ಜೆನಿಲಿಯಾಗೆ ಮದ್ವೆಯಂತೆ ಎಂಬ ಗಾಳಿ ಸುದ್ದಿ ಎಲ್ಲೆಡೆ ಹಬ್ಬಿತ್ತು. ಕೆಲವು ಪೇಪರುಗಳಲ್ಲೂ ಬಂದಿತ್ತು. ಅದೂ ಕೂಡಾ ಯಾರೊಂದಿಗೆ ಅಂತೀರಾ? ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್‌ರ ಮಗ ಹಾಗೂ ನಟ ರಿತೇಶ್ ದೇಶ್‌ಮುಖ್ ಜೊತೆಗೆ ಜೆನಿಲಿಯಾ ಮದುವೆಯಂತೆ ಎಂಬುದೇ ಆ ಗಾಳಿ ಸುದ್ದಿ. ಈ ಸುದ್ದಿ ಕೇಳಿ ಸ್ವತಃ ಜೆನಿಲಿಯಾಗೂ ತಲೆಬಿಸಿಯಾಗಿದೆಯಂತೆ. ಸುಮ್ಮಸುಮ್ಮನೆ ಯಾಕೆ ಇಂಥ ಸುದ್ದಿ ಹಬ್ಬಿಸುತ್ತಾರೆ ಎಂದು ಜೆನಿಲಿಯಾ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
IFM
ರಿತೇಶ್ ದೇಶ್‌ಮುಖ್ ಹಾಗೂ ಜೆನಿಲಿಯಾ ನಡುವೆ ಗೆಳೆತನಕ್ಕಿಂತಲೂ ಗಾಢ ಸಂಬಂಧವಿದೆ ಎಂಬ ಗಾಳಿ ಸುದ್ದಿ ಐದಾರು ವರ್ಷಗಳಿಂದಲೂ ಇದೆ. 2003ರಲ್ಲಿ ಈ ಇಬ್ಬರು ಜೊತೆಯಾಗಿ ತುಜೆ ಮೇರಿ ಕಸಮ್ ಎಂಬ ಚಿತ್ರದಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದರು. ಚಿತ್ರ ತೋಪಾಯಿತು. ಜೆನಿಲಿಯಾ ಆಮೇಲೆ ಹಿಂದಿಯಲ್ಲಿ ಅದೃಷ್ಟವಿಲ್ಲವೆಂದು ದಕ್ಷಿಣದತ್ತ ಮುಖ ಮಾಡಿ ಗೆದ್ದುದು ಹಳೇ ಕಥೆ. ಮತ್ತೆ ಕಳೆದ ವರ್ಷ ಜಾನೇ ತೂಬ ಚಿತ್ರದಲ್ಲಿ ಗೆದ್ದು ಹಿಂದಿಯತ್ತ ಮುಖ ತಿರುಗಿಸಿದ್ದಾಳೆ. ಜಾನೇ ತೂ ಗೆದ್ದ ಮೇಲಂತೂ ಜೆನಿಲಿಯಾಗೆ ಬಾಲಿವುಡ್‌ನಿಂದ ಸಾಕಷ್ಟು ಅದೃಷ್ಟ ಒಲಿದು ಬರುತ್ತಿದೆ. ಅದೇ ಸಂದರ್ಭ ಗಾಸಿಪ್ ಕೂಡಾ ಅಂಟಿದೆ.
ರಿತೇಶ್ ಜೊತೆಗೆ ಏನೋ ಸರಸ ಗಿರಿಸ ನಡೀತಿದೆಯಂತಲ್ಲಾ ಎಂದರೆ, ಈವರೆಗೆ ಸುಮ್ಮನಿದ್ದ ಜೆನಿಲಿಯಾ ಈಗ ಮಾತನಾಡಲು ಹೊರಟಿದ್ದಾಳೆ. ಖಾಸಗಿ ವಿಚಾರವನ್ನು ಮಾಧ್ಯಮಗಳಲ್ಲಿ ಮಾತನಾಡಲೇಬಾರದೆಂದು ತೀರ್ಮಾನಿಸಿದ್ದ ಜೆನಿಲಿಯಾ ಈ ಬಾರಿ ಅದು ಮಿತಿಮೀರಿದ್ದಿಂದ ಮಾತನಾಡಲೇಬೇಕಾಗಿದೆ ಎಂದೂ ಸಮಜಾಯಿಶಿ ಹೇಳಿದ್ದಾಳೆ. ನಾನು ರಿತೇಶ್ ಕೇವಲ ಫ್ರೆಂಡ್ಸ್. ನಾವಿಬ್ಬರೂ ಮದುವೆಯಾಗುವ ಪ್ರಶ್ನೆಯೇ ಇಲ್ಲ. ಮದುವೆಯಾಗುವ ಸಂದರ್ಭ ಬಂದರೆ ನಾನೇ ಎಲ್ಲರಲ್ಲೂ ವಿವರಿಸುತ್ತೇನೆ. ನಾನಾಗಿಯೇ ಮದುವೆ ವಿಚಾರ ಹೇಳುವವರೆಗೂ ಯಾರೂ ನನಗೆ ಮದುವೆಯೆಂದು ಹಬ್ಬಿದ ವಿಚಾರವನ್ನು ನಂಬಬೇಡಿ. ಇಂಥ ಗಾಸಿಪ್‌ಗಳಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬ ಬೇಸರವಾಗಿದೆ ಎಂದು ಜೆನಿಲಿಯಾ ಹೇಳಿದ್ದಾರೆ.