ಮಾನ್ಯತಾ ಜತೆ ಮುನ್ನಾಭಾಯಿ ಅಧಿಕೃತ ವಿವಾಹ
ಮುಂಬಯಿ, ಸೋಮವಾರ, 11 ಫೆಬ್ರವರಿ 2008( 16:28 IST )
ಕಳೆದ ಗುರುವಾರ ರಿಜಿಸ್ಟರ್ ವಿವಾಹವಾಗಿದ್ದ 48ರ ಹರೆಯದ ನಟ ಸಂಜಯ್ ದತ್ ಹಾಗೂ ಅವರ ಗೆಳತಿ ಮಾನ್ಯತಾ ಅವರು ಹಿಂದೂ ವಿಧಿಗಳ ಅನುಸಾರ ಸೋಮವಾರ ಮದುವೆಯಾದರು.
ಕಳೆದ ಎರಡು ವರ್ಷಗಳಿಂದ ಸಂಜಯ್-ಮಾನ್ಯತಾ ಆಪ್ತವಾಗಿದ್ದರು. ಫಎ.7ರಂದು ಅವರು ಗೋವಾದ ಪಂಚತಾರಾ ಹೋಟೆಲೊಂದರಲ್ಲಿ ಸಾಕ್ಷಿಗಳಾಗಿದ್ದ ಕೆಲವು ಆತ್ಮೀಯ ಮಿತ್ರರ ಸಮ್ಮುಖದಲ್ಲಿ ಕಾನೂನಿಗೆ ಅನುಗುಣವಾಗಿ ವಿವಾಹಿತರಾಗಿದ್ದರು.
ಅಂಧೇರಿಯಲ್ಲಿ ಸೋಮವಾರ ವಿವಾಹವಾದ ಬಳಿಕ ಹೊರಗೆ ಕಾಯುತ್ತಿದ್ದ ಪತ್ರಕರ್ತರಿಗೆ ಸಂಜಯ್ ದತ್ ಕೇಳಿದ್ದು: "ನನ್ನ ಮದುವೆಯಿಂದ ಈಗ ನಿಮಗೆ ಸಂತೋಷವಾಗಿದೆಯೇ?"! ಸಂಜಯ್ ಮತ್ತು ಮಾನ್ಯತಾ ಅವರಿಬ್ಬರೂ ಅತ್ಯಂತ ಸಂತೋಷದಿಂದಿದ್ದರು.
ಕಳೆದ ತಿಂಗಳಷ್ಟೇ ಸಂಜಯ್ ದತ್ ಮತ್ತು ಮಾಜಿ ಪತ್ನಿ ರಿಯಾ ಪಿಳ್ಳೈ ಅವರ ನಡುವಣ ವಿಚ್ಛೇದನ ಕುರಿತ ಪ್ರಕ್ರಿಯೆಗಳು ಕೊನೆಗೊಂಡಿದ್ದವು. ಇದಕ್ಕೆ ಮುನ್ನ ದತ್ ಅವರು ನಟಿ ರಿಚಾ ಶರ್ಮಾರನ್ನು ಮದುವೆಯಾಗಿದ್ದರು. ಮತ್ತು ಅವರಿಗೊಬ್ಬಳು ಮಗಳು ತೃಷಲಾ ಇದ್ದಾರೆ.