ಶಾಹಿದ್ ಕಪೂರ್ ಎಂಬ ಬಾಲಿವುಡ್‌ನ ಸುರಸುಂದರಾಂಗ ನಟನಿಗೆ 29 ವರ್ಷವೀಗ ತುಂಬಿದೆ. ವರ್ಷಕ್ಕೆ ಎರಡು ಮೂರು ಹುಡುಗಿಯರ ಜೊತೆ ಇವರ ಹೆಸರುಗಳು ಕೇಳಿಬರುತ್ತಿರುವುದು ತೀರಾ ಸಾಮಾನ್ಯ. ಮೊನ್ನೆ ಮೊನ್ನೆಯವರೆಗೆ ಪ್ರಿಯಾಂಕಾ ಛೋಪ್ರಾ ಹಿಂದೆ ಸುತ್ತುತ್ತಿದ್ದ ಶಾಹಿದ್ ಹೆಸರೀಗ ದೀಪಿಕಾ ಪಡುಕೋಣೆ ಎಂಬ ಕನ್ನಡತಿಯ ಹಿಂದೆ ಸುತ್ತುತ್ತಿದೆ.
ಹೌದು. ಮೊನ್ನೆ ಶಾಹಿದ್ ಹುಟ್ಟುಹಬ್ಬ ನಡೀತು. ಹುಟ್ಟುಹಬ್ಬಕ್ಕೆ ಈ ಬಾರಿ ಶಾಹಿದ್ ವಿಶೇಷ ಅತಿಥಿಯನ್ನಾಗಿ ಕರೆದಿದ್ದು ದೀಪಿಕಾಳನ್ನು! ಆದ್ರೆ ಜಾಣೆ ದೀಪಿಕಾ ಈಗಾಗಲೇ ತನ್ನ ಹಾಗೂ ಶಾಹಿದ್ ಬಗ್ಗೆ ಗಾಸಿಪ್ ಸೃಷ್ಟಿಸುತ್ತಿದ್ದಾರೆಂದು ಆ ಸಮಾರಂಭಕ್ಕೆ ಹೋಗಲೇ ಇಲ್ಲವಂತೆ! ಇದಕ್ಕೂ ಮೊದಲು ದೀಪಿಕಾ ಇರುವ ಅಪಾರ್ಟ್‌ಮೆಂಟ್ ಮುಂದೆ ಶಾಹಿದ್ ಕಾರು ನಿಂತಿತ್ತಂತೆ. ಇದನ್ನು ನೋಡಿಯೇ ಹಲವರು ದೀಪಿಕಾ ಮನೆಗೆ ಶಾಹಿದ್ ಬಂದಿದ್ದಾನೆಂದು ಗುಲ್ಲೆಬ್ಬಿಸಿದ್ದಾರೆ. ಅದೆಲ್ಲಾ ಹಾಗಿರಲಿ. ಇನ್ನೊಂದು ಹೆಸರಿಡದ ಚಿತ್ರವೊಂದರಲ್ಲಿ ಶಾಹಿದ್ ಹಾಗೂ ದೀಪಿಕಾ ಜೋಡಿಯಾಗಿ ನಟಿಸುವುದೂ ಪಕ್ಕಾಗಿದೆಯೆಂಬ ಸುದ್ದಿಯಿದೆ. ದೀಪಿಕಾಳೇ ಈ ಚಿತ್ರಕ್ಕೆ ತನ್ನ ನಾಯಕಿಯಾಗಿ ಅಭಿನಯಿಸಲಿ ಎಂಬುದು ಶಾಹಿದ್ ಮನದಿಂಗಿತವಂತೆ. ಈಗಾಗಲೇ ಹಲವಾರು ಬಾರಿ ಈ ಇಬ್ಬರು ಪರಸ್ಪರ ದೂರವಾಣಿಯಲ್ಲಿ ಮಾತನಾಡಿಕೊಂಡಿದ್ದು, ಶಾಹಿದ್ ಯಾಕೋ ದೀಪಿಕಾಳತ್ತ ಸ್ಪೆಷಲ್ ಇಂಟರೆಸ್ಟ್ ತೋರಿಸುತ್ತಿದ್ದಾನೆ ಎನ್ನಲಾಗುತ್ತಿದೆ.
IFM
ಅದೆಲ್ಲಾ ಹೋಗಲಿ ಬಿಡಿ ಸ್ವಾಮಿ, ಇದನ್ನೆಲ್ಲ ಕೇಳಿ ಶಾಹಿದ್ ಮಾತ್ರ ತಲೆಬಿಸಿ ಮಾಡಿಕೊಂಡಿದ್ದಾನಂತೆ. ಸುಖಾಸುಮ್ಮನೆ ನನ್ನನ್ನು ಇದ್ದಬಿದ್ದ ಹುಡುಗಿಯರ ಜೊತೆ ಲಿಂಕ್ ಮಾಡುತ್ತಾರಲ್ಲಾ ಎನ್ನುತ್ತಾ ನಕ್ಕಿದ್ದಾನಂತೆ!
ನನಗೆ ದೀಪಿಕಾ ಗೊತ್ತು. ಕೆಲವು ಬಾರಿ ಆಕೆಯನ್ನು ಭೇಟಿಯಾಗಿದ್ದೇನೆ. ಆಕೆ ಒಳ್ಳೆಯ ಹುಡುಗಿಯಂತೆ ಅನಿಸುತ್ತಾಳೆ. ಆದರೆ ನಾನು ಯಾರ ಜೊತೆ ಮಾತನಾಡಿದರೂ ಆ ಹುಡುಗಿ ಜೊತೆ ಲಿಂಕ್ ಮಾಡುತ್ತಾರಲ್ಲಾ, ಇದ್ನನು ಕೇಳಿ ಮಾತ್ರ ನನಗೆ ಮುಜುಗರವಾಗುತ್ತದೆ ಎಂದಿದ್ದಾರೆ.
ಹೊಸ ತಿರುವು: ವಿಚಿತ್ರವೆಂದರೆ, ಈ ಶಾಹಿದ್- ದೀಪಿಕಾ ಗಾಸಿಪ್‌ಗೆ ಹೊಸ ತಿರುವು ದಕ್ಕಿದೆ. ಇತ್ತ ಶಾಹಿದ್- ದೀಪಿಕಾರ ಗಾಸಿಪ್ ಹಲವು ವೆಬ್‌ಸೈಟ್‌ಗಳಲ್ಲಿ, ಪತ್ರಿಕೆಗಳಲ್ಲಿ ಹರಡುತ್ತಿದ್ದಂತೆ, ಅತ್ತ ಅಮೆರಿಕದಲ್ಲಿ ಯಾವುದೋ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ದೀಪಿಕಾಳ ಮಾಜಿ ಪ್ರೇಮಿ ರಣಬೀರ್ ಕಪೂರ್ ಕಿವಿಗೂ ಬಿದ್ದಿದೆ. ಹಾಗಾಗಿ ಆತ ಈ ಸುದ್ದಿ ಸತ್ಯವೋ ಸುಳ್ಳೋ ಎಂದು ತಿಳಿಯಲು ಮುಂಬೈಯ ತನ್ನ ಆಪ್ತರಿಗೆಲ್ಲ ಒಂದೇ ಸಮನೆ ಕಾಲ್ ಮಾಡುತ್ತಿದ್ದಾನಂತೆ. ರಣಬೀರ್ ಆಪ್ತರ ಪ್ರಕಾರ, ಮತ್ತೆ ದೀಪಿಕಾಳನ್ನು ರಣಬೀರ್ ಬಯಸುತ್ತಿದ್ದಾನೆ. ಆದರೆ ರಣಬೀರ್‌ನಿಂದ ಕೆಲವು ತಿಂಗಳ ಹಿಂದೆ ತಿರಸ್ಕೃತವಾಗಿ ನೋವು ಅನುಭವಿಸಿದ್ದ ದೀಪಿಕಾ ಮಾತ್ರ ತನಗೇನೂ ಗೊತ್ತಿಲ್ಲವೆಂಬಂತೆ ಹಾಯಾಗಿದ್ದಾಳಂತೆ!