ಕರಾವಳಿಯ ಕುವರಿ, ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ, ಬಚ್ಚನ್ ಸೊಸೆ ಐಶ್ವರ್ಯಾ ರೈ ಮದುವೆಯಾದ ಮೇಲೆ ಖಾಸಗಿ ಜೀವನದಲ್ಲಿ ಬಚ್ಚನ್‌ರ ಮುದ್ದಿನ ಸೊಸೆಯಾಗಿ, ಅಭಿಷೇಕ್‌ನ ಪ್ರೀತಿಯ ಹೆಂಡತಿಯಾಗಿ ತನ್ನ ವೃತ್ತಿ ಬದುಕನ್ನೂ ಅಷ್ಟೇ ವ್ಯಾವಹಾರಿಕವಾಗಿ ಪಕ್ವತೆಯಿಂದ ಮುಂದುವರಿಸಿಕೊಂಡು ಹೋಗುತ್ತಿರುವ ಗಟ್ಟಿಗಿತ್ತಿ. ಇಂಥ ಐಶ್ವರ್ಯಾ ರೈ ನಿಧಾನವಾಗಿ ತಾನೀವರೆಗೆ ಸಹಿ ಹಾಕಿದ ಪ್ರಾಜೆಕ್ಟುಗಳನ್ನೆಲ್ಲ ಮುಗಿಸಿ ಅಮ್ಮನಾಗಿಬಿಡುವ ಬಯಕೆಯಿದೆ. ಆದರೂ ಆಕೆ ಈವರೆಗೆ ಸಹಿ ಹಾಕಿದ ಪ್ರಾಜೆಕ್ಟು ಮುಗಿಯಬೇಕೆಂದರೆ ಇನ್ನೂ ಒಂದೆರಡು ವರ್ಷವಾಗಬೇಕು. ಅಷ್ಟು ಬ್ಯುಸಿ ಈಕೆ.
ಇಂತಿಪ್ಪ ಐಶ್‌ಳ ಬಾಲ್ಯದ ದಿನಗಳು ಹೇಗಿದ್ದವು ಗೊತ್ತಾ. ಥೇಟ್ ಎಲ್ಲಾ ಮಧ್ಯಮ ವರ್ಗದ ಮಕ್ಕಳಂತೆಯೇ! ಆಕೆ ಓದುತ್ತಿದ್ದ, ಟಿವಿ ನೋಡುತ್ತಿದ್ದ ದಿನಗಳನ್ನು ಆಕೆಯ ಬಾಯಿಯಿಂದಲೇ ಕೇಳಿದರೆ ಚೆನ್ನ.
''ಅಪ್ಪ ಹೆಚ್ಚಾಗಿ ನೌಕೆಯಲ್ಲೇ ಇರುತ್ತಿದ್ದರು. ಹಾಗಾಗಿ ನನ್ನ ಬಹುತೇಕ ಬಾಲ್ಯದ ದಿನಗಳು ಅಮ್ಮ ಹಾಗೂ ನನ್ನ ಅಣ್ಣನ ಜೊತೆಗೆ ಕಳೆದುಹೋಯಿತು. ಸಣ್ಣವಳಿದ್ದಾಗಲೇ ನಾನು ಕನಸುಗಾರ್ತಿ. ನನ್ನದೇ ಕನಸುಗಳ ಲೋಕದಲ್ಲಿ ನಾನಿರುತ್ತಿದ್ದೆ. ಸ್ವಲ್ಪ ಸೂಕ್ಷ್ಮ ಸ್ವಭಾವದವಳಾದ ನಾನು ಯಾವಾಗಲು ನನ್ನದೇ ವಯಸ್ಸಿನವರ ಜೊತೆಗಿರುತ್ತಿದ್ದುದು ಕಡಿಮೆ. ಮಾವ, ಅತ್ತೆಯ ಮಕ್ಕಳೊಂದಿಗೆ ಬೆರೆಯುವುದಕ್ಕಿಂತ ಹೆಚ್ಚು ಮಾವ ಅತ್ತೆಯವರೊಂದಿಗೇ ಬೆರೆಯುತ್ತಿದ್ದೆ. ನನ್ನ ಅಪ್ಪ ಅಮ್ಮ ಯಾವತ್ತೂ ನನ್ನನ್ನು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಪ್ರೇರೇಪಿಸುತ್ತಿದ್ದರು.''
IFM
''ಸಣ್ಣವಳಿದ್ದಾಗ ನಾನು ತುಂಬ ವಾಚಾಳಿ. ನನ್ನ ವಯಸ್ಸಿನ ಮಕ್ಕಳಿಗಿಂತ ತುಂಬ ಚೆನ್ನಾಗಿ ಮಾತನಾಡುತ್ತಿದ್ದೆ. ತರಗತಿಯಲ್ಲೂ ತುಂಬ ಮುಂದಿದ್ದೆ. ಕೌಟುಂಬಿಕ ವಿಷಯ, ಸಮಸ್ಯೆ, ಗೆಳೆಯರ ಮಾತು ಹೀಗೆ ಎಲ್ಲವನ್ನೂ ನಾನು ಸಣ್ಣ ವಯಸ್ಸಿನಲ್ಲೇ ಹರಟುತ್ತಿದ್ದೆ. ಹೀಗಾಗಿ ನಾನು ನನ್ನ ವಯಸ್ಸಿಗಿಂತ ಹೆಚ್ಚು ಪ್ರೌಢವಾಗಿ ಕಾಣುತ್ತಿದ್ದೆ. ಅಷ್ಟೇ ಅಲ್ಲ, ನನ್ನ ಕ್ಲಾಸ್‌ಮೇಟ್‌ಗಳು, ಗೆಳೆಯರು ಎಲ್ಲರೂ ತಮ್ಮ ಸಮಸ್ಯೆಗಳನ್ನು ನನ್ನ ಬಳಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳುತ್ತಿದ್ದರು. ಅಮ್ಮನಿಗೆ ನಾನು ತುಂಬ ಹತ್ತಿರವಾಗಿದ್ದೆ. ಎಲ್ಲ ವಿಷಯವನ್ನೂ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದೆ. ಅಣ್ಣನ ಜೊತೆಗಿದ್ದಾಗಲೆಲ್ಲಾ ನಾನು ಆತನ ಅಕ್ಕನಂತೆ ವರ್ತಿಸುತ್ತಿದ್ದೆ. ನನ್ನಲ್ಲಿದ್ದ ಪ್ರೌಢತ್ವದಿಂದಾಗಿ ಹಲವರು ನಾನು ಅಕ್ಕ, ಆತ ತಮ್ಮ ಅಂದುಕೊಳ್ಳುತ್ತಿದ್ದರು. ಅದು ತುಂಬ ತಮಾಷೆಯೆನಿಸುತ್ತಿತ್ತು.''
''ಅಂದಿನ ಹಳೆಯ ದಿನಗಳು ತುಂಬ ಮಧುರವಾಗಿದ್ದವು. ಸಣ್ಣವಳಿದ್ದಾಗ ಹಾಡುಗಳೆಂದರೆ ಪಂಚ ಪ್ರಾಣ. ಅಣ್ಣ ತಾನು ಇಷ್ಟಪಟ್ಟ ಹಾಡುಗಳನ್ನು ಟೇಪ್‌ರೆಕಾರ್ಡರ್‌ನಲ್ಲಿ ಹಾಕುತ್ತಿದ್ದ. ಆಗೆಲ್ಲಾ ಸಿಡಿಗಳಿರಲಿಲ್ಲ. ನಮ್ಮದೇ ಪುಟ್ಟ ರೇಡಿಯೋನಲ್ಲಿ ಹಾಡು ಕೇಳೋದು ಆಗ ತುಂಬ ಇಷ್ಟ. ಅಣ್ಣ ಹೆಚ್ಚಾಗಿ ಪಾಪ್ ಸಂಗೀತವನ್ನೇ ಹಾಕುತ್ತಿದ್ದ. ಅಮ್ಮ ತುಂಬ ಹಳೆಯ ಹಿಂದಿ ಹಾಡುಗಳನ್ನು ಕೇಳುತ್ತಿದ್ದರು. ಅದೇ ಸಂದರ್ಭ ನಾನು ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತ ಕಲಿಯತೊಡಗಿದೆ. ಸಂಗೀತದ ಮೇಲೆ ಒಲವು ಹೆಚ್ಚಿತು. ಭರತನಾಟ್ಯ ತರಗತಿಗೂ ಹೋಗತೊಡಗಿದೆ. ಚಿತ್ರಕಲೆಯಲ್ಲೂ ಪುಟ್ಟ ಹುಡುಗಿಯಿರುವಾಗಲೇ ಆಸಕ್ತಿಯಿತ್ತು.''
IFM
''ಆಗೆಲ್ಲಾ ನಮಗೆ ಭಾನುವಾರ ಬಂತೆಂದರೆ ಮಜಾನೋ ಮಜಾ. ಸಿನಿಮಾ ನೋಡುವುದು, ಹಾಡು ಕೇಳುವುದು.. ಹೀಗೆ ಮಜಾ ಮಾಡುತ್ತಿದ್ದೆವು. ಭಾನುವಾರ ದೂರದರ್ಶನದಲ್ಲಿ ಪ್ರಸಾರವಾಗುವ ಸಿನಿಮಾವನ್ನು ಬಿಡದೆ ನೋಡುತ್ತಿದ್ದೆವು. ವಿಪರೀತ ಹುಚ್ಚಾಪಟ್ಟೆ ಸಿನಿಮಾ ನೋಡದಿದ್ದರೂ, ಭಾನುವಾರಗಳಂತೂ ಖಂಡಿತ ಟಿವಿ ಮುಂದೆ ಕೂರುತ್ತಿದ್ದೆವು, ಸಿನಿಮಾಕ್ಕಾಗಿ. ಆಮೇಲೆ ಭಾನುವಾರ ಕಳೆದ ಮೇಲೆ ಹೋಂವರ್ಕ್ ಬರೆಯಲು ಉದಾಸೀವಾಗುತ್ತಿತ್ತು.''
''ಆಗೆಲ್ಲಾ ವಿಡಿಯೋಗಳನ್ನು ಹೊರಗಡೆಯಿಂದ ಕೊಂಡು ಹೊಸ ಸಿನಿಮಾಗಳನ್ನು ನೋಡುವುದೆಲ್ಲಾ ದೊಡ್ಡ ವಿಚಾರ. ನಮಗದೆಲ್ಲಾ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ದೂರದರ್ಶನದಲ್ಲಿ ಪ್ರಸಾರವಾಗುವ ಹಳೆ ಸಿನಿಮಾಗಳನ್ನು ನೋಡುತ್ತಿದ್ದೆವು. ಅಷ್ಟೇ ಅಲ್ಲ, ನನ್ನ ಫೇವರಿಟ್ ಟಿವಿ ಕಾರ್ಯಕ್ರಮವೆಂದರೆ ಆಗ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಛಾಯಾಗೀತ್ ಕಾರ್ಯಕ್ರಮ. ಅದನ್ನಂತೂ ತಪ್ಪಿಸುತ್ತಿರಲಿಲ್ಲ. ಇದ ಬಿಟ್ಟರೆ ಆಗ ನಮ್ಮ ಗುರಿಯಿದ್ದುದು ಚಾಕೋಲೇಟ್ ಕಡೆಗೆ ಹಾಗೂ ಗೇಮ್ಸ್ ಪಾರ್ಕ್‌ನಲ್ಲಿ ಆಟವಾಡುವ ಕಡೆಗೆ.''
''ನನ್ನ ಹದಿಹರೆಯದ ಆರಂಭದ ವಯಸ್ಸಿನಲ್ಲಂತೂ ನಾನು ಅಣ್ಣ ಸಿಕ್ಕಾಪಟ್ಟೆ ಜಗಳವಾಡುತ್ತಿದ್ದೆವು. ಆತ ಹೇಳಿದ್ದು ನನಗಾಗುತ್ತಿರಲಿಲ್ಲ. ನಾನು ಆತ ಹೇಳಿದ ವಿರುದ್ಧ ವಾದಿಸಿದಾಗ ಅದು ವಾದಕ್ಕೆ ತಿರುಗುತ್ತಿತ್ತು. ನಾನು ಕಾಲೇಜಿಗೆ ಸೇರಿದಾಗಲಂತೂ ನನ್ನ ಖುಷಿಯ ಗಳಿಗೆಗಳನ್ನಂತೂ ಈ ಅಣ್ಣ ತಿಂದು ಹಾಕುತ್ತಾನೆಂಬ ಕೋಪವಿತ್ತು. ಅಣ್ಣಂದಿರ ಬುದ್ಧಿ ಆತ ತೋರಿಸುತ್ತಾನೆಂದು ಈ ಕೋಪ ಬರುತ್ತಿತ್ತು. ಜಗಳವಾಡಿದ ಮೇಲೆ ಸ್ವಲ್ಪ ಹೊತ್ತಿನಲ್ಲೇ ಎಲ್ಲ ಸರಿಯಾಗಿ ನಾವಿಬ್ಬರೂ ಫ್ರೆಂಡ್ಸ್ ಆಗಿಬಿಡುತ್ತಿದ್ದೆವು. ಸಣ್ಣವಳಿದ್ದಾಗ ಆಗಿನ ಫ್ಯಾಷನ್ ಉಡುಗೆಗಳ್ನನು ಧರಿಸುತ್ತಿದ್ದೆ. ಆದರೆ ನನಗೆ ಇಷ್ಟವಾಗುವ ಹಾಗೂ ಆರಾಮವಾಗಿರುವಂತಹ ಬಟ್ಟೆಗಳನ್ನು ಮಾತ್ರ ಹಾಕುತ್ತಿದ್ದೆ. ಕಾಲೇಜಿಗೆ ಹೋಗುವಾಗಲೂ ಅಷ್ಟೆ ತುಂಬ ಸಿಂಪಲ್ ಆಗಿರುತ್ತಿದ್ದೆ. ಚೂಡಿದಾರ್ ಅಥವಾ ಜೀನ್ಸ್ ಪ್ಯಾಂಟ್ ಮೇಲೆ ಟಿ-ಶರ್ಟ್ ಧರಿಸಿ ಹೋಗುತ್ತಿದ್ದೆ.ನನ್ನ ಇಷ್ಟದ ವಿಷಯ ಜೀವಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ. ಹಾಗಾಗಿ ಸಣ್ಣವಳಿದ್ದಾಗಲೇ ವೈದ್ಯಳಾಗಬೇಕೆಂದು ಕನಸು ಕಂಡೆ. ಅದಕ್ಕಾಗಿ ತುಂಬ ಹಾರ್ಡ್ ವರ್ಕ್ ಮಾಡಬೇಕಿತ್ತು. ಹಾಗಾಗಿ ನಾನು ನನ್ನ ನಿರ್ಧಾರ ಬದಲಿಸಿ ಆರ್ಕಿಟೆಕ್ಟ್ ಆರಿಸಿದೆ. ಆಮೇಲೆ ಆರ್ಕಿಟೆಕ್ಚರ್‌ನಲ್ಲಿ ಒಲವೂ ಬಂತು.''
ಹೀಗೆ ವಿವರಿಸುತ್ತಾ ಹೋಗುವ ಐಶ್ವರ್ಯಾ ರೈ ಮತ್ತೆ ಆರ್ಕಿಟೆಕ್ಚರ್ ಕೋರ್ಸಿನ ಅರ್ಧದಲ್ಲಿದ್ದಾಗಲೇ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟಿದ್ದರಿಂದ ವಿದ್ಯಾಭ್ಯಾಸ ಅರ್ಧಕ್ಕೇ ನಿಂತಿತು. ಮಾಡೆಲಿಂಗ್ ಜಗತ್ತಿನ ಒಂದೊಂದೇ ಮೆಟ್ಟಿಲೇರಿ ವಿಶ್ವಸುಂದರಿಯಾದ ಕಥೆ ಎಲ್ಲರಿಗೂ ಗೊತ್ತಿದೆ. ಅದನ್ನೇನೂ ವಿವರಿಸಿ ಹೇಳಬೇಕಾಗಿಲ್ಲ.