ಕತ್ರಿನಾಳ ಸ್ಟುಡಿಯೋ 18ರ ಒಪ್ಪಂದದ ಕತೆ
ಬಾಲಿವುಡ್‌ನಲ್ಲಿ ಸದ್ಯಕ್ಕೆ ಕತ್ರಿನಾ ಕೈಫ್ ಎನ್ನುವ ನಟಿ ಪರಮ ಯಶಸ್ಸಿನಲ್ಲಿದ್ದಾರೆ. ಕಳೆದ ವರ್ಷವೂ ಅವರಿಗೆ ಇದೇ ಯಶಸ್ಸು ದಕ್ಕಿತ್ತು, ಅದಕ್ಕೆ ಅವರು ನಟಿಸಿದ ಚಿತ್ರಗಳಾದ 'ನಮಸ್ತೇ ಲಂಡನ್' 'ವೆಲ್‌ಕಮ್' ಮತ್ತು 'ಪಾರ್ಟ್‌ನರ್' ಗಳಿಸಿದ ಮನ್ನಣೆಯೇ ಕಾರಣ. ಹೀಗಿರುವಾಗ ಅವರಿಗೆ ಅವಕಾಶಗಳು ಇನ್ನೂ ಹೆಚ್ಚಾಗದೇ ಇರುತ್ತದಾ?
ಹೌದು. ಕತ್ರಿನಾ ಅವರು ಸ್ಟುಡಿಯೋ 18 ರೊಂದಿಗೆ ಎರಡು ಸಿನೆಮಾಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಬಾಲಿವುಡ್‌ನ ಸುದ್ದಿರಾಯ ಹೇಳಿದ್ದಾನೆ. ಅದಕ್ಕೆ ಅವರು ಪಡೆಯುವ ಮೊತ್ತವೂ ಸಣ್ಣದಲ್ಲ ಬರೋಬ್ಬರಿ ಆರು ಕೋಟಿ ರೂಪಾಯಿಗಳು.
ಈ ಒಪ್ಪಂದವನ್ನು ನಾವು ಕಣ್ಮುಚ್ಚಿ ನಂಬುವ ಹಾಗಿಲ್ಲ. ಯಾಕೆಂದರೆ, ಒಪ್ಪಂದ ಆಗಿರುವುದನ್ನು ಕತ್ರಿನಾ ಮತ್ತು ಸ್ಟುಡಿಯೋದ ಸಿಇಓ ಸಂದೀಪ್ ಭಾರದ್ವಾಜ್ ಖಡಾಖಂಡಿತವಾಗಿ ನಿರಾಕರಿಸುತ್ತಾರೆ. ಅವರಿಗೂ ಈ ಒಪ್ಪಂದವನ್ನು ಬಯಲು ಮಾಡುವ ಮನಸ್ಸು ಇರಲಿಕ್ಕಿಲ್ಲ!
ಕತ್ರಿನಾ ಈಗಾಗಲೇ ಸ್ಟುಡಿಯೋ 18 ರಲ್ಲಿ 'ವೆಲ್‌ಕಮ್' ಮತ್ತು 'ನಮಸ್ತೇ ಲಂಡನ್' ಚಿತ್ರಗಳಿಗೆ ಕೆಲಸ ಮಾಡಿರುವ ಕಾರಣ, ಈ ಒಪ್ಪಂದವನ್ನು ನಾವು ಅಲ್ಲಗೆಳೆಯುಂತಿಲ್ಲ. ಅದಕ್ಕಾಗಿ ಇನ್ನೊಂದಿಷ್ಟು ದಿನ ಕಾಯಬೇಕಾಗುತ್ತದೆ.
ಏನಿದ್ದರೂ, ಕತ್ರಿನಾರ ಮೂರು ಚಿತ್ರಗಳು ಇನ್ನೂ ಭರ್ಜರಿಯಾಗಿ ತೆರೆಕಾಣಬೇಕಷ್ಟೆ, ಈ ಸಾಲಿನಲ್ಲಿ 'ಸಿಂಗ್ ಇಸ್ ಕಿಂಗ್', 'ರೇಸ್' ಮತ್ತು 'ಯುವರಾಜಾ' ಸೇರಿದೆ . ಚಿತ್ರಗಳು ಕ್ಲಿಕ್ ಆಯಿತೆಂದರೆ 'ಕೂಲ್ ಕ್ಯಾಟ್' ಕತ್ರಿನಾ ಸಿಕ್ಕಿದ ಅವಕಾಶವನ್ನು ಖಂಡಿತಾ ಬಳಸಿಕೊಳ್ಳುತ್ತಾರೆ.