ಬೇನಜೀರ್ ಬಗ್ಗೆ ಈಗಲೇ ಚಿತ್ರವಿಲ್ಲ
ಕೆಲವು ದಿನಗಳ ಹಿಂದೆ ಹತ್ಯೆಯಾದ ಪಾಕಿಸ್ತಾನದ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೊ ಜೀವನಾಧಾರಿತ ಚಿತ್ರ ನಿರ್ಮಿಸುವ ಕುರಿತು ಸದ್ಯ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ ಭಟ್ ಹೇಳಿದ್ದಾರೆ.
ಪೂಜಾ ಭಟ್ ಮತ್ತು ನಾಗಾರ್ಜುನ ಅಭಿನಯದ "ಜಖ್ಮ" ನಿರ್ದೇಶನದ ನಂತರ ಮಹೇಶ್ ಭಟ್ ಚಿತ್ರ ನಿರ್ದೇಶನಕ್ಕೆ ಇಳಿದಿಲ್ಲ. ಚಿತ್ರ ನಿರ್ದೇಶನ ಎನ್ನುವುದು ಈಗ ನನ್ನ ಜೀವನದಲ್ಲಿ ಮುಗಿದ ಅಧ್ಯಾಯ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಕೆಲ ಚಿತ್ರ ನಿರ್ಮಾಪಕರ ಸಹಯೋಗದಲ್ಲಿ ಬೇನಜೀರ್ ಜೀವನಾಧಾರಿತ ಚಿತ್ರ ನಿರ್ಮಾಣ ಈಗ ಆದ್ಯತೆಯ ಪಟ್ಟಿಯಲ್ಲಿ ಇಲ್ಲ. ಮೊದಲನೆಯದಾಗಿ ಇಂತಹ ಒಂದು ಚಿತ್ರ ನಿರ್ಮಾಣದ ಪರಿಕಲ್ಪನೆಯನ್ನು ಪಾಕಿಸ್ತಾನದ ಮಹಿಳೆಯೋರ್ವಳು ನಮ್ಮ ಎದುರು ಇಟ್ಟಿದ್ದಾಳೆ. ಬೇನಜೀರ್ ಅವರ ಹತ್ಯೆಯಾಗಿ ಕೆಲವೇ ದಿನಗಳು ಕಳೆದಿರುವುದರಿಂದ ಇನ್ನೂ ನೋವಿನ ಛಾಯೆ ಪಾಕಿಸ್ತಾನದಲ್ಲಿ ಹರಡಿದೆ. ಇಂತಹದೊಂದು ಚಿತ್ರ ನಿರ್ಮಾಣಕ್ಕೆ ಮುನ್ನ ಬೇನಜೀರ್ ಕುಟುಂಬ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಒಪ್ಪಿಗೆ ಅವಶ್ಯ ಎಂದು ಹೇಳಿದ್ದಾರೆ.
ಒಂದು ವೇಳೆ ಒಪ್ಪಿಗೆ ದೊರೆತಲ್ಲಿ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಕುರಿತು ಹೇಳಿದ ಮಹೇಶ ಭಟ್ " ಪಾಕಿಸ್ತಾನ ಮೂಲದ ನಿರ್ದೇಶಕರು ಚಿತ್ರವನ್ನು ನಿರ್ದೇಶಿಸಲಿದ್ದಾರೆ. ನಿರ್ದೇಶಕನೇ ಬೇನಜೀರ್ ಪಾತ್ರಕ್ಕೆ ಸೂಕ್ತ ನಟಿಯನ್ನು ಮತ್ತು ಸಹಕಲಾವಿದರನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೇ ಬೇನಜೀರ ಸುತ್ತಲಿನ ಪರಿಸರದ ಬಗ್ಗೆ ಅವರಲ್ಲಿ ಹೆಚ್ಚಿನ ಜ್ಞಾನವಿದ್ದು ಅವರಿಗೆ ನಿರ್ದೇಶನ ಬಿಟ್ಟುಕೊಡುವುದು ಸೂಕ್ತ. ನಮ್ಮದು ಏನಿದ್ದರೂ ಅಗತ್ಯ ನೆರವು ನೀಡುವುದು ಎಂದು ಮಾತು ಮುಗಿಸಿದರು.