ದಕ್ಷಿಣ ಗೋವಾ ಉಪನೋಂದಣಿ ಅಧಿಕಾರಿಗಳ ಎದುರು ಘೋಷಣೆ ಮಾಡಿದ್ದ ಮಾನ್ಯತಾರೊಂದಿಗಿನ ತನ್ನ ವಿವಾಹವನ್ನು ಬಾಲಿವುಡ್ ನಟ ಸಂಜಯ್ ದತ್ ಹಿಂತೆಗೆದುಕೊಂಡಿದ್ದಾರೆ.
ಪೋರ್ಚುಗೀಸ್ ನಾಗರಿಕ ಸಂಹಿತೆ, 1867ರಡಿ ತಮ್ಮ ವಿವಾಹವನ್ನು ವಿಧಿವತ್ತಾಗಿಸಲು ತಾವು ಇಚ್ಛಿಸುವುದಿಲ್ಲ ಎಂದು ಸಂಜಯ್-ಮಾನ್ಯಾತಾ ಜೋಡಿ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.
ವಿವಾಹ ಘೋಷಣೆಯ ವೇಳೆ ಲಗತ್ತಿಸಿದ್ದ ಎಲ್ಲಾ ದಾಖಲೆಗಳನ್ನು ಹಿಂತೆಗೆಯಲಾಗಿದೆ ಮತ್ತು ಎಲ್ಲಾ ಕಾನೂನಿ ಪರಿಣಾಮಗಳಿಂದ ರದ್ದು ಪಡಿಸಲಾಗಿದೆ ಎಂದು ಪರಿಗಣಿಸಬೇಕು ಎಂದು ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ಸಂಪ್ರದಾಯ ಬದ್ಧವಾಗಿಯೂ ವಿವಾಹವಾಗಿರುವ ಈ ಜೋಡಿ ಈಗ ತಮ್ಮ ವಿವಾಹವನ್ನು 1954ರ ವಿಶೇಷ ವಿವಾಹ ಕಾಯ್ದೆಯಡಿ ನೋಂದಣಿ ಮಾಡಲು ಮುಂದಾಗಿದೆ. ಫೆ.7ರಂದು ಉಪ ನೋಂದಣಿ ಅಧಿಕಾರಿಗಳ ಎದುರು ವಿವಾಹ ಘೋಷಣೆ ವೇಳೆ ಮಾನ್ಯತಾ ಸಲ್ಲಿಸಿದ್ದ, ಗೋವಾದಲ್ಲಿ ವಾಸ್ತವ್ಯ ದೃಢಪತ್ರಿಕೆ ವಿವಾಹವನ್ನು ವಿವಾದಕ್ಕೆ ಸಿಲುಕಿಸಿತ್ತು. ಇದೀಗ ಈ ರಗಳೆಯೇ ಬೇಡ ಎಂದ ಜೋಡಿಗಳು ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಲು ಸಜ್ಜಾಗಿದ್ದಾರೆ. ಇದೇ ವಿವಾಹಕ್ಕೆ ಸಂಬಂಧಿಸಿದಂತೆ ಮುಂಬಯಿ ಕುಟುಂಬ ನ್ಯಾಯಾಲಯದಲ್ಲಿ ಮೆಹ್ರಾಜ್ ಶೇಕ್ ಎಂಬಾತ ಅರ್ಜಿಸಲ್ಲಿಸಿ ಮಾನ್ಯಾತಾ ತನ್ನ ಪತ್ನಿ ಎಂದು ಹೇಳಿದ್ದಾರೆ.
ಮಾನ್ಯತಾಳನ್ನು ತಾನು 2003ರಲ್ಲಿ ವಿವಾಹವಾಗಿದ್ದು, ಆಕೆ ತನ್ನಿಂದ ಔಪಚಾರಿಕವಾಗಿ ವಿಚ್ಛೆದನ ಪಡೆದಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ. ಅಲ್ಲದೆ, ತಮ್ಮ ಈ ಮದುವೆಯಿಂದ ಒಂದು ಗಂಡು ಮಗುವೂ ಜನಿಸಿದ್ದು, ಆ ಮಗು ಹೈದರಾಬಾದಿನಲ್ಲಿ ಮಾನ್ಯಾತಾಳ ತಾಯಿಯೊಂದಿಗಿದೆ, ಮಾನ್ಯಾತಾ ತನ್ನಿಂದ ತಲಾಕ್ ಪಡೆಯದಿರುವುದು ಮುಸ್ಲಿಂ ವಿವಾಹ ಕಾಯ್ದೆಗೆ ವಿರುದ್ಧವಾಗಿದೆ ಎಂದು ಶೇಕ್ ತನ್ನ ದೂರಿನಲ್ಲಿ ಹೇಳಿದ್ದಾರೆ.