ರಾಮದಾಸ್‌ಗೆ ಶಾರೂಖ್ ಸಲಹೆ: ನನಗ್ಯಾರೂ ಹೇಳಬೇಕಿಲ್ಲ
ಮುಂಬಯಿ, ಶುಕ್ರವಾರ, 1 ಫೆಬ್ರವರಿ 2008( 18:11 IST )
ಪರದೆ ಮೇಲೆ ಧೂಮಪಾನ ಮಾಡಬಾರದು ಎಂಬ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಹೇಳಿಕೆ ಬಗ್ಗೆ ಬಾಲಿವುಡ್ ನಟ ಶಾರೂಖ್ ಖಾನ್ ಹೇಗೆ ಪ್ರತಿಕ್ರಿಯಿಸಿದ್ದಾರೆ ಗೊತ್ತೇ?
"ನಾನ್ಯಾವತ್ತೂ ಧೂಮಪಾನವನ್ನು ಪ್ರಚೋದಿಸುವುದಿಲ್ಲ, ಏನು ಮಾಡಬೇಕು, ಏನು ಮಾಡಬಾರದು ಎಂದು ಬೇರೆಯವರು ಯಾರು ಕೂಡ ನನಗೆ ಹೇಳಬೇಕಾಗಿಲ್ಲ" ಅಂದಿದ್ದಾರೆ ಶಾರೂಖ್ ಟಿವಿ ಸಂದರ್ಶನವೊಂದರಲ್ಲಿ.
ಹೇಗೆ ಸಂಪಾದನೆ ಮಾಡಬೇಕು, ಏನನ್ನು ತಿನ್ನಬೇಕು, ಏನನ್ನು ಧರಿಸಬೇಕು ಅಥವಾ ನನ್ನ ಹೆಂಡತಿಗೆ ಏನನ್ನು ಹೇಳಬಾರದು ಇತ್ಯಾದಿಗಳನ್ನೆಲ್ಲಾ ನೀವು ನನಗೆ ಹೇಳುವಂತಿಲ್ಲ. ಯಾಕೆಂದರೆ ಇದು ತೀರಾ ವೈಯಕ್ತಿಕ ವಿಷಯ ಎಂದವರು ಹೇಳಿದ್ದಾರೆ.
ಶಾರೂಖ್ ಖಾನ್ ಅವರು ಮುಂಬಯಿಯಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದಾಗ ಸ್ಟ್ಯಾಂಡ್‌ನಲ್ಲಿ ಧೂಮಪಾನ ಮಾಡಬಾರದಿತ್ತು. ಅವರು ಮತ್ತು ಅಮಿತಾಭ್ ಬಚ್ಚನ್ ಕೆಲವೊಂದನ್ನು ಸೂಪರ್‌ಸ್ಟಾರ್ ರಜನೀಕಾಂತ್‌ರಿಂದ ಕಲಿಯಬೇಕಿದೆ ಎಂದು ರಾಮದಾಸ್ ಅವರು ಎರಡು ದಿನಗಳ ಹಿಂದೆ ಹೇಳಿದ್ದರು.
ಆದರೆ ಖಾನ್ ಅವರು ಎಲ್ಲರಿಗೂ ಒಂದು ಸಲಹೆ ನೀಡಬಯಸುತ್ತಾರೆ. 'ಮಕ್ಕಳಿಗೆಲ್ಲಾ ಯಾವತ್ತೂ ನಾನು ದಯವಿಟ್ಟು ಧೂಮಪಾನ ಮಾಡಬೇಡಿ, ಅದು ಕೆಟ್ಟದು ಅಂತ ಹೇಳುತ್ತಲೇ ಬಂದಿದ್ದೇನೆ. ನಾನು ಧೂಮಪಾನ ಮಾಡುತ್ತೇನೆ, ಆದರೆ ಅದು ತೀರಾ ಕೆಟ್ಟದು. ನೀವ್ಯಾರೂ ಮಾಡಬೇಡಿ' ವಿನಂತಿಸುತ್ತಾರವರು.
42ರ ಹರೆಯದ ಖಾನ್ ಧೂಮಪಾನಕ್ಕಾಗಿ ಹಲವು ಬಾರಿ ಟೀಕೆಗೊಳಗಾಗಿದ್ದಾರೆ. ಸಾರ್ವಜನಿಕವಾಗಿ ಕ್ರಿಕೆಟ್ ಮ್ಯಾಚ್ ಒಂದರ ಸಂದರ್ಭ ಮತ್ತು ಧೂಮಪಾನ ಮಾಡಿದ್ದಕ್ಕೆ ರಾಷ್ಟ್ರೀಯ ತಂಬಾಕು ನಿವಾರಣಾ ಸಂಸ್ಥೆಯು ಕಳೆದ ಅಕ್ಟೋಬರ್ ತಿಂಗಳಲ್ಲಿ ಅವರಿಗೆ ನ್ಯಾಯಾಂಗ ನೋಟೀಸ್ ಜಾರಿಗೊಳಿಸಿತ್ತು.