ಐಶ್ವರ್ಯಾ ರೈ ಗರ್ಭಿಣಿಯಂತೆ! ಹಾಗೊಂದು ಸುದ್ದಿಯೀಗ ಬಾಲಿವುಡ್ ಅಂಗಳದಲ್ಲಿ ಸ್ಫೋಟಗೊಂಡಿದೆ. ಎಲ್ಲರೂ ಐಶ್ ನಡೆಯುವಾಗ ಆಕೆಯ ಹೊಟ್ಟೆಯನ್ನೇ ನೋಡುತ್ತಿದ್ದಾರಂತೆ. ಬಾಲಿವುಡ್ಡಿನ ಮಂದಿಯೆಲ್ಲ ಹೀಗೆ ಮಾಡೋದು ನೋಡಿ ಐಶ್ಗೆ ನಗು ತಡೆಯಲಾಗುತ್ತಿಲ್ಲವಂತೆ. ಅರೆ, ನಾನು ಗರ್ಭಿಣಿಯಾ? ಹಹ್ಹಹ್ಹಾ.. ಎಂದು ಐಶ್ ಬಿದ್ದು ಬಿದ್ದು ನಗಲಾರಂಭಿಸಿದ್ದಾಳಂತೆ!
ಹಾಗಾದರೆ ಐಶ್ ಬಸುರಿಯಂತೆ ಎಂಬ ಸುದ್ದಿ ಹಬ್ಬಿದ್ದು ಎಲ್ಲಿಂದ ಅಂತೀರಾ? ವಿಷಯ ತುಂಬಾ ಸಿಂಪಲ್. ಎಲ್ಲಾ ಆಗಿದ್ದು ಲಕ್ಸ್ ಜಾಹಿರಾತಿನಿಂದ! ಹೌದು. ಐಶ್ವರ್ಯಾ ರೈ ಹಾಗೂ ಪತಿ ಅಭಿಷೇಕ್ ಬಚ್ಚನ್ ಅವರ ಜೋಡಿಯ ಲಕ್ಸ್ ಜಾಹಿರಾತು ಈಗ ಭಾರೀ ಪ್ರಸಿದ್ಧಿ ಗಿಟ್ಟಿಸಿಕೊಂಡಿರೋದು ಹಳೇ ಸುದ್ದಿ. ರಿಯಲ್ ಲೈಫಿನ ಜೋಡಿ ರೀಲ್ ಲೈಫಿನಲ್ಲೂ ಜೋಡಿಯಾಗಿ ಕಾಣಿಸಿಕೊಂಡು ಜಾಹಿರಾತೊಂದರಲ್ಲಿ ಮಾಡಿದ ರೊಮ್ಯಾನ್ಸು ಎಲ್ಲರ ಕಣ್ರೆಪ್ಪೆಗಳನ್ನು ಅರಳಿಸಿದೆ. ಅದರಲ್ಲೂ ಲಕ್ಸ್ ಇತ್ತೀಚೆಗೆ ಈ ಜಾಹಿರಾತಿಗೆ ಒಂದು ಹೊಸ ಅಧ್ಯಾಯವನ್ನೂ ಸೇರಿಸಿದೆ. ಆ ಅಧ್ಯಾಯದಿಂದಾಗಿಯೇ ಐಶ್ ಗರ್ಭಿಣಿಯಂತೆ ಎಂಬ ಗಾಸಿಪ್ ಹುಟ್ಟಿಕೊಂಡದ್ದು.
