡೆಯುವ ಸಾಧ್ಯತೆ ಇದೆ ಎಂದು ಹಲವು ಬಾರಿ ಜಾಮೀನು ನಿರಾಕರಿಸಲಾಗಿತ್ತು.
ನಾನೇನು ಸನ್ಯಾಸಿಯಲ್ಲ!- ಶೈನಿ ಪರ ವಾದಿಸುತ್ತಿರುವ ವಕೀಲ ಶಿರೀಶ್ ಗುಪ್ತೆ ಶೈನಿ ಅಹುಜಾ ಸನ್ಯಾಸಿಯಂತೂ ಖಂಡಿತ ಅಲ್ಲ. ಆದರೆ, ಅವರು ಅತ್ಯಾಚಾರ ಮಾಡಿಯೇ ಇಲ್ಲ. ಇದು ಕೆಲಸದಾಕೆಯ ಸಂಪೂರ್ಣ ಸಹಮತಿಯಿಂದ ನಡೆದ ಲೈಂಗಿಕ ಸಂಬಂಧ ಅಷ್ಟೇ ಎಂದು ವಾದಿಸಿದರು.
ವೈದ್ಯ ಪರೀಕ್ಷೆಗಳಲ್ಲಿಯೂ ಕೂಡಾ ಲೈಂಗಿಕ ಸಂಪರ್ಕ ಕೆಲಸದಾಕೆಯ ಸಹಮತಿಯಿಂದಲೇ ನಡೆದಿದೆ ಎನ್ನುವುದಕ್ಕೆ ಪುಷ್ಠಿ ದೊರೆಯುತ್ತದೆ. ಯಾಕೆಂದರೆ, ಅಲ್ಲಿ ಬಲಾತ್ಕಾರದ ಯಾವುದೇ ಗುರುತುಗಳಿಲ್ಲ. ಆಕೆಯ ಬಟ್ಟೆಯೂ ಹರಿದಿಲ್ಲ. ಬಟ್ಟೆಯಲ್ಲಿ ಯಾವ ಕಲೆಗಳೂ ಇಲ್ಲ. ಹಾಗಾಗಿ ಇಲ್ಲಿ ಅತ್ಯಾಚಾರದ ಮಾತೇ ಬರುವುದಿಲ್ಲ ಎಂದ ತರ್ಕಿಸಿದರು ಗುಪ್ತೆ.
ಅಲ್ಲದೆ, ಕೆಲಸದಾಕೆಗೆ ಮೊದಲೇ ಲೈಂಗಿಕ ಸಂಪರ್ಕ ಮಾಡಿದ ಅನುಭವ ಇದೆ. ಆಕೆಯ ಇತಿಹಾಸ ಜಾಲಾಡಿದರೆ ಆಕೆಗೆ ಬೇರೆ ಯುವಕರ ಜತೆಗೆ ಸಂಪರ್ಕವಿದ್ದ ಮಾಹಿತಿ ದೊರೆತಿದೆ ಎಂದರು ಗುಪ್ತೆ.
ಶೈನಿಯ ದೇಹದಲ್ಲೂ ಕೂಡಾ ವೈದ್ಯ ಪರೀಕ್ಷೆಯ ಆಧಾರದ ಮೂಲಕ ಯಾವುದೇ ಗುರುತುಗಳು ಇಲ್ಲ. ಬಲಾತ್ಕಾರವಾಗಿದ್ದರೆ, ಆಕೆ ಶೈನಿಯ ಮೇಲೆ ಪರಚಿದ, ತರಚಿದ ಗಾಯಗಳಿರುತ್ತಿತ್ತು. ಇಲ್ಲಿ, ಅಂತಹ ಯಾವುದೇ ಗುರುತುಗಳಿಲ್ಲ. ಒಂದು ಒಂದು ಬೆರಳಿನ ಗುರುತು ಶರೀರದಲ್ಲಿದೆ. ಅದು ಕೇವಲ ಪ್ರೀತಿಯ ಪರಾಕಾಷ್ಠೆಯ ಸಂಕೇತ ಅಷ್ಟೆ ಎಂದರು ಗುಪ್ತೆ.
ಹತ್ತು ಬಾರಿ ಶೈನಿಗೆ ಫೋನ್ ಮಾಡಿದ್ದಳು!- ಶೈನಿ ಹಾಗೂ ಕೆಲಸದಾಕೆಯ ನಡುವಿನ ಲೈಂಗಿಕ ಸಂಪರ್ಕದ ಮುನ್ನಾ ದಿನ ಅಂದರೆ ಜೂ.13ರಂದೇ ಶೈನಿ ಮನೆಯ ದೂರವಾಣಿಗೆ ಆಕೆಯ ಮೊಬೈಲ್ ಫೋನ್‌ನಿಂದ 10 ಬಾರಿ ಫೋನ್ ಮಾಡಿದ್ದಳು ಎಂದೂ ದಾಖಲಾಗಿದೆ. ಆಕೆಯನ್ನು ಅತ್ಯಾಚಾರಕ್ಕೂ ಮುನ್ನಾ ದಿನವೇ ಕೊಂಚ ಸಲುಗೆಯಿಂದ ಸ್ಪರ್ಷಿಸಿರುವ ಶೈನಿಗೆ ಆಕೆ ಏನೂ ಎದುರಾಡಲಿಲ್ಲ. ಹಾಗೂ ಆತನನ್ನು ಪ್ರೋತ್ಸಾಹಿಸುವಂತೆಯೇ ನಡೆದುಕೊಂಡಿದ್ದಳು. ಅಲ್ಲದೆ, ಆತನಿಗೆ 10 ಬಾರಿ ಫೋನ್ ಮಾಡಿದ್ದಳು. ಅತ್ಯಾಚಾರದ ನಂತರವೂ ಆಕೆ ತನ್ನ ಮೊಬೈಲಿನಿಂದ ಹಲವು ಕರೆಗಳನ್ನು ಮಾಡಿದ್ದಾಳೆ ಎಂದು ಸಾಕ್ಷಿಗಳನ್ನು ಶೈನಿ ಪರ ವಕೀಲರು ನೀಡಿದ್ದಾರೆ.
ಇತ್ತೀಚೆಗಷ್ಟೆ ಶೈನಿ ಜೈಲಿನಲ್ಲಿ ಅತೀವ ಬೆನ್ನು ನೋವಿನಿಂದ ಬಳಲುತ್ತಿದ್ದು, ಕೋರ್ಟ್‌ಗೆ ಹಾಜರಾಗಲು ಪೊಲೀಸರೇ ಅವರಿಗೆ ಊರುಗೋಲಾಗಬೇಕಾಗಿತ್ತು. ಅವರ ಆರೋಗ್ಯ ಸಮಸ್ಯೆ ಉಲ್ಬಣವಾದುದನ್ನು ಕಂಡು ಅವರ್ನನು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲುಗೊಳಿಸಲಾಗಿತ್ತು.