ಜಯಾ ಬಚ್ಚನ್ ಸ್ವೀಟ್ ಸಿಕ್ಸ್‌ಟಿ
ಇಡೀ ಕುಟುಂಬವೇ ನಟನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೆಸರು ಪಡೆದಿರುವ ಬಚ್ಚನ್ ಕುಟುಂಬ, ತಮ್ಮ ಬಿಡುವಿಲ್ಲದ ಚಟುವಟಿಕೆಗಳನ್ನು ತೊರೆದು ಅಭಿಷೇಕ್‌ನನ್ನು ಸೇರಿಕೊಳ್ಳಲು ಮಿಯಾಮಿಗೆ ಹಾರಲಿದೆ. ಇದಕ್ಕೆ ಒದಗಿ ಬಂದಿರುವ ಸಂದರ್ಭ ಎಂದರೆ ಜಯಾ ಬಚ್ಚನ್ 60ನೇ ಹುಟ್ಟುಹಬ್ಬ. ಅಮೇರಿಕಾದ ಬಿಸಿಲ ನಗರಿ ಎಂದು ಹೆಸರು ಪಡೆದಿರುವ ಮಿಯಾಮಿಯಲ್ಲಿ, ಕರಣ್ ಜೋಹರ್ ನಿರ್ದೇಶನದ ದೋಸ್ತಾನಾ ಚಿತ್ರದಲ್ಲಿ ಅಭಿಷೇಕ್ ನಟಿಸುತ್ತಿದ್ದಾರೆ. ಇವರ ಜೊತೆ ಜಾನ್ ಅಬ್ರಾಹಂ ಮತ್ತು ಪ್ರಿಯಾಂಕ ಚೊಪ್ರಾ ನಟಿಸುತ್ತಿದ್ದಾರೆ.
ಏಪ್ರಿಲ್9, 1948ರಲ್ಲಿ ಜಬಲ್‌ಪುರದಲ್ಲಿ ಜನಿಸಿದ ಜಯಾರ ಮೂಲ ಹೆಸರು, ಜಯಾ ಬಾಧುರಿ. ಇವರು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತು ಪಡೆದವರು.
ತನ್ನ 15ನೇ ವಯಸ್ಸಿನಲ್ಲಿ ಸತ್ಯಜಿತ್ ರೇ ಅವರ ಮಹಾನಗರ್ ಚಿತ್ರದಿಂದ ನಟನೆ ಆರಂಭಿಸಿದರು. ಅವರು ತಮ್ಮ ಪ್ರಾಥಮಿಕ ಯಶಸ್ಸಿನ ನಂತರ ಧರ್ಮೇಂದ್ರ ಜೊತೆ ಗುಡ್ಡಿ ಚಿತ್ರದಲ್ಲಿ ನಟಿಸಿದರು. ಚಿತ್ರನಟನೊಬ್ಬನನ್ನು ಮನದಲ್ಲಿ ಆರಾಧಿಸುವ ಶಾಲಾ ಬಾಲಕಿಯ ಕಥೆ ಆ ಚಿತ್ರದ್ದು.
ಯಶಸ್ಸು ಅವರದ್ದಾಗುತ್ತಾ ಸಾಗಿತು. ಜವಾನಿ ದಿವಾನಿ, ಕೊಶಿಶ್, ಅನಾಮಿಕಾ, ಬಾವರ್ಚಿ ಅವರು ನಟಿಸಿದ ಯಶಸ್ವಿ ಚಿತ್ರಗಳು. ಅವರು ತಮ್ಮ ಪತಿ ಅಮಿತಾಬ್ ಬಚ್ಚನ್‌ರೊಂದಿಗೆ ಜಂಜೀರ್(1973), ಅಭಿಮಾನ್(1973), ಚುಪ್ಕೆ ಚುಪ್ಕೆ(1975) ಮತ್ತು ಶೋಲೆ(1975) ಯಲ್ಲಿ ನಟಿಸಿದ್ದರು.
ಜೂನ್ 3, 1973ರಲ್ಲಿ ಅಮಿತಾಬ್‌ರನ್ನು ವಿವಾಹವಾದ ಜಯಾ, ಶೋಲೆಯಲ್ಲಿ ನಟಿಸುತ್ತಿರುವ ಸಂದರ್ಭದಲ್ಲಿಯೇ ಮಗಳು ಶ್ವೇತಾ ಹುಟ್ಟಿದಳು. ಆ ನಂತರ ಕೆಲಕಾಲ ಚಿತ್ರರಂಗದಿಂದ ದೂರವಿದ್ದ ಜಯಾ 1981ರಲ್ಲಿ ಸಿಲ್‌ಸಿಲಾದಲ್ಲಿ ಅಮಿತಾಬ್‌ಗೆ ಎದುರಾಗಿ ನಟಿಸಿದರು. 1980 ಅವಧಿಯಲ್ಲಿ ಶೇಹೆನ್‌ಷಾಗೆ ಕತೆಯನ್ನು ಬರೆದರು. ಇದು ಚಿತ್ರವಾದಾಗ ಇದರಲ್ಲಿ ನಟಿಸಿದ್ದು ತಮ್ಮ ಪತಿ ಅಮಿತಾಬ್.
ಸುಮಾರು 18 ವರ್ಷಕಾಲ ಚಿತ್ರರಂಗದಿಂದ ದೂರ ಇದ್ದ ಜಯಾ 1998ರಲ್ಲಿ ಹಜಾರ್ ಚೌರಾಸಿ ಕಿ ಮಾ ಚಿತ್ರದಲ್ಲಿ ನಟಿಸಿದರು. 2000ದಲ್ಲಿ ಫಿಜಾ ಚಿತ್ರದಲ್ಲಿ, 2001ರಲ್ಲಿ ಕರಣ್ ಜೋಹರ್ ನಿರ್ದೇಶನದ ಕಭಿ ಖುಷ್ ಕಭಿ ಗಮ್ ಚಿತ್ರದಲ್ಲಿ ನಟಿಸಿದರು. ಆ ನಂತರ ಇದೇ ನಿರ್ದೇಶಕರ ಕಲ್ ಹೋ ನ ಹೋ(2003) ಚಿತ್ರದಲ್ಲಿ ಪ್ರೀತಿ ಜಿಂಟಾರ ತಾಯಿಯ ಪಾತ್ರದಲ್ಲಿ ನಟಿಸಿದರು ಮತ್ತು 2008ರ ಆಗಸ್ಟ್ 15ರಂದು ಬಿಡುಗಡೆಯಾಗಲಿರುವ ದ್ರೋಣದಲ್ಲಿ ಕೂಡ ನಟಿಸಿದ್ದಾರೆ.
ಚಿತ್ರರಂಗದಲ್ಲಿ ಉತ್ತಮ ಹೆಸರು ಗಳಿಸಿರುವ ಜಯಾ ಬಚ್ಚನ್ 60ರ ಸಂವತ್ಸರ ಕಾಲಿಡುತ್ತಿರುವ ಸಂದರ್ಭದಲ್ಲಿ ಚಿತ್ರರಂಗದ ಮಂದಿಯೂ ಸೇರಿದಂತೆ ಹಲವಾರು ಗಣ್ಯರು ಶುಭ ಹಾರೈಸಿದ್ದಾರೆ.