IFM
ಬಹುಶಃ ನೀವೂ ಈ ಜಾಹಿರಾತು ನೋಡಿರಬಹುದು. ಗಂಡ ಅಭಿಷೇಕ ಹಾಗೂ ಹೆಂಡತಿ ಐಶ್ ಇಬ್ಬರೂ ಅಕ್ಕಪಕ್ಕ ಕೂತು ನೇರವಾಗಿ ನಮ್ಮ ಜೊತೆ ಸಂವಾದಕ್ಕಿಳಿಯುತ್ತಾರೆ. ಅಭಿಷೇಕ್, ನಾನೊಂದು ನಿಮಗೆ ಶುಭ ಸುದ್ದಿ ಹೇಳಬೇಕು ಎಂದು ಸ್ವಲ್ಪ ನಾಚಿಕೆಬೆರೆತ ನಗುವಿನೊಂದಿಗೆ ಪ್ರೇಕ್ಷಕರಿಗೆ ಹೇಳುತ್ತಾನೆ. ಹಾಗೆ ಹೇಳುತ್ತಾ ತುಂಟ ಕಣ್ಣುಗಳಿಂದ ಐಶ್ ಎಡೆಗೆ ತಿರುಗಿ ನೋಡುತ್ತಾ, ನೀನು ಹೇಳು ಎನ್ನುತ್ತಾನೆ. ಆಗ ಐಶ್ ಇನ್ನೂ ತುಸು ನಾಚುತ್ತಾ, ನೀವೇ ಹೇಳಿ ಎಂದು ಉಗುರುಕಚ್ಚುತ್ತಾಳೆ. ಆಗ ಹೂಂ ಸರಿ ಎನ್ನುತ್ತಾ ಅಭಿಷೇಕ್ ಪ್ರೇಕ್ಷಕರೆಡೆಗೆ ನೋಡುತ್ತಾನೆ. ಜಾಹಿರಾತಾದರೂ, ಪ್ರೇಕ್ಷಕರ ದೃಷ್ಟಿ, ಗಮನ ಹಾಗೂ ಮುಂದೇನು ಹೇಳುತ್ತಾನೆಂಬ ಕುತೂಹಲವನ್ನು ಹಿಡಿದಿಡುವ ಈ ಜಾಹಿರಾತಿನಲ್ಲಿ ನಂತರ ಅಭಿಷೇಕ್ ಹೇಳುವ ಮಾತಿಗೆ ಯಾರಿಗೂ ನಗುಬರದಿರದು. ಅಭಿಷೇಕ್ ಹೇಳೋದು, ಲಕ್ಸ್ ನಿಮಗಾಗಿ ಕೆಲವೇ ಅದೃಷ್ಠಶಾಲಿಗಳಿಗೆ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಲಿದೆ ಎಂಬುದು!
ಅಭಿಷೇಕ್ ನಾಚುತ್ತಾ ಶುಭಸುದ್ದಿ ಹೇಳಲು ಹೊರಟಿರೋದು ಬಹುಶಃ ಅರ್ದಂಬರ್ಧ ಜಾಹಿರಾತು ನೋಡಿದವರಿಗೆ ಖಂಡಿತಾ ಐಶ್ ತಾಯಿಯಾಗುತ್ತಿದ್ದಾಳೇನೋ ಎಂಬ ಅನುಮಾನ ಸೃಷ್ಟಿಸಿದರೆ ಆಶ್ಚರ್ಯವೇ ಇಲ್ಲ. ಹಾಗಾಗಿ ಸಹಜವಾಗಿಯೇ ಈ ಜಾಹಿರಾತಿನಿಂದ ಇಂಥ ಗುಲ್ಲು ಹಬ್ಬಿದೆ. ಈ ಗುಲ್ಲಿನ ಸುಳಿವು ಸ್ವತಃ ಐಶ್‌ಗೆ ಲಭಿಸಿದ್ದೇ ತಡ, ಐಶ್ ಗೊಳ್ಳನೆ ನಕ್ಕಳಂತೆ. ನಾನಾ ಗರ್ಭಿಣಿಯಾ? ಎಂದು ಆಶ್ಚರ್ಯಚಕಿತಳಾಗಿದ್ದಾಳೆ.
IFM
ಹಾಗಾದರೆ ಐಶ್‌ಗೆ ಗರ್ಭಿಣಿಯಾಗೋ ಆಸೆಯೇ ಇಲ್ಲವೇ ಎಂದರೆ, ಆಕೆಯಂತೂ, ಅಂಥಾ ಭಾಗ್ಯ ಆ ದೇವರು ಕರುಣಿಸಲಿ ಎನ್ನುತ್ತಾಳೆ. ಆಕೆಯ ಆಪ್ತ ಮೂಲಗಳ ಪ್ರಕಾರ, ಐಶ್ ಸದ್ಯಕ್ಕೆ ಸಿಕ್ಕಾಪಟ್ಟೆ ಬ್ಯುಸಿ. ಸಂಜಯ್ ಲೀಲಾ ಬನ್ಸಾಲಿ ಅವರ ಗುಝಾರಿಶ್, ಬೆನ್ ಕಿಂಗ್‌ಸ್ಲೇ ಅವರ ತಾಜ್ ಮಹಲ್ ಚಿತ್ರದ ಮುಮ್ತಾಜ್ ಪಾತ್ರ, ವಿಪುಲ್ ಶಾ ಅವರ ಆಕ್ಷನ್ ರಿಪ್ಲೇ, ಮಣಿರತ್ನಂ ಅವರ ರಾವಣ ಹಾಗೂ ಎಂದಿರನ್ ಹೀಗೆ ಸಾಕಷ್ಟು ಚಿತ್ರಗಳ ಬ್ಯುಸಿ ಕೆಲಸದಲ್ಲಿ ಐಶ್‌ಗೆ ಖಾಸಗಿ ಜೀವನಕ್ಕೂ ಪುರುಸೊತ್ತೇ ಸಿಗುತ್ತಿಲ್ಲ. ಐಶ್ ಒಪ್ಪಿಕೊಂಡ ಪ್ರಾಜೆಕ್ಟುಗಳನ್ನು ಮುಗಿಸಲು ಕಡಿಮೆಯೆಂದರೂ ಇನ್ನೊಂದು ವರ್ಷವಾದರೂ ಬೇಕು. ಅಷ್ಟೇ ಅಲ್ಲ, ಗುಝಾರಿಶ್ ಚಿತ್ರದ ಗಡಿಬಿಡಿಯಲ್ಲಿ ತನ್ನ ಪ್ರೀತಿಯ ಮಾವ ಹಾಗೂ ಗಂಡ ಅಭಿನಯಿಸುತ್ತಿರುವ ಪಾ ಚಿತ್ರದ ಪ್ರಚಾರಕ್ಕೂ ಸಮಯ ಸಿಗುತ್ತಿಲ್ಲವಂತಚೆ. ಅದ್ಹೇಗೋ ಬನ್ಸಾಲಿ ಮನವೊಪ್ಪಿಸಿ ಐಶ್ ಮಾವ ಹಾಗೂ ಗಂಡನ ಜೊತೆಗೆ ಪಾ ಚಿತ್ರದ ಪ್ರಚಾರಕ್ಕೆ ಬಂದಿದ್ದಾಳೆ. ಪರಿಸ್ಥಿತಿ ಹೀಗಿರುವಾಗ, ಐಶ್ ತಾಯಿಯಾಗಲು ಆಕೆಗೆ ಪುರುಸೊತ್ತಾದರೂ ಎಲ್ಲಿದೆ ಹೇಳಿ!
ಏನೇ ಇರಲಿ, ಐಶ್ ಮಾತ್ರ ಹೆಣ್ಣಾಗಲಿ ಗಂಡಾಗಲಿ ಮಗು ಒಂದು ಬೇಕೇ ಬೇಕು ಅಂದಿದ್ದಾಳೆ. ಅಭಿಷೇಕ್‌ಗೆ ಮಗು ಎಂದರೆ ಪಂಚಪ್ರಾಣ. ಹಾಗಾಗಿ ಸದ್ಯದಲ್ಲೇ ಸರ್‌ಪ್ರೈಸ್ ಕೊಡುತ್ತೇನೆ. ಆದರೆ ನಾನೀಗ ಗರ್ಭಿಣಿಯಾಗಿಲ್ಲ ಎಂದೂ ಹೇಳಿದ್ದಾಳೆ. ಸದ್ಯದಲ್ಲೇ ಐಶ್ ಶುಭಸುದ್ದಿ ಹೇಳುವ ಸಾಧ್ಯತೆ ಇರಬಹದು ಬಿಡಿ!