ನಾವು ಮದ್ವೆಯಾಗಿಲ್ಲ: ಸಂಜಯ್, ಮಾನ್ಯತಾ
ಮುಂಬಯಿ, ಬುಧವಾರ, 9 ಏಪ್ರಿಲ್ 2008( 10:29 IST )
ಬಾಲಿವುಡ್ ನಟ ಸಂಜಯ್ ದತ್ ಹಾಗೂ ಗೆಳತಿ ಮಾನ್ಯತಾ ತಾವು ಕಾನೂನುಬದ್ಧವಾಗಿ ಮದುವೆಯೇ ಆಗಿಲ್ಲ ಎಂದು ಹೇಳಿದ್ದಾರೆ!
ಇಲ್ಲಿನ ನ್ಯಾಯಾಲಯವೊಂದರೆದುರು ಹಾಜರಾದ ದತ್ ಈ ರೀತಿ ಹೇಳಿಕೆ ನೀಡುವ ಮೂಲಕ ಮದುವೆ ಕುರಿತಾದ ವಿವಾದಗಳಿಗೆ ಮತ್ತೊಂದು ತಿರುವು ನೀಡಿದರು.
ಮಾನ್ಯತಾ ತನ್ನಿಂದ ವಿಚ್ಛೇದನ ಪಡೆದಿಲ್ಲ ಎಂದು ಆಕೆಯ ಮೊದಲ ಪತಿ, ಈಗ ಜೈಲಿನಲ್ಲಿರುವ ಮೆರಾಜ್ ರಹಮಾನ್ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ, ದತ್ ಅವರಿಂದ ಈ ಸ್ಪಷ್ಟನೆ ಹೊರಬಿದ್ದಿದೆ. ಕಾನೂನಿನ ಕಣ್ಣಿಗೆ ತಮ್ಮ ವಿವಾಹ ಸಿಂಧು ಎಂದು ತೋರಿಸಬಹುದಾದ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಈ ಜೋಡಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದೆ.
ಕೆಲವು ದಿನಗಳ ಹಿಂದೆ ದತ್-ಮಾನ್ಯತಾ ಗೋವಾದಲ್ಲಿ ವಿವಾಹವಾಗಿ ಕುತೂಹಲ ಮೂಡಿಸಿದ್ದರು. ಆದರೆ ಅವರು ವಿವಾಹ ನೋಂದಣಿಗಾಗಿ ನೀಡಿದ್ದ ದಾಖಲೆಗಳು ತಪ್ಪು ಎಂಬುದು ಬಯಲಾದ ಹಿನ್ನೆಲೆಯಲ್ಲಿ, ಅವರ ವಿವಾಹವು ಕಾನೂನಿನ ಮುಷ್ಟಿಯಲ್ಲಿ ಸಿಲುಕಿದೆ.