ಸ್ವರ್ಣ ಮಂದಿರದ ಸುತ್ತ ಮುತ್ತ ಸದಿಯಾ
ಚಿರಯೌವನೆ ರೇಖಾ ಮತ್ತು ಅಂದಕಾಲದ ಚಾಕಲೇಟ್ ಹೀರೋ ರಿಷಿ ಕಪೂರ್ ಅಭಿನಯದ ಸದಿಯಾ ಚಿತ್ರದ ಚಿತ್ರೀಕರಣ ಅಮೃತಸರದ ಸ್ವರ್ಣ ಮಂದಿರದ ಸುತ್ತ ಮುತ್ತ ನಡೆಯುತ್ತಿದೆ. ರಾಜ್ ಕನ್ವರ್ ನಿರ್ದೇಶನದ ಸದಿಯಾಕ್ಕಾಗಿ ಮಂದಿರದ ಆವರಣದಲ್ಲಿರುವ ಅಕಾಲಿತಕ್ತ್‌ನ ಸಿಖ್ ಪವಿತ್ರ ಪೀಠದ ಬಳಿಯೂ ಸಹ ಚಿತ್ರೀಕರಣ ನಡೆಸಲಾಯಿತು.
ಕೆನೆ ಬಣ್ಣದ ಸಲ್ವಾರ್ ಕಮೀಜ್ ಹಾಗೂ ದುಪಟ್ಟಾ ಧರಿಸಿದ್ದ ಎವ್ವರ್ ಗ್ರೀನ್ ಹೀರೋಯಿನ್ ರೇಖಾಳನ್ನು ನೋಡಲು ಜನರ ನೂಕುನುಗ್ಗಲು ಉಂಟಾಗಿತ್ತು.
ಇತರ ಯಾವುದೇ ಧಾರ್ಮಿಕ ಸ್ಥಳದ ಚಿತ್ರಿಕರಣದ ವೇಳೆ ಹತ್ತಿಕೊಳ್ಳುವ ವಿವಾದಗಳಂತೆಯೇ, ಈ ಸನ್ನಿವೇಶವೂ ಸಹ ವಿವಾದದಿಂದ ಮುಕ್ತವಾಗಿಲ್ಲ. ಸಿಖ್ ಪವಿತ್ರ ಜಲವನ್ನು ಅವರಿಗೆ ನೀಡಿದಾಗ ಕೆಲ ಮಂದಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ನಟನಟಿಯರು ಈ ಪವಿತ್ರ ಜಲವನ್ನು ಪರಸ್ಪರರ ಬಾಯಿಗೆ ಸುರಿದುಕೊಂಡದ್ದು ಕೆಲವರಲ್ಲಿ ಅಸಮಾಧಾನ ಹುಟ್ಟಿಸಿತು. ಇಂತಹ ಕ್ರಮವು ಸಿಕ್ ಧಾರ್ಮಿಕ ಸಂಹಿತೆಯ ಪ್ರಕಾರ ನಿಷಿದ್ಧವಾಗಿದೆ.
ದೇವಾಲಯದ ಧಾರ್ಮಿಕ ಶ್ರದ್ಧೆಗೆ ಮಾರುಹೋದ ರೇಖಾ, "ಇದೊಂದು ಜಾಗತಿಕ ಪವಿತ್ರ ಕ್ಷೇತ್ರವಾಗಿದೆ. ಇದು ಕೇವಲ ಒಂದು ಸಮುದಾಯದ ಮಾತ್ರ ಧಾರ್ಮಿಕ ಕೇಂದ್ರವಲ್ಲ" ಎಂದು ನುಡಿದರು.