ಅಸಂಪ್ರದಾಯಿಕ ಸಿನೇಮಾಗಳ ರಾಣಿ, ಸಹಜ ನಟನೆಯ ನಂದಿತಾದಾಸ್ ಪಾಕಿಸ್ತಾನಿ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ರಾಮ್‌ಚಂದ್ ಪಾಕಿಸ್ತಾನಿ ಸಿನಿಮಾದಲ್ಲಿ ಅವರು ನಟಿಸುವುದು ಮಾತ್ರವಲ್ಲದೆ ಹಾಡೊಂದನ್ನೂ ಹಾಡಿದ್ದಾರಂತೆ.
ಪಾಕಿಸ್ತಾನದ ಯುವ ನಿರ್ದೇಶಕಿ ಮೆಹ್ರೀನ್ ಜಬಾರ್ ನಿರ್ದೇಶನದ ಈ ಚಿತ್ರದಲ್ಲಿ ಪಾಕಿಸ್ತಾನದ ಕೆಲವು ಕಿರುತೆರೆಯ ತಾರೆಗಳೂ ನಟಿಸುತ್ತಿದ್ದಾರಂತೆ.
ನಿಜಕತೆಯ ಆಧಾರದ ಚಿತ್ರಕತೆಯನ್ನು ಸಿನಿಮಾ ಒಳಗೊಂಡಿದೆ ಎಂದು ನಂದಿತಾ ಹೇಳುತ್ತಾರೆ. ರಾಮ್‌ಚಂದ್ ಎಂಬ ಏಳು ವರ್ಷದ ಬಾಲಕನೊಬ್ಬ ತನ್ನ ತಂದೆ(ಪಾಕಿಸ್ತಾನದಲ್ಲಿ ನೆಲೆಯೂರಿರುವ ಹಿಂದೂ ದಲಿತ)ಯೊಡನೆ ಅಕಸ್ಮಾತ್ತಾಗಿ ಗಡಿ ದಾಟುತ್ತಾನೆ. ಚಿತ್ರ ಕಥೆಯು ಕಛ್ ಜೈಲಿನಲ್ಲಿ ತಂದೆ ಮಗನ ವಾಸ್ತವ್ಯ ಮತ್ತು ಪಾಕಿಸ್ತಾನದ ಪುಟ್ಟ ಹಳ್ಳಿಯಲ್ಲಿ ತನ್ನ ಪತಿ-ಪುತ್ರರು ಎಲ್ಲಿದ್ದಾರೆಂದು ತಿಳಿಯದ ತಾಯಿಯ ಯಾತನೆಯನ್ನು ಸಮಾನಾಂತರವಾಗಿ ಸಾಗಿಸುತ್ತದೆ.
ಚಿತ್ರದ ನಿರ್ದೇಶಕಿಯ ಕುರಿತು ಮೆಚ್ಚುಗೆ ಮಾತನ್ನಾಡುವ ದಾಸ್, ತಾನು ಅವರನ್ನು ಕಾರಾ ಚಿತ್ರೋತ್ಸವದಲ್ಲಿ ಭೇಟಿಯಾಗಿದ್ದು, ಬಳಿಕ ನಿಕಟ ಸ್ನೇಹಿತರಾದೆವೆಂದು ಹೇಳಿದ್ದಾರೆ. ಮೆಹ್ರೀನ್ ಅವರು ಬಹಳ ಬುದ್ಧಿವಂತೆ ಹಾಗೂ ಸೂಕ್ಷ್ಮ ಸ್ವಭಾವದ ನಿರ್ದೇಶಕಿ ಎಂಬುದು ದಾಸ್ ಸರ್ಟಿಫಿಕೇಟ್.
ಈ ಚಿತ್ರದಲ್ಲಿ ನಂದಿತಾ ದಾಸ್‌ಗೆ ಬಾಲಕ ರಾಮಚಂದ್‌ನ ತಾಯಿಯ ಪಾತ್ರ. ಪಾತ್ರದ ಹೆಸರು ಚಂಪಾ. ರಾಮಚಂದ್ ಪಾಕಿಸ್ತಾನಿ ಚಿತ್ರವು ನ್ಯೂಯಾರ್ಕಿನ ಟ್ರೈಬೆಕಾ ಚಿತ್ರೋತ್ಸವದಲ್ಲಿ ಪ್ರದರ್ಶನ ಗೊಳ್ಳಲಿದೆ.