"ದ ಅನ್ಫರ್ಗಟಬಲ್ ಟೂರ್"ಗೆ ಹಿಡಿದಿರುವ ಬಾಲಗ್ರಹ ಸದ್ಯಕ್ಕೆ ಮುಗಿಯುವಂತೆ ಕಾಣುವುದಿಲ್ಲ. ಅದು ಮತ್ತೊಂದು ಹಿನ್ನಡೆಯನ್ನು ಕಂಡಿದೆ. ಈ 'ಪ್ರವಾಸ'ದಲ್ಲಿ ಪಾಲ್ಗೊಳ್ಳುತ್ತಿದ್ದ ಲಾರಾದತ್ತ ಈಗ ಹಿಂದೆ ಸರಿದಿದ್ದಾರೆ. ಈ ಮೊದಲು ಅಕ್ಷಯ್ ಕುಮಾರ್ ಪ್ರವಾಸದಿಂದ ಹಿಂದೆ ಸರಿದಿದ್ದರು. ಈಗ ಲಾರಾಳ ಸರದಿ.
ಇದಕ್ಕೆ ಲಾರಾ ಹೇಳುವ ಕಾರಣವೆಂದರೆ ಮೊಣಕಾಲು ನೋವು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಆಕೆ, ನನಗೆ ಮೊಣಕಾಲು ಗಾಯವಾಗಿರುವ ಹಿನ್ನೆಲೆಯಲ್ಲಿ ಪ್ರವಾಸದಲ್ಲಿ ಭಾಗವಹಿಸುವ ಬಗ್ಗೆ ಡಾಕ್ಟರ್ರನ್ನು ಕೇಳಿದೆ. ವಿಶ್ರಾಂತಿ ಅಗತ್ಯ ಇರೋ ಈ ಅವಧಿಯಲ್ಲಿ ಟೂರ್ ಬಿಲ್ಕುಲ್ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ. ಮೂರು ತಿಂಗಳ ವಿಶ್ರಾಂತಿಗೂ ಸಲಹೆ ನೀಡಿದ್ದಾರೆ. ದುರಾದೃಷ್ಟವಶಾತ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಇದಕ್ಕಾಗಿ ನನಗೆ ಹೆಚ್ಚಿನ ಪಶ್ಚಾತ್ತಾಪ ಇದೆ. ಈ ವರ್ಷ ದೊಡ್ಡ ಆಕ್ಷನ್ ಚಿತ್ರದಲ್ಲಿ ಕೂಡ ಪಾಲ್ಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ಕಳೆದ ವರ್ಷ "ದ ಅನ್ಫರ್ಗಟಬಲ್ ಟೂರ್" ಅನಾವರಣಗೊಳಿಸಿದ್ದರು. ಮುಂದಿನ ತಿಂಗಳು ಪ್ರಪಂಚದಾದ್ಯಂತ ಪರ್ಯಟನೆ ಕೈಗೊಳ್ಳಲಿರುವ ಚಿತ್ರಗಣ್ಯರ ಈ ಕಾರ್ಯಕ್ರಮದಲ್ಲಿ ಅಮಿತಾಬ್, ಮಗ ಅಭಿಷೇಕ್, ಸೊಸೆ ಐಶ್ವರ್ಯ ಜೊತೆಯಲ್ಲಿ ಬಿಪಾಶಾ ಬಸು, ರಿತೇಶ್ ದೇಶ್ಮುಖ್ ಇರುತ್ತಾರೆ. ಇವರು ಪ್ರಪಂಚದ ಹಲವು ಭಾಗಗಳಲ್ಲಿ ಪ್ರದರ್ಶನಗಳನ್ನು ನೀಡಲಿದ್ದಾರೆ.