ಅಮೀರ್ ಖಾನ್ ಅವರ ಚೊಚ್ಚಲ ನಿರ್ದೇಶನದ ಚಿತ್ರ "ತಾರೇ ಜಮೀನ್ ಪರ್" ನೋಕಿಯಾ 14ನೇ ವಾರ್ಷಿಕ ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರು ಪ್ರಮುಖ ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡಿದೆ.
ಅಮೀರ್ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಶಾರೂಖ್ ಖಾನ್ ನಟನೆಯ "ಚಕ್ ದೇ ಇಂಡಿಯಾ"ದ ಶಿಮಿತ್ ಅಮಿನ್ ಅವರ ಜೊತೆಗೆ ಹಂಚಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಮುಂಬಯಿಯಲ್ಲಿ ಏರ್ಪಡಿಸಲಾಗಿದ್ದ ವರ್ಣ ರಂಜಿತ ಸಮಾರಂಭದಲ್ಲಿ ಅಮೀರ್ ಖಾನ್ ಅವರು ಅತ್ಯುತ್ತಮ ಸಹನಟ ಮತ್ತು ಅತ್ಯುತ್ತಮ ಸಂಭಾಷಣೆಗಾಗಿ ಇರುವ ಪ್ರಶಸ್ತಿಯನ್ನೂ ಪಡೆದುಕೊಂಡರು.
ಅಮೀರ್ ಅವರ ಚಿತ್ರ ಗೆದ್ದುಕೊಂಡ ಇತರ ಮೂರು ಪ್ರಶಸ್ತಿಗಳೆಂದರೆ ಅತ್ಯುತ್ತಮ ಕಥೆ (ಅಮೋಲ್ ಗುಪ್ತೆ), ಅತ್ಯುತ್ತಮ ಬಾಲನಟ (ದರ್ಶೀಲ್ ಜಾಫ್ರಿ) ಮತ್ತು ಅತ್ಯುತ್ತಮ ಗೀತರಚನೆ (ಪ್ರಸೂನ್ ಜೋಷಿ).
ಚಕ್ ದೇ ಇಂಡಿಯಾ ನಟನೆಗಾಗಿ ಶಾರೂಖ್ ಖಾನ್ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ಅತ್ಯುತ್ತಮ ನಟಿ ಪ್ರಶಸ್ತಿಯು "ಜಬ್ ವಿ ಮೆಟ್" ಚಿತ್ರದ ನಟನೆಗಾಗಿ ಕರೀನಾ ಕಪೂರ್ ಪಾಲಾಯಿತು.
ಎ.ಆರ್.ರೆಹಮಾನ್ ಅವರು ತಮ್ಮ ಸಂಗೀತ ಧಮಾಕಾ "ಗುರು" ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಓಂ ಶಾಂತಿ ಓಂ ಚಿತ್ರದಲ್ಲಿ ಕಾಣಿಸಿಕೊಂಡ ಶಾರೂಖ್ ಖಾನ್-ದೀಪಿಕಾ ಪಡುಕೋಣೆ ಅವರಿಗೆ ಅತ್ಯುತ್ಮ ತಾರಾ ಜೋಡಿ ಪುರಸ್ಕಾರ ಲಭಿಸಿತು.
ದೀಪಿಕಾ ಅವರಿಗೆ ಅತ್ಯುತ್ತಮ ಹೊಸ ಪ್ರತಿಭೆ (ನಟಿ) ಮತ್ತು ರಣಬೀರ್ ಕಪೂರ್‌ಗೆ ಅತ್ಯುತ್ತಮ ಹೊಸ ಪ್ರತಿಭೆ (ನಟ) ಪುರಸ್ಕಾರ ದೊರೆಯಿತು.