ಚಕ್ ದೇ ಬಚ್ಚೇ ತೀರ್ಪುಗಾರಳಾಗಿ ರವೀನಾ
ಬಾಲಿವುಡ್‌ನ 90ರ ದಶಕದ ಮೋಹಕತಾರೆ, ಮಿಂಚುಳ್ಳಿ ರವೀನಾ ಟಂಡನ್, ಮದುವೆಯ ಬಳಿಕ ಗಂಡ ಮತ್ತು ಮಕ್ಕಳೊಂದಿಗೆ ವೈವಾಹಿಕ ಜೀವನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಬೆಳ್ಳಿ ತೆರೆಯಿಂದ ದೀರ್ಘಕಾಲ ದೂರವಿದ್ದ ಈಕೆ ಈಗ ಕಿರುತೆರೆಯನ್ನು ಪ್ರವೇಶಿಸಲಿದ್ದಾರೆ. ಆದರೆ ನಟಿಯಾಗಿ ಅಲ್ಲ, ತೀರ್ಪುಗಾರಳಾಗಿ. 9ಎಕ್ಸ್ ಎಂಟರ್ಟೈನ್‌ಮೆಂಟ್ ಆಯೋಜಿಸಿರುವ "ಚಕ್ ದೇ ಬಚ್ಚೇ" ಎನ್ನುವ ಬಾಲ ಪ್ರತಿಭೆಗಳ ಹಾಡು ಮತ್ತು ನೃತ್ಯ ಕಾರ್ಯಕ್ರಮದಲ್ಲಿ ರವೀನಾ ತೀರ್ಪುಗಾರಳಾಗಿ ಪಾಲ್ಗೊಳ್ಳುತ್ತಿದ್ದಾರೆ.
ಮಾರ್ಚ್ 28 ರಂದು ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರಗೊಳ್ಳಲಿದೆ. ನಗರ ಮತ್ತು ಸಣ್ಣ ಪಟ್ಟಣಗಳಿಂದ ಭಾಗವಹಿಸಲಿರುವ ಸುಮಾರು 24 ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಆಕೆ, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಮಕ್ಕಳ ಅದ್ಭುತ ಪ್ರಪಂಚಕ್ಕೆ ದ್ವಾರವಾಗಿದೆ. ಇದು ತನಗೆ ಹೊರೆ ಎಂದೆನಿಸಿಲ್ಲ. ಈ ದೇಶದಲ್ಲಿರುವ ಬಾಲಪ್ರತಿಭೆಗಳ ಬಗ್ಗೆ ನಾನು ಬೆರಗುಗೊಂಡಿದ್ದೇನೆ. ಆ ರೀತಿಯ ಮಕ್ಕಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನನಗೆ ಹೆಮ್ಮೆ ಎನಿಸಿದೆ ಎಂದರು. ಕಾರ್ಯಕ್ರಮದ ಅತಿಥಿಯಾಗಿ ಕಿರುತೆರೆ ನಟಿ ರೋಷನಿ ಚೋಪ್ರಾ ಹಾಗೂ ಭೋಜ್‌ಪುರಿ ನಟ ಮನೋಜ್ ತಿವಾರಿ ಪಾಲ್ಗೊಳ್ಳಲಿದ್ದಾರೆ.
ಪ್ರಮುಖ ಕೋರಿಯೋಗ್ರಾಫರ್ ಗಣೇಶ್ ಆಚಾರ್ಯ ಮತ್ತು ಸಂಗೀತ ನಿರ್ದೇಶಕರಾದ, ಸಲೀಮ್- ಸುಲೇಮಾನ್ ಇತರ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ.