ಪ್ರಾಣಿಗಳ ಮುಂಬಯಿ-ದಿಲ್ಲಿ ಪ್ರಯಾಣ:ನಿಖಿಲ್ ಆನಿಮೇಶನ್ ಚಿತ್ರ
ಮುಂಬಯಿ, ಬುಧವಾರ, 16 ಜನವರಿ 2008( 13:41 IST )
ಕೆಲವು ಆನಿಮೇಶನ್ ಚಿತ್ರಗಳ ಸೋಲಿನಿಂದಾಗಿ ಭಾರತದಲ್ಲಿ ಆನಿಮೇಶನ್ ಚಿತ್ರಗಳ ಟ್ರೆಂಡ್ ಸಂಪೂರ್ಣ ಸ್ತಗಿತಗೊಳ್ಳುತ್ತದೆ ಎಂಬುದು ನಿಮ್ಮ ಕಲ್ಪನೆಯಾದರೆ ಅದು ತಪ್ಪು. ಯಶ್ ರಾಜ್ ಮತ್ತು ವಾಲ್ಟ್ ಡಿಸ್ನೀ ಪಿಕ್ಚರ್ಸ್ ಅವರ ಮೊದಲ ಆನಿಮೇಶನ್ ಚಿತ್ರ ರೋಡ್‌ಸೈಡ್ ರೋಮಿಯೋದ ತಯಾರಿಯಲ್ಲಿದ್ದರೆ, ಕರಣ್ ಜೋಹರ್, ತನ್ನ ಬ್ಲಾಕ್‌ಬಸ್ಟರ್ ಕುಚ್ ಕುಚ್ ಹೋತಾ ಹೆ ಚಿತ್ರವನ್ನು 'ಕೂಚಿ ಕೂಚಿ ಹೋತಾ ಹೆ' ಎಂಬ ಹೆಸರಿನ ಮೂಲಕ ಆನಿಮೇಶನ್ ಪ್ರಕಾರದಲ್ಲಿ ರೀಮೇಕ್ ಮಾಡಲಿದ್ದಾರೆ.
ಈಗಿನ ಸುದ್ದಿ ಏನೆಂದರೆ, ನಿಖಿಲ್ ಅಡ್ವಾಣಿ 'ಅಬ್ ದಿಲ್ಲಿ ದೂರ್ ನಹೀ' ಎಂಬ ಆನಿಮೇಶನ್ ಚಿತ್ರವನ್ನು ಪ್ರಾರಂಭಿಸಿದ್ದು, ಇದರಲ್ಲಿ ಗೋವಿಂದ, ಅಕ್ಷಯ್ ಖನ್ನಾ, ಸುನಿಲ್ ಶೆಟ್ಟಿ, ಊರ್ಮಿಳಾ ಮಾಟೋಂಡ್ಕರ್, ಆಯೆಶಾ ತಾಕಿಯಾ ಮತ್ತು ಬೋಮನ್ ಇರಾನಿ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಇದೊಂದು 3ಡಿ ಆನಿಮೇಶನ್ ಚಿತ್ರವಾಗಿದ್ದು, ನಾಲ್ಕು ಪ್ರಾಣಿಗಳು ಮತ್ತು ಹಕ್ಕಿಗಳು ಮುಂಬಯಿನಿಂದ ದೆಹಲಿಗೆ ಪ್ರಯಾಣ ಮಾಡುವ ಕುರಿತಾಗಿದೆ. ಇದರಲ್ಲಿ ಅಕ್ಷಯ್ ಗಿಳಿಯ ಪಾತ್ರದಲ್ಲಿ ನಟಿಸಿದರೆ, ಗೋವಿಂದ ಮಂಗನಾಗಿ, ಬೋಮನ್ ಕರಡಿಯಾಗಿ, ಊರ್ಮಿಳಾ ಹಾಗೂ ಸುನಿಲ್ ಚಿರತೆಯಾಗಿ ಹಾಗೆಯೇ ಆಯೆಶಾ ಕರಡಿಮರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ನಿಖಿಲ್ ಅಡ್ವಾಣಿ ಮತ್ತು ಮುಖೇಶ್ ತರ್ಲೇಜಾ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಸುರೇಶ್ ನಾಯರ್ ಮತ್ತು ಗಿರೀಶ್ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರವು 2009ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.