ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ ರಾಣಿ ಖೇತಾನ್ ದೇಸಾಯ್ ಅನ್ನು ತಾನೇ ನಿರ್ದೇಶಿಸುವುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಮಾಜಿ ಭಾರತ ಸುಂದರಿ ಸುಶ್ಮಿತಾ ಸೇನ್. ಐತಿಹಾಸಿಕ ನಾಯಕಿ ಝಾನ್ಸಿರಾಣಿ ಲಕ್ಷ್ಮಿಬಾಯಿ ಸುಶ್ಮಿತಾರ ಆದರ್ಶ ಮಹಿಳೆಯಂತೆ.
ಖೇತಾನ್ ದೇಸಾಯ್ ಅವರೊಂದಿಗೆ ಸುಶ್ಮಿತಾ ಒಪ್ಪಂದ ಮಾಡಿಕೊಂಡಿದ್ದು, ದೇಸಾಯ್ ಸಿನಿಮಾದ ಕಾರ್ಯನಿರ್ವಾಹಕ ನಿರ್ಮಾಪಕರಾಗಲಿದ್ದಾರೆ. ದಿವಂಗತ ಮನಮೋಹನ್ ದೇಸಾಯಿಯವರ ಏಕೈಕ ಪುತ್ರನಾಗಿರುವ ಖೇತಾನ್, ಸುಶ್ಮಿತಾರ ಈ ಕನಸಿನ ಯೋಜನೆಗೆ ತನ್ನ ಸಿನೆಮೆಟಿಕ್ ಪರಿಣತಿಯ ಲೇಪ ಹಚ್ಚಲಿದ್ದಾರೆ.
ಸುಶ್ಮಿತಾ ತನ್ನ ಸಿನಿಮಾದ ನಿರ್ಣಾಯಕ ಯುದ್ಧದ ದೃಶ್ಯಗಳ ಚಿತ್ರೀಕರಣಕ್ಕಾಗಿ ತನ್ನ ಭಾರತ-ಬ್ರಿಟಿಷ್ ತಂಡವನ್ನು ಚೀನಕ್ಕೆ ಕರೆದೊಯ್ಯಲಿದ್ದಾರೆ. ಚಿತ್ರದಲ್ಲಿ ಬ್ರಿಟಿಷ್ ಹಾಗೂ ಭಾರತೀಯ ಕಲಾವಿದರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಹೊಂದುವಂತಹ ಸೂಕ್ತ ಕಲಾವಿದರನ್ನು ಒದಗಿಸಲು ಬ್ರಿಟಿಷ್ ಏಜೆನ್ಸಿ ವಿಲಿಯಮ್ ಮೋರಿಸ್ ಅನ್ನು ನೇಮಿಸಲಾಗಿದೆ.
ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಪತಿಗೂ, ರಾಣಿಗೂ ವಯಸ್ಸಿನ ಅಂತರ ಬಹುವಾಗಿರುವ ಕಾರಣ ಚಿತ್ರದಲ್ಲಿ ರೋಮಾಂಟಿಕ್ ದೃಶ್ಯಗಳ ಕುರಿತು ಸುಶ್ಮಿತಾಗೆ ಆಸಕ್ತಿ ಇಲ್ಲವಂತೆ.
ಇತ್ತೀಚೆಗೆ ಕ್ಯಾನ್ಸರ್ನಿಂದ ಮೃತರಾದ ತನ್ನ ಸ್ನೇಹಿತ ರಾಜೀವ್ ನಾರಾಯಣ್ಗೆ ಈ ಸಿನಿಮಾವನ್ನು ಸುಶ್ಮಿತಾ ಅರ್ಪಿಸಲಿದ್ದಾರೆ.