ಬಾಲಿವುಡ್‌ಗೆ ಬೆಂಬಿಡದೆ ಕಾಡುವ ವಿವಾದದ ಭೂತ
ಮುಂಬೈ, ಶನಿವಾರ, 16 ಫೆಬ್ರವರಿ 2008( 12:20 IST )
ಬಾಲಿವುಡ್ ಮತ್ತು ವಿವಾದಗಳು ಜತೆ ಜತೆಯಾಗಿ ನಡೆಯುವ ಎರಡು ವಿಷಯಗಳು, ಬಾಲಿವುಡ್‌ನ ಆದಿಯಿಂದ ಈ ವರೆಗೂ ಒಂದು ಸಿನೆಮಾ ಬಿಡುಗಡೆಯಾದಾಗ ವಿವಾದ ಅದರ ಬೆನ್ನು ಹತ್ತುತ್ತಲೇ ಇದೆ. ಇದೀಗ ಅದರ ಸಾಲಿಗೆ ಅಶುತೋಷ್ ಗೊವಾರಿಕರ್ ಅವರ 'ಜೋಧಾ -ಅಕ್ಬರ್' ಸೇರಿದೆ.
ಐತಿಹಾಸಿಕ ಸಿನಿಮಾವೊಂದು ಬಿಡುಗಡೆಯಾಗುತ್ತದೆ ಎಂದು ದೇಶದೆಲ್ಲೆಡೆ ಕಾಯುತ್ತಿರುವ ಅದೇ ಹೊತ್ತಿನಲ್ಲಿ, ರಾಜಸ್ತಾನದ ರಜಪೂತ ಸಮುದಾಯಕ್ಕೆ ಸೇರಿದ ಕೆಲವರು ಈ ಬೃಹತ್ ಬಜೆಟಿನ ಸಿನೆಮಾವನ್ನು ಪ್ರದರ್ಶಿಸಬಾರದು ಎಂದು ಪಟ್ಟು ಹಿಡಿದಿದ್ದಾರೆ.
ಅಶುತೋಷ್ ಗೊವಾರಿಕರ್ ಅವರು ಐತಿಹಾಸಿಕ ಸಿನೆಮಾವೊಂದರ ಮೂಲಕ ಜನರಲ್ಲಿ ಕಡಿಮೆಯಾಗುತ್ತಿರುವ ಇತಿಹಾಸ ಪ್ರಜ್ಞೆಯನ್ನು ಜಾಗೃತಗೊಳಿಸುತ್ತೇವೆ ಎಂದು ಹೇಳಿದರೆ. ರಾಜಾಸ್ತಾನದ ರಜಪೂತರು ಅಶುತೋಷ್ ಇತಿಹಾಸವನ್ನು ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.
ಅಶುತೋಷ್ ಸಿನೆಮಾವನ್ನು ಮಾಡುವ ಹೊತ್ತಿಗೆ ಮಹಾಪರಾಧ ಮಾಡಿಬಿಟ್ಟಿದ್ದಾರೆ ಎಂಬುದು ರಾಜಸ್ತಾನದ ರಜಪೂತರ ಅಂಬೋಣ . ಸಿನೆಮಾದಲ್ಲಿ ಅಕ್ಬರ್‌ಗೆ ಸೊಸೆಯನ್ನೇ ಹೆಂಡತಿಯನ್ನಾಗಿಸಿರುವುದು, ಮಹಿಳೆಯರಿಗೆ ಪವಿತ್ರ ಸ್ಥಾನ ನೀಡುವ ರಜಪೂತರ ಎದೆಯುರಿಸಿದೆ.
ಜೋಧಾ-ಅಕ್ಬರ್ ಸಿನೆಮಾವು ಮಖ್ಯವಾಗಿ ಜೋಧಾಳಿಗೆ ಅಕ್ಬರ್‍ನೊಂದಿಗೆ ಮದುವೆಯಾಗುವ ಪ್ರಸಂಗದ ಮೇಲೆ ನಡೆದಿದೆ. ಆದರೆ ರಜಪೂತರು ಉಳಿಸಿಕೊಂಡಿರುವ ಇತಿಹಾಸದಲ್ಲಿ ಜೋಧಾ, ಅಕ್ಬರ್‌ನ ಮಡದಿಯಲ್ಲ. ಅವಳು ರಜಪೂತ ರಾಜ ಉದಯ್ ಸಿಂಗ್ ಮಗಳು. ಅವಳು ಮದುವೆಯಾದದ್ದು ಅಕ್ಬರ್‌ನನ್ನಲ್ಲ, ಬದಲಾಗಿ ಅಕ್ಬರ್‌ನ ಪುತ್ರ ಸಲೀಮ್‌ನನ್ನು. ಎಷ್ಟು ದೊಡ್ಡ ಪ್ರಮಾದ ಎಂದು ವಾದಿಸಿರುವ ರಜಪೂತ ಸಮದಾಯ, ಹಲವಾರು ಇತಿಹಾಸಕಾರರನ್ನು ಇಟ್ಟುಕೊಂಡು ತಮ್ಮ ಮಾತನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಇದೇ ರೀತಿ ಮದುವೆಯಾದ ಮೇಲೆ ಮಾಧುರಿ ನಟಿಸಿದ ಮೊದಲ ಸಿನೆಮಾ 'ಆಜಾ ನಾಚಲೇ' ಕೂಡಾ ವಿವಾದಕ್ಕೀಡಾಯಿತು. ಈ ಸಿನೆಮಾದ ಟೈಟಲ್ ಸಾಂಗ್‌ಗೆ ದೊಡ್ಡ ಮಳೆಯಲ್ಲಿ ಮಾಧುರಿ ಕುಣಿದಿದ್ದರು. ಈ ಹಾಡಿನ ಸಾಹಿತ್ಯವನ್ನು ಆಕ್ಷೇಪಿಸಿದ ಹರ್ಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ದಲಿತ ಸಮುದಾಯದವರು, ಹಾಡಿನ ಸಾಹಿತ್ಯ ನಮ್ಮ ಸಮುದಾಯದವರಿಗೆ ಅವಮಾನ ಮಾಡಿದಂತಿದೆ ಎಂದು ಸಿನೆಮಾವನ್ನು ನಿಷೇಧಿಸಿ ಬಿಟ್ಟಿದ್ದರು. ಆ ಬಳಿಕ ಸಿನೆಮಾದ ನಿರ್ಮಾಪಕ ಆ ಹಾಡಿನ ಭಾಗವನ್ನೇ ತೆಗೆದು ಹಾಕಿದ ಬಳಿಕ ಚಿತ್ರ ಓಡಿತು. ಆದರೆ ಗಳಿಸಿದ್ದು ಅಷ್ಟಕಷ್ಟೇ.
ಕಳೆದ ವರ್ಷಾಂತ್ಯ ಬಿಡುಗಡೆಯಾದ 'ಓಂ ಶಾಂತಿ ಓಂ' ಸಣ್ಣ ಮಟ್ಟಿನ ವಿವಾದವನ್ನು ಮಾಡಿತು. ಇದರಲ್ಲಿ ಮನೋಜ್ ಕುಮಾರ್ ಎಂಬ ನಟನನ್ನು ಶಾರುಖ್ ಅನುಕರಿಸಿದ್ದರು. ಇದು ಕೊನೆಯಲ್ಲಿ ಶಾರುಖ್, ಮನೋಜ್ ಅವರ ಕ್ಷಮೆ ಕೇಳುವುದರ ಮೂಲಕ ತಣ್ಣಗೆ ಮುಕ್ತಾಯವಾಯಿತು.
ಅದಕ್ಕೆ ಮೊದಲು, ಅಮೀರ್ ಖಾನ್ ಅವರ 'ಮಂಗಲ್ ಪಾಂಡೆ' ವಿವಾದದ ಸುಳಿಯಲ್ಲಿ ಸಿಲುಕಿತ್ತು. ಸ್ವಾತಂತ್ರ್ಯ ಹೋರಾಟಗಾರರನನ್ನು ಕೀಳಾಗಿ ಚಿತ್ರಿಕರಿಸಲಾಗಿದೆ ಎಂದು ಕೆಲವರು ಕೋರ್ಟ್ ಮೆಟ್ಟಿಲು ಏರಿದ್ದರು.
ಅದೇ ವರ್ಷ 'ಜೋ ಬೋಲೇ ಸೋ ನಿಹಾಲೇ' ಎಂಬ ಚಿತ್ರವು ಸಿಖ್ಖರ ವಿರೋಧಕ್ಕೆ ಎಡೆಯಾಯಿತು. ತಮ್ಮ ಪವಿತ್ರ ಘೋಷಣೆಯನ್ನು ಸಿನೆಮಾ ಮಾಡಲು ಉಪಯೋಗಿಸಿರುವುದು ಅವರ ಮನಕ್ಕೆ ಬೇಸರ ತರಿಸಿತ್ತು.