ನಿದ್ದೆ ಬಿಟ್ಟರೂ, ಬ್ಲಾಗ್ ಬರೆಯೋದು ಬಿಡದ ಬಿಗ್ ಬಿ ಅಮಿತಾಬ್!
IFM
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ತನ್ನ 67ರ ವಯಸ್ಸಿನಲ್ಲೂ ಟಿವಿ, ಸಿನಿಮಾ ಅಂತ ಬ್ಯುಸಿ. ಇಂಥ ಸೂಪರ್ ಸ್ಟಾರ್ ತನ್ನದೇ ಬ್ಲಾಗ್ ಹೊಂದಿ ದಿನವೂ ತನ್ನ ಯೋಚನೆಗಳನ್ನು ಬರೆಯುತ್ತಲೇ ಇರುತ್ತಾರೆ. ಊಟ ತಿಂಡಿಯನ್ನು ಬಿಟ್ಟರೂ, ಅಮಿತಾಬ್ ಬ್ಲಾಗ್ ಬರೆಯೋದನ್ನು ಬಿಡಲಾರರು. ನಿದ್ದೆಗೆಟ್ಟಾದರೂ, ಬರೆದೇ ಮಲಗುವ ಅಮಿತಾಬ್ ದಿನಕ್ಕೆ ಕೇವಲ ನಾಲ್ಕು ಗಂಟೆಯಷ್ಟೇ ನಿದ್ರಿಸುತ್ತಾರಂತೆ. ಹಾಗಾಗಿ ಮಗ ಅಭಿಷೇಕ್, ಸೊಸೆ ಐಶ್ ಯಾವಾಗಲೂ ಬ್ಲಾಗೆ ಬರೆಯೋದು ಬಿಟ್ಟು ನಿದ್ರೆ ಮಾಡಿ ಎಂದು ಹೇಳುತ್ತಲೇ ಇರುತ್ತಾರಂತೆ..! ಖಾಸಗಿ ವಾಹಿನಿಯೊಂದಕ್ಕೆ ಅಮಿತಾಬ್ ನೀಡಿದ ಬ್ಲಾಗ್ ಪುರಾಣದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
67ರ ವಯಸ್ಸಿನಲ್ಲೂ ಬಾಲಿವುಡ್ಡಿನ ಅತ್ಯಂತ ಬ್ಯುಸಿ ನಟ ನೀವಾ? ಬ್ಯುಸಿ ನಟ ಎಂದು ನಾನು ಪೂರ್ತಿ ಒಪ್ಪಿಕೊಳ್ಳೋದಿಲ್ಲ. ನನಗೆ ಬಂದ ಆಫರ್‌ಗಳಲ್ಲಿ ನಾನು ನನಗಿಷ್ಟವೆನಿಸಿದ್ದನ್ನ ಮಾಡುತ್ತೇನೆ. ಅದು ಟಿವಿಯಲ್ಲಾಗಿರಬಹುದು, ಸಿನಿಮಾದಲ್ಲಾಗಿರಬಹುದು. ಒಂದು ದಿನವನ್ನೂ ಪೂರ್ತಿಯಾಗಿ ಪ್ಲಾನ್ ಮಾಡಿಕೊಂಡರೆ ಖಂಡಿತ ಹಲವು ಕೆಲಸಗಳಲ್ಲಿ ತೊಡಗಿಸಲು ಸಾಧ್ಯವಾಗುತ್ತದೆ. ಅವರವರ ದೇಹಾರೋಗ್ಯ ಎಷ್ಟು ಶ್ರಮದ ಕೆಲಸಗಳಿಗೆ ಸ್ಪಂದಿಸುತ್ತದೆ ಎಂಬುದೂ ಇಲ್ಲಿ ಮುಖ್ಯವಾಗುತ್ತದೆ.
IFM
ನಾಲ್ಕು ದಶಕಗಳಲ್ಲಿ ಸಿನಿಮಾಗಳಲ್ಲಿ ಮಿಂಚಿರುವ ನಿಮಗೆ ಬ್ರ್ಯಾಂಡ್ ಇಮೇಜ್ ಇದೆ. ಹಾಗಾಗಿ ನಿಮ್ಮ ಈ ಇಮೇಜ್ ಸಿನಿಮಾದಲ್ಲಿ ಇನ್ನೊಂದು ಪಾತ್ರವನ್ನು ಮರೆಯಾಗಿಸಿಬಿಡುತ್ತದೆಂದು ಅನಿಸಿಲ್ಲವೇ? (ದೀರ್ಘವಾಗಿ ಆಲೋಚಿಸಿ ಕ್ಷಣ ಹೊತ್ತು ಮೌನ ವಹಿಸದ ನಂತರ..) ಇದನ್ನೂ ಪೂರ್ತಿ ಸರಿಯೆಂದು ಒಪ್ಪಲಾರೆ. ಮೊದಲೆಲ್ಲಾ ಜನರು ನನ್ನ ಸಿನಿಮಾಕ್ಕೆ ಬರುತ್ತಿದ್ದುದೇ ಚಿತ್ರದಲ್ಲಿ ನಾನಿದ್ದೇನೆ ಎಂಬ ಕಾರಣಕ್ಕೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ನನಗೆ ಹಿಂದಿನಷ್ಟು ಪ್ರಾಧಾನ್ಯತೆ ಇಲ್ಲ. ಈಗ ಚಿತ್ರದಲ್ಲಿ ಎಲ್ಲ ಪಾತ್ರಗಳಂತೆ ನಾನೊಬ್ಬ ಪಾತ್ರಧಾರಿ ಅಷ್ಟೇ. ನಾನು ಹಿಂದೆಯೂ ಹೀಗೆಯೇ ಯೋಚಿಸುತ್ತಿದ್ದೆ. ಆಗೆಲ್ಲಾ ನಟನೊಬ್ಬನ ಪ್ರಾಧಾನ್ಯತೆಯ ಮೇಲೆ ಚಿತ್ರದ ಪ್ರಾಧಾನ್ಯತೆ ನಿಗದಿಯಾದರೂ, ಚಿತ್ರತಂಡ ಚೆನ್ನಾಗಿ ಕೆಲಸ ಮಾಡಿದರಷ್ಟೇ ನಟನ ಪ್ರಾಧಾನ್ಯತೆಗೂ ಅರ್ಥ ಬರುತ್ತಿತ್ತು. ಹಾಗಾಗಿ ಚಿತ್ರವೊಂದು ಯಶಸ್ಸಾಗಬೇಕಾದರೆ, ಪ್ರತಿಯೊಬ್ಬನೂ ಮುಖ್ಯ. ಅಲ್ಲಿ ಟೀಂವರ್ಕ್ ಅಗತ್ಯ.
ನೀವು ಬ್ಲಾಗ್ ಬರೆಯಲು ರಾತ್ರಿಯೆಲ್ಲಾ ಎದ್ದಿರುತ್ತೀರಂತಲ್ಲಾ? ಹೌದೇ... ಬ್ಲಾಗ್ ಬರೆಯೋದು ನನ್ನ ಒಂದು ಹವ್ಯಾಸ. ಊಟ, ನಿದ್ದೆಯಂತೆ ಇದು ನನ್ನ ದಿನನಿತ್ಯದ ದಿನಚರಿಯಾಗಿಬಿಟ್ಟಿದೆ. ಬರೆಯದಿದ್ದರೆ ನನಗೆ ಏನೋ ಅಪೂರ್ಣವಾದಂತೆ ಚಡಪಡಿಕೆ ಶುರುವಾಗುತ್ತದೆ. ಪಾಪಪ್ರಜ್ಞೆ ಕಾಡತೊಡಗುತ್ತದೆ. ಅಷ್ಟೇ ಅಲ್ಲ. ಸಾವಿರಾರು ಮಂದಿ ನಿತ್ಯವೂ ನನ್ನ ಬ್ಲಾಗ್ ಓದುತ್ತಾರೆ. ಅವರು ನನ್ನ ಬ್ಲಾಗ್ ಓದುವ ಮೂಲಕ ನನ್ನ ಜತೆಗೆ ಮಾತನಾಡಿದ ಸಂಪರ್ಕಿಸಿದ ಅನುಭವ ಪಡೆಯುತ್ತಾರೆ. ಹಾಗಾಗಿ ಅವರು ಅಷ್ಟು ಕಾತರದಿಂದ ಕಾಯುವಾಗ ನಾನು ಇಂದು ಬರೆಯದಿದ್ದರೆ ಹೇಗೆ ಅನಿಸುತ್ತದೆ. ಹಾಗಾಗಿ ಪ್ರತಿನಿತ್ಯವೂ ಬರೆಯುತ್ತೇನೆ. ತಡವಾದರೂ ನಾಲ್ಕಕ್ಷರ ಬರೆದೇ ಮಲಗುತ್ತೇನೆ.
IFM
ನಿಮ್ಮ ಫ್ಯಾಮಿಲಿಯವರು ನಿಮಗೆ ಬ್ಲಾಗ್ ಬರೆಯಬೇಡಿ ಎಂದು ಹೇಳಿಲ್ಲವೇ? ಹುಂ ಹೇಳುತ್ತಾರೆ. ಸಾಕು ಬರೆದಿದ್ದು, ಇನ್ನು ಮಲಗಿ ಎನ್ನುತ್ತಾರೆ. ಬ್ಲಾಗ್ ಬರೆಯೋದನ್ನು ಬಿಟ್ಟುಬಿಡಿ ಎನ್ನುತ್ತಾರೆ. ಪ್ರತಿದಿನವೂ ಲ್ಯಾಪ್‌ಟಾಪಿನಲ್ಲಿ ಬೆನ್ನುಬಗ್ಗಿಸಿ ಕುಟ್ಟುತ್ತಾ ಇರುತ್ತೀರಲ್ಲಾ, ಒಮ್ಮೆ ಅದನ್ನು ನಿಲ್ಲಿಸಿ ಅಂತಾರೆ. ಆದರೆ ಬರೆಯೋದು ನಂಗಿಷ್ಟ. ಅದನ್ನು ಬಿಡಲು ಸಾಧ್ಯವಿಲ್ಲ. ಶೂಟಿಂಗ್ ಮುಗಿಸಿ, ತುಂಬ ಸುಸ್ತಾಗಿ ಮನೆಗೆ ಬಂದ ಮೇಲೂ ತಡರಾತ್ರಿಯೆಲ್ಲಾ ಎದ್ದು ಬ್ಲಾಗ್ ಬರೆಯುತ್ತಿರುತ್ತೇನಲ್ಲಾ, ಅದಕ್ಕಾಗಿ ಮಗ ಅಬಿಷೇಕ್, ಸೊಸೆ ಐಶ್ವರ್ಯಾ, ಹೆಂಡತಿ ಜಯಾ ಎಲ್ಲರೂ ಹಾಗೆ ಹೇಳುತ್ತಿರುತ್ತಾರೆ. ಅವರು ಹಾಗೆ ಹೇಳೋದು ನನ್ನ ಆರೋಗ್ಯದ ಕಾಳಜಿಯಿಂದ ಅಷ್ಟೆ. ಯಾಕೆಂದರೆ ನಾನು ದಿನದಲ್ಲಿ ನಿದ್ರಿಸುವುದು ಕೇವಲ ನಾಲ್ಕು ಗಂಟೆ ಮಾತ್ರ.
ಇದೇ ಅ.30ರಂದು ಬಿಡುಗಡೆಗೊಳ್ಳುವ ಅಲಾದಿನ್ ಸಿನಿಮಾದಲ್ಲಿ ನೀವು ಮತ್ತೆ ಕಾಣಿಸಿಕೊಳ್ಳಲಿದ್ದೀರಿ. ಈ ಚಿತ್ರದಲ್ಲಿ ಇಂಥ ವಯಸ್ಸಿನಲ್ಲೂ ನೀವು ಸಾಹಸ ದೃಶ್ಯದಲ್ಲಿ ಪಾಲ್ಗೊಂಡಿದ್ದೀರಂತಲ್ಲಾ? ಹೌದು. ಸಿನಿಮಾ ಮಂದಿಗೆ ಸಾಕಷ್ಟು ದೈಹಿಕ ಶಕ್ತಿ ಬೇಕಾಗುತ್ತದೆ. ಹಾಗಾಗಿ ದೇಹದ ಆರೋಗ್ಯ ಕಾಪಾಡಿಕೊಳ್ಳೋದು ತುಂಬ ಅಗತ್ಯ. ಅಲಾದಿನ್ ಸಮಕಾಲೀನ ಕ್ಲಾಸಿಕ್ ಚಿತ್ರ. ಕೆಲವು ಆಕ್ಷನ್ ದೃಶ್ಯಗಳು ನಿಜಕ್ಕೂ ಕಷ್ಟಕರವಾಗಿರುತ್ತವೆ. ಆದರೆ ಈಗ ಹಲವಾರು ಉಪಕರಣಗಳ ಸಹಾಯದಿಂದ ಆಕಾಶದೆತ್ತರಕ್ಕೂ ನೆಗೆಯಲು ಸಾಧ್ಯವಿದೆ. ಆದರೂ ಅವೂ ಕೂಡಾ ಸುಲಭವೇನಲ್ಲ. ಹಿಂದಿನ ದಿನಗಳಿಗಿಂತ ಸುಲಭ ಅಷ್ಟೆ. ದೈಹಿಕ ಸುಸ್ತು ಇರುತ್ತದೆ. ನಟ ಎಂಥ ಚಾಲೆಂಜ್‌ಗೂ ಸಿದ್ಧವಿರಬೇಕು. ಇಲ್ಲವಾದಲ್ಲಿ ನಟನಾಗೋದು ಹೇಗೆ ಹೇಳಿ?
ಈವರೆಗೆ ನೀವು, ನಿಮ್ಮ ಪತ್ನಿ ಜಯಾ, ಮಗ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಎಲ್ಲರೂ ಸೇರಿ ಒಂದೇ ಚಿತ್ರದಲ್ಲಿ ನಟಿಸಿಲ್ಲ. ನಿಮಗೆ ಅಂಥ ಸಿನಿಮಾದಲ್ಲಿ ನಟಿಸಲು ಇಷ್ಟವಿಲ್ಲವೇ? ಇಷ್ಟವಿಲ್ಲ ಎಂದೇನೂ ಇಲ್ಲ. ಅಂತಹ ಅವಕಾಶ ಸೃಷ್ಟಿಯಾಗಿಲ್ಲ ಅಷ್ಟೆ. ಅವಕಾಶ ಸಿಕ್ಕಿದರೆ ನಾಲ್ವರೂ ಅಭಿನಯಿಸಬಲ್ಲ ಚಿತ್ರಕ್ಕೆ ನಾವಂತೂ ಎಲ್ಲರೂ ಖುಷಿಯಿಂದ ರೆಡಿ